Advertisement

ದಕ್ಷಿಣ ಕನ್ನಡ, ಉಡುಪಿ: ಪ್ರಭಾರಿಗಳ ಕಾರ್ಯಭಾರ

09:59 AM Nov 26, 2019 | Sriram |

ಮಂಗಳೂರು: ಕರಾವಳಿಯ ಎರಡು ಮುಖ್ಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈಗ ಸುಮಾರು 30ಕ್ಕೂ ಹೆಚ್ಚು ಸರಕಾರಿ ಇಲಾಖೆಗಳಲ್ಲಿ ಪೂರ್ಣಾಧಿಕಾರದ ಅಧಿಪತಿಗಳೇ ಇಲ್ಲ. ಜವಾಬ್ದಾರಿಯನ್ನು “ಪ್ರಭಾರಿ’ಗಳೇ ನೋಡಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕರ್ನಾಟಕದ ವಾಣಿಜ್ಯ ಹೆಬ್ಟಾಗಿಲು ಮತ್ತು 2ನೇ ಅತೀ ದೊಡ್ಡ ನಗರ ಮಂಗಳೂರು. ಇದನ್ನು ಒಳಗೊಂಡಿರುವ ದಕ್ಷಿಣ ಕನ್ನಡದಲ್ಲಿ ಪ್ರಮುಖ ಇಲಾಖೆಗಳಿಗೆ ಸಾರಥಿಗಳಿಲ್ಲ.

ಜಿಲ್ಲೆಯಲ್ಲಿ 100ಕ್ಕೂ ಅಧಿಕ ಪ್ರಮುಖ ಇಲಾಖೆಗಳ ಜಿಲ್ಲಾ ಕಚೇರಿಗಳಿದ್ದು, ಆ ಪೈಕಿ 25ಕ್ಕೂ ಹೆಚ್ಚಿನವುಗಳ ಉಸ್ತುವಾರಿಯನ್ನು ಪ್ರಭಾರಿಗಳು ನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲೂ ಇದೇ ಕಥೆ. ಏಳಕ್ಕೂ ಹೆಚ್ಚು ಇಲಾಖೆಗಳು ಹೆಚ್ಚುವರಿ ಹೊಣೆಯಡಿ ಇವೆ. ಯಾವುದೇ ಇಲಾಖೆಯ ಮುಖ್ಯಸ್ಥರಿಗೆ ತನ್ನ ಇಲಾಖೆಯ ಕೆಲಸದ ಒತ್ತಡ, ಜವಾಬ್ದಾರಿಗಳು ಇದ್ದೇ ಇರುತ್ತವೆ. ಹೆಚ್ಚುವರಿಯಾಗಿ ಇತರ ಇಲಾಖೆಗಳ ಹೊಣೆ ಯನ್ನೂ ನೀಡಿದರೆ ಹೊರೆಯಾಗುತ್ತದೆ.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಆದರೆ ಆ ಇಲಾಖೆಯ ಸಹಾಯಕ ಆಯುಕ್ತರ ಹುದ್ದೆಯೇ ಖಾಲಿ ಇರುವುದು ಗಮನಾರ್ಹ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಪ್ರವಾಸೋದ್ಯಮ ಮುಖ್ಯ ಕ್ಷೇತ್ರ. ಆದರೆ ಇಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಉಡುಪಿಯಲ್ಲೂ ಇದೇ ಸ್ಥಿತಿ. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹುದ್ದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಕ್ರೀಡಾ ಇಲಾಖೆಯ ಉಪ ನಿರ್ದೇಶಕರು, ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಉಪ ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ವಕ್ಫ್ ಅಧಿಕಾರಿ, ಎಪಿಎಂಸಿ ಮಂಗಳೂರು ಕಾರ್ಯದರ್ಶಿ, ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ, ಮಹಿಳಾ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ, ಸಬ್‌ ರಿಜಿಸ್ಟ್ರಾರ್‌ ಕಚೇರಿ ಅಧಿಕಾರಿ, ಜಿಲ್ಲಾ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿ, ಸಮಾಜ
ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ, ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕ, ಭೂದಾಖಲೆಗಳ ಉಪನಿರ್ದೇಶಕ ಸೇರಿದಂತೆ ಸಾಲುಸಾಲು ಜವಾಬ್ದಾರಿ ಪ್ರಭಾರಿಗಳ ಕೈಯಲ್ಲಿದೆ.

Advertisement

ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯ ಉಪನಿರ್ದೇಶಕ, ಆಹಾರ ಇಲಾಖೆ, ಧಾರ್ಮಿಕ ದತ್ತಿ ಸಹಾಯ ಆಯುಕ್ತ, ಸಮಾಜ ಕಲ್ಯಾಣ ಖಾತೆ ಅಧಿಕಾರಿ, ಅಲ್ಪಸಂಖ್ಯಾಕ ಇಲಾಖೆ ಅಧಿಕಾರಿ ಹುದ್ದೆಗಳು ಖಾಲಿಯಿದ್ದು, ಪ್ರಭಾರಿಗಳಿದ್ದಾರೆ. ಉಡುಪಿ ಜಿಲ್ಲಾ ಆರ್‌ಟಿಒ ಹೊಣೆಗಾರಿಕೆಯನ್ನೂ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗೆ ವಹಿಸಲಾಗಿದೆ.

ಸಿಬಂದಿಯೂ ಇಲ್ಲ!
ಎಲ್ಲೆಲ್ಲಿ ಪೂರ್ಣಾವಧಿ ಅಧಿಕಾರಿ ಗಳಿಲ್ಲವೋ ಅಲ್ಲೆಲ್ಲ ಸಿಬಂದಿ ಕೊರತೆಯೂ ಇದೆ. ಇದರಿಂದಾಗಿ ಬಹುತೇಕ ಇಲಾಖೆಗಳ ಕಚೇರಿ ನಿರ್ವಹಣೆ ಚಿಂತಾಜನಕ ಸ್ಥಿತಿಯಲ್ಲಿದೆ. ಆರೋಗ್ಯ ಇಲಾಖೆ, ಸರಕಾರಿ ಆಸ್ಪತ್ರೆ, ಗಣಿ ಮತ್ತು ಭೂ ವಿಜ್ಞಾನ, ಕೆಎಸ್‌ಆರ್‌ಟಿಸಿ ಸಹಿತ ಹಲವೆಡೆ ಸಿಬಂದಿ ನೇಮಕ ಪೂರ್ಣಮಟ್ಟದಲ್ಲಿ ಆಗಿಲ್ಲ.

ಮಂಗಳೂರು ಮನಪಾಗೆ ಒಟ್ಟು 1,725 ಹುದ್ದೆಗಳಿಗೆ ಸರಕಾರದ ಮಂಜೂರಾತಿ ದೊರಕಿದ್ದರೆ 1 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. “ಮೂಡಾ’ದಲ್ಲಿಯೂ ಇದೇ ಸಮಸ್ಯೆ. ಜಿಲ್ಲಾಧಿಕಾರಿ ಕಚೇರಿ, ಜಿ.ಪಂ., ತಾ.ಪಂ.ಗಳಲ್ಲಿಯೂ ಕೆಲವು ಹುದ್ದೆಗಳು ಖಾಲಿಯಿದ್ದು, ಬಹುತೇಕ ಹುದ್ದೆಗಳು ತಾತ್ಕಾಲಿಕ ನೆಲೆಯಲ್ಲಿ ಭರ್ತಿಯಾದಂಥವು. ಪುರಸಭೆ, ನಗರ ಸಭೆ, ಪ.ಪಂ.ಗಳಿಗೂ ಈ ಸಮಸ್ಯೆ ಬಹುವಾಗಿ ಕಾಡುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದ್ಯ ಪ್ರಭಾರ ಜವಾಬ್ದಾರಿಯಲ್ಲಿದ್ದಾರೆ. ವಿಶೇಷವೆಂದರೆ ಅವರಿಗೇ ತುಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಪ್ರಭಾರ ರಿಜಿಸ್ಟ್ರಾರ್‌ ಜವಾಬ್ದಾರಿ ಕೂಡ ನೀಡಲಾಗಿದೆ. ಕೊಂಕಣಿ, ಅರೆಭಾಷೆ ಅಕಾಡೆಮಿಗಳಿಗೂ ಖಾಯಂ ರಿಜಿಸ್ಟ್ರಾರ್‌ಗಳಿಲ್ಲ.

4 ವರ್ಷಗಳಿಂದ ಆರ್‌ಟಿಒ ಪ್ರಭಾರ!
ರಾಜ್ಯದ ಎರಡನೇ ಅತೀ ದೊಡ್ಡ ಸಾರಿಗೆ ಕಚೇರಿಯಾದ ಮಂಗಳೂರು ಆರ್‌ಟಿಒಗೆ ಪೂರ್ಣಾವಧಿ ಸಾರಥಿ ಇಲ್ಲದೆ ನಾಲ್ಕು ವರ್ಷಗಳೇ ಕಳೆದಿವೆ. ಕೆಲವು ತಿಂಗಳಿಗೆ ಒಬ್ಬರಂತೆ ಸಹಾಯಕ ಸಾರಿಗೆ ಅಧಿಕಾರಿಗಳು ಪ್ರಭಾರವಾಗಿಯೇ ಕಾರ್ಯನಿರ್ವಹಿಸುವಂತಾಗಿದೆ.

ಜಿಲ್ಲೆ ಎರಡು, ಅಧಿಕಾರಿ ಒಬ್ಬ !
ದ.ಕ. ಜಿಲ್ಲಾ ಮಟ್ಟದ ಕೆಲವು ಇಲಾಖೆಗಳ ಅಧಿಕಾರಿಗಳಿಗೆ 2 ಜಿಲ್ಲೆಗಳ ಜವಾಬ್ದಾರಿ ನೀಡಿರುವುದರಿಂದ ಅವರು ಎರಡೂ ದೋಣಿಗಳಲ್ಲಿ ಪ್ರಯಾಣಿಸಬೇಕಾದ ಸ್ಥಿತಿ. ಮನಪಾ ಸಹಿತ ಹಲವೆಡೆ ಮುಖ್ಯ ಹುದ್ದೆಗಳಲ್ಲಿ ನಿವೃತ್ತರನ್ನು ಮುಂದುವರಿಸಲಾಗಿದೆ.

ಇಲಾಖೆಗಳ ಎಲ್ಲ ಸ್ತರಗಳಿಗೆ ಸಿಬಂದಿ ನೇಮಕದ ಬಗ್ಗೆ ನಿರ್ದಿಷ್ಟ ಮಾರ್ಗ ಸೂಚಿಗಳಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಅಗತ್ಯ ಇಲಾಖೆಗಳಲ್ಲಿ ಸಿಬಂದಿ ನೇಮಕ ಆಗದೆ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಸಿಎಂ ಜತೆಗೆ ಈ ಕುರಿತು ಮಾತನಾಡಿ, ನೇಮಕಾತಿ ಸಂಬಂಧ ಕ್ರಮ ಕೈಗೊಳ್ಳಲಾಗುವುದು
-ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next