ಮಂಗಳೂರು : ನಗರದಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಗೋಡೆ ಬರಹಕ್ಕೆ ಸಂಬಂಧಿಸಿ ಈಗಾಗಲೇ ಇಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಹಮ್ಮದ್ ಶಾರಿಖ್(22) ಮತ್ತು ಮಾಜ್ ಮುನೀರ್ ಅಹ್ಮದ್(21) ಬಂಧಿತರು. ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬಿ.ಕಾಂ ವಿದ್ಯಾರ್ಥಿಯಾಗಿದ್ದಾನೆ, ಮಾಜ್ ಎಂಬಾತನೂ ತೀರ್ಥಹಳ್ಳಿಯವನಾಗಿದ್ದು, ಅಂತಿಮ ವರ್ಷದ ಎಂ.ಟೆಕ್ ವಿದ್ಯಾರ್ಥಿಯಾಗಿದ್ದಾನೆ ಈ ಕುರಿತು ಮಂಗಳೂರಿನ ಕದ್ರಿ ಮತ್ತು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೊದಲು ಆರೋಪಿಗಳು ಬಂದರು ಠಾಣಾ ವ್ಯಾಪ್ತಿಯ ಕೋರ್ಟ್ ರಸ್ತೆಯಲ್ಲಿ ಬರೆದಿದ್ದರು ಆದರೆ ಇದನ್ನು ಯಾರೂ ಗಮನಿಸದ ಕಾರಣ ಜನರ ಗಮನಕ್ಕೆ ಬಂದಿರಲಿಲ್ಲ ಹೀಗಾಗಿ ಕದ್ರಿ ರಸ್ತೆಯಲ್ಲಿನ ಪ್ಲಾಟ್ ನ ಗೋಡೆಯಲ್ಲಿ ಬರೆದಿದ್ದು, ಅದು ಸಾರ್ವಜನಿಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಶಾರಿಖ್ ತೀರ್ಥಹಳ್ಳಿಯ ತನ್ನ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮತ್ತು ಮಾಜ್ ಅಂತಿಮ ವರ್ಷದ ಎಂ.ಟೆಕ್ ಮಾಡಿಕೊಂಡು ಮಂಗಳೂರಿನಲ್ಲಿ ಆನ್ ಲೈನ್ ಫುಡ್ ಡೆಲಿವರಿ ಮಾಡುತ್ತಿದ್ದ ಎನ್ನಲಾಗಿದೆ. ಇಬ್ಬರು ಆರೋಪಿಗಳು ಒಂದೇ ಊರಿನವರಾಗಿದ್ದು, ಗೋಡೆ ಬರಹ ಯಾವ ಉದ್ದೇಶಕ್ಕಾಗಿ ಬರೆದಿದ್ದರು ಎಂಬುದು ತನಿಖೆಯಿಂದ ತಿಳಿದುಬರಬೇಕಾಗಿದೆ.