ವೇಣೂರು : ಮನೆಯಂಗಳದಿಂದ ದಿಢೀರ್ ಆಗಿ ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೃತದೇಹ ಮನೆ ಸಮೀಪದ ಹೊಳೆನೀರಿನಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಜಂತಿಗೋಳಿ ಪರಾರಿ ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರಿ ಸುಚಿತ್ರಾ ಮತ್ತು ಸುಭಾಷ್ ದಂಪತಿ ಧೃತ್ವಿ ಅಸುನೀಗಿದ ಮಗು.
ಇದನ್ನೂ ಓದಿ : ಈರುಳ್ಳಿಗೆ ಕಾಡುತ್ತಿರುವ ಕೊಳೆರೋಗದಿಂದ ಮಣ್ಣಲ್ಲಿ ಮಣ್ಣಾಗುತ್ತಿರುವ ರೈತನ ಕಣ್ಣೀರು..!
ತಮ್ಮ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ಸುಚಿತ್ರಾ ಅವರು ತಾಯಿಯೊಂದಿಗೆ ಹುಲ್ಲುತರಲೆಂದು ಸನಿಹದ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ. ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೇ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದು, ಮಗುವಿನ ಸುಳಿವು ಪತ್ತೆಯಾಗಿರಲಿಲ್ಲ.ಮನೆಯಿಂದ ೧೦೦ ಮೀ. ಅಂತರದಲ್ಲಿ ಹೊಳೆಯೊಂದು ಹರಿಯುತ್ತಿದ್ದು, ಮಗು ಆ ಕಡೆಗೇನಾದರೂ ಹೋಗಿರಬಹುದೇ ಎಂಬ ಶಂಕೆ ಮೂಡಿತ್ತು.
ಬೆಳ್ತಂಗಡಿ ಅಗ್ನಿಶಾಮಕ ದಳ, ವಿವಿಧ ಕಡೆಯ ಮುಳುಗು ತಜ್ಞರು ಹಾಗೂ ಸ್ಥಳೀಯರು ತಡರಾತ್ರಿಯವರೆಗೂ ಹೊಳೆ ನೀರಿನಲ್ಲಿ ಹುಡುಕಾಟ ನಡೆಸಿ ಬಳಿಕ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ಮುಂದುವರಿಸಿದ್ದರು. ಈ ಸಂದರ್ಭ ಮನೆ ಸಮೀಪದ ಹೊಳೆಯಿಂದ ೫೦೦ ಮೀ. ಅಂತರದ ಹೊಳೆನೀರಿನಲ್ಲಿ ಮೃತದೇಹ ಪತ್ತೆಯಾಗಿದೆ. ಆಟವಾಡುತ್ತಾ ಮಗು ಹೊಳೆ ಬದಿಗೆ ತೆರಳಿ ಆಕಸ್ಮಿಕವಾಗಿ ನೀರಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ.
ಇದನ್ನೂ ಓದಿ : ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಕೋವಿಡ್ : ಹೊರ ರಾಜ್ಯದ ವಿದ್ಯಾರ್ಥಿಗಳಲ್ಲಿ ಸೋಂಕು