Advertisement

Dakshina Kannada, Udupi ಮಳೆ ಇಳಿಮುಖ: ಕಡಲಬ್ಬರ ತೀವ್ರ , ಮೀನುಗಾರಿಕೆ ಶೆಡ್‌ ,ಮನೆ ಕುಸಿತ

01:29 AM Jul 21, 2024 | Team Udayavani |

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಶನಿವಾರ ದಿನವಿಡೀ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ.

Advertisement

ಮಂಗಳೂರಿನಲ್ಲಿ ಬೆಳಗ್ಗೆ, ಸಂಜೆ ಮಳೆಯಾ ಗಿದ್ದು, ರಾತ್ರಿ ಮುಂದುವರೆದಿದೆ. ಉಳಿದಂತೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯ ವಿವಿಧ ಭಾಗದಲ್ಲಿ ಸೃಷ್ಟಿಯಾಗಿದ್ದ ಕೃತಕ ನೆರೆ ಇಳಿಮುಖಗೊಂಡಿದೆ. ಸುಬ್ರಹ್ಮಣ್ಯ ದಲ್ಲಿ ಕಮಾರಧಾರಾ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲಿದೆ. ಹೆದ್ದಾರಿಯಲ್ಲಿದ್ದ ನೆರೆ ನೀರು ತೆರವುಗೊಂಡಿದೆ.

ಇಂದು ಆರೆಂಜ್‌ ಅಲರ್ಟ್‌
ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಜು.22ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕುಕ್ಕೆ: ಮಳೆ ಇಳಿಮುಖ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರ ದಲ್ಲಿ ಐದು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಇಳಿಮುಖವಾಗಿದೆ. ಇದರಿಂದಾಗಿ ಪ್ರವಾಹ ಸದೃಶವಾಗಿ ಹರಿ ಯುತ್ತಿದ್ದ ಕುಮಾರಧಾರಾ ಶಾಂತವಾಗಿ ನೀರು ಇಳಿಮುಖವಾಗುತ್ತಿದೆ. ದರ್ಪಣತೀರ್ಥ ಸೇತುವೆ ಸಂಚಾರಕ್ಕೆ ತೆರವುಗೊಂಡಿದೆ. ಗ್ರಾಮೀಣ ಭಾಗದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಕುಮಾರಧಾರಾದ ಸ್ನಾನಘಟ್ಟ ಶನಿವಾರವೂ ಮುಳುಗಡೆಯಾಗಿಯೇ ಇದೆ.

ಹರೇಕಳ: ಮನೆ ಕುಸಿತ
ಉಳ್ಳಾಲ: ಮನೆಮಂದಿ ರಾತ್ರಿ ವೇಳೆ ಮನೆಯೊಳಗಿದ್ದ ಸಂದರ್ಭ ಭಾರೀ ಮಳೆಗೆ ಮನೆಯ ಮಹಡಿ ಭಾಗಶಃ ಕುಸಿದುಬಿದ್ದಿದ್ದು, ದಂಪತಿ ಹಾಗೂ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

Advertisement

ಹರೇಕಳ ರಾಜಗುಡ್ಡೆ ಶಾಲೆಯ ಮಣಿಬೆಟ್ಟು ಎಂಬಲ್ಲಿ ವಸಂತ್‌ ಪೂಜಾರಿ ಎಂಬವರ ಮನೆ ಭಾಗಶ; ಕುಸಿದುಬಿದ್ದಿದ್ದು, ತಡರಾತ್ರಿ ಮಲಗಿದ್ದಾಗ ಹಂಚುಗಳು ಬೀಳಲು ಆರಂಭವಾಗುವ ಅಪಾಯದ ಮುನ್ಸೂಚನೆ ಅರಿತ ಮನೆಯವರು ಹೊರಗೋಡಿ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ. ಕೂಲಿ ಕಾರ್ಮಿಕರಾಗರುವ ವಸಂತ ಪೂಜಾರಿ ಅವರು ಆರ್ಥಿಕವಾಗಿ ಹಿಂದುಳಿದಿದ್ದು, ಸದ್ಯಕ್ಕೆ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಕಡಲಿನ ಅಬ್ಬರ
ಉಡುಪಿ ಜಿಲ್ಲೆಯಲ್ಲಿ ಶನಿವಾರ ಮಳೆ ಪ್ರಮಾಣ ತಗ್ಗಿದ್ದು, ಹಲವೆಡೆ ಸಾಧಾರಣ ಮಳೆಯಾಗಿದೆ. ಮೂರ್ನಾಲ್ಕು ದಿನಗಳಿಂದ ಬಿಡುವಿಲ್ಲದೆ ನಿರಂತರ ಸುರಿದಿದ್ದ ಮಳೆ ಶನಿವಾರ ಕಡಿಮೆಯಾಗಿತ್ತು. ಜಿಲ್ಲೆಯ ಸಮುದ್ರ ತೀರದಲ್ಲಿ ಕಡಲಿನ ಅಬ್ಬರ ಮುಂದುವರಿದಿದೆ.

ನೆರೆ, ಹಾನಿಯಿಂದ ಬಳಲಿದ್ದ ಕುಂದಾಪುರ, ಬೈಂದೂರು, ಉಡುಪಿ, ಕಾಪು ತಾಲೂಕು ವ್ಯಾಪ್ತಿಯ ಗ್ರಾಮಗಳು ಜನ ಜೀವನ ಸಹಜ ಸ್ಥಿತಿಗೆ ಮರಳಿವೆ. ತಗ್ಗು ಪ್ರದೇಶಗಳಲ್ಲಿ ನೆರೆ ನೀರು ಇಳಿಮುಖವಾಗಿದ್ದು, ಜಲಾವೃತಗೊಂಡಿದ್ದ ರಸ್ತೆಗಳು ಸುಗಮ ಸಂಚಾರಕ್ಕೆ ಮುಕ್ತವಾಗಿವೆ. ಬೆಳಗ್ಗೆ ಹಾಗೂ ಮಧ್ಯಾಹ್ನ ವೇಳೆ ಕುಂದಾಪುರ, ಉಡುಪಿ, ಕಾಪು, ಸಿದ್ದಾಪುರ, ಹೆಬ್ರಿ, ಕಾರ್ಕಳ, ಅಜೆಕಾರು, ಬ್ರಹ್ಮಾವರ, ಪಡುಬಿದ್ರಿ, ಬೆಳ್ಮಣ್‌, ಬೈಂದೂರು, ಹಿರಿಯಡಕ ಭಾಗದಲ್ಲಿ ಬಿಸಿಲು-ಮೋಡ ಕವಿದ ವಾತಾವರಣ ನಡುವೆ ಸಣ್ಣದಾಗಿ ಕೆಲಕಾಲ ಮಳೆಯಾಗಿದೆ.

ಜಿಲ್ಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲತೀರದ ನಿವಾಸಿಗಳಲ್ಲಿ ಆತಂಕ ದೂರವಾಗಿಲ್ಲ. ಕುಂದಾಪುರ, ಉಡುಪಿ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಮಲ್ಪೆ ಭಾಗದ ಸಮುದ್ರ ತೀರದಲ್ಲಿ ಎತ್ತರ ಗಾತ್ರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಕಡಲು ಕೊರೆತ ಪ್ರಮಾಣ ಹೆಚ್ಚಳವಾಗಿದ್ದು, ಉಡುಪಿ ಗುಜ್ಜರ್‌ಬೆಟ್ಟಿನಲ್ಲಿ ಅಲೆಗಳ ಹೊಡೆತಕ್ಕೆ ತೆಂಗಿನ ಮರಗಳು ಸಮುದ್ರಪಾಲಾಗಿವೆ. ಕುಂದಾಪುರ ತಾಲೂಕು ವ್ಯಾಪ್ತಿ 53 ಮನೆಗಳಿಗೆ ಹಾನಿಯಾಗಿದ್ದು, 21 ಕಡೆಗಳಲ್ಲಿ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 64 ಮನೆಗಳಿಗೆ 13 ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.

ಮೀನುಗಾರಿಕೆ ಶೆಡ್‌ ಭಾಗಶಃ ಧರಾಶಾಯಿ
ಪಡುಬಿದ್ರಿ: ನಡಿಪಟ್ಣ ಪ್ರದೇಶದ ಕಡಲ್ಕೊರೆತ ಸಮಸ್ಯೆ ಉಲ್ಬಣಿಸಿದ್ದು, ಅಪಾಯದ ಸ್ಥಿತಿಯನ್ನು ಎದುರಿಸುತ್ತಿದ್ದ ಮಹೇಶ್ವರೀ ಮಾಟುಬಲೆ ಫಂಡ್‌ನ‌ ಮೀನುಗಾರಿಕೆ ಶೆಡ್‌ನ‌ ಪಶ್ಚಿಮ ಬದಿಯ ಕೋಣೆಯು ಧರಾಶಾಯಿಯಾಗಿದೆ.

ಸ್ಥಳಕ್ಕೆ ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಅವರು ಕಾಪು ತಹಶೀಲ್ದಾರ್‌ ಡಾ| ಪ್ರತಿಭಾ, ಮೀನುಗಾರಿಕಾ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶೋಭಾ ಅವರೊಂದಿಗೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಫಂಡ್‌ನ‌ ತಂಡೇಲರಾದ ಅಶೋಕ್‌ ಸಾಲ್ಯಾನ್‌ ಅವರು ತಮ್ಮ ಈ ಮೀನುಗಾರಿಕೆ ಶೆಡ್ಡನ್ನು ಉಳಿಸುವತ್ತ ಪ್ರಯತ್ನಗಳು ಆಗಬೇಕಿದೆ ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next