ಚಿಕ್ಕಬಳ್ಳಾಪುರ: ರಾಜ್ಯದ 52 ನಗರ ಸ್ಥಳೀಯ ಸಂಸ್ಥೆಗಳು ಮೇಲ್ದರ್ಜೆಗೇರಿಸುವಂತೆ ಕೋರಿ ರಾಜ್ಯ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಲ್ಲಿ ಹಾಸನ, ರಾಯಚೂರು, ಚಿಕ್ಕಬಳ್ಳಾಪುರ ಹಾಗೂ ಬೀದರ್ ಸಹಿತ 6 ನಗರಸಭೆಗಳು ಮಹಾ ನಗರಪಾಲಿಕೆಗಳಿಗೆ ಬೇಡಿಕೆ ಇಟ್ಟಿವೆ.
ರಾಜ್ಯ ಪೌರಾಡಳಿತ ನಿರ್ದೇಶನಾ ಲಯಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಪೈಕಿ 22 ಗ್ರಾಮ ಪಂಚಾಯತ್
ಗಳು, ಪಟ್ಟಣ ಪಂಚಾಯತ್‌ಗಳಾಗಿ ಹಾಗೂ 9 ಪುರಸಭೆಗಳು ನಗರ ಸಭೆಗಳಾಗಿ ಮೇಲ್ದರ್ಜೆಗೇರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ.
ರಾಜ್ಯದ ಹಲವು ಜಿಲ್ಲೆಗಳ ಉಸ್ತುವಾರಿ ಸಚಿವರು, ವಿವಿಧ ಕ್ಷೇತ್ರಗಳ ಶಾಸಕರು, ಸಂಘ, ಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ನಗರಾಭಿವೃದ್ಧಿ ಕೋಶದ ಹಿರಿಯ ಅಧಿಕಾರಿಗಳೇ ನಗರ ಸ್ಥಳೀಯ ಸಂಸ್ಥೆಗಳ ಬೆಳವಣಿಗೆ, ವಿಸ್ತಾರ ನೋಡಿ ಕೊಂಡು ಮೇಲ್ದರ್ಜೆಗೇರಿಸುವಂತೆ ಕೋರಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಎಲ್ಲದರ ಭವಿಷ್ಯ ಆರ್ಥಿಕ ಇಲಾಖೆ ಅನುಮತಿ ಮೇಲೆ ನಿಂತಿದೆ.
ರಾಜ್ಯದಲ್ಲಿ ಹಾಲಿ ಪಟ್ಟಣ ಪಂಚಾಯತ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಗದಗದ ಡಂಬಳ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬೀದರ್ ಜಿಲ್ಲೆಯ ಔರಾದ್, ಬಾಗಲಕೋಟೆ ಜಿಲ್ಲೆಯ ಬೀಳಗಿ ಹಾಗೂ ಚಿಕ್ಕಮಗಳೂರಿನ ಕಡೂರನ್ನು ಪುರಸಭೆಗಳಾಗಿ ಮೇಲ್ದ ರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಿದೆ.
22 ಗ್ರಾ.ಪಂ.ಗಳು ಯಾವುವು?
ಹಾಲಿ ಗ್ರಾಮ ಪಂಚಾಯತ್‌ಗಳಾಗಿರುವ ದಕ್ಷಿಣ ಕನ್ನಡದ ಪುದು, ವಿಜಯಪುರದ ತೊರವಿ, ಹಾಸನದ ರಾಮನಾಥಪುರ, ಅರಕಲ ಗೂಡು ತಾಲೂಕಿನ ಕೋಣನೂರು, ಬಾಣಾವಾರ, ಹಾವೇರಿಯ ತಡಸ, ಧಾರವಾಡದ ಸಂಶಿ, ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು, ಹೊಸಕೋಟೆಯ ಸಮೇತನಹಳ್ಳಿ, ಯಾದಗಿರಿಯ ವಡಗೇರಾ, ಬೆಳಗಾವಿಯ ತಲಕಾಡು, ಚಿಕ್ಕೋಡಿಯ ಅಂಕಲಿ, ಕೆರೂರು, ಹೀರೆಕೋಡಿ, ಖಡಕಲಾಟ, ಬೀದರ್‌ನ ಕಮಲಾನಗರ, ಹಲಸೂರು, ಉತ್ತರ ಕನ್ನಡದ ಗೋಕರ್ಣ, ಬಾಗಲಕೋಟೆಯ ಗುಡೂರ, ಕದಲಾಗಿ, ಕೊಡಗಿನ ಪೊನ್ನಂಪೇಟೆ ಹಾಗೂ ಕೊಪ್ಪಳದ ಹನುಮ ಸಾಗರವನ್ನು ಪಟ್ಟಣ ಪಂಚಾಯತ್‌ಗಳಾಗಿ ಮೇಲ್ದರ್ಜೆಗೇರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
– ಕಾಗತಿ ನಾಗರಾಜಪ್ಪ