Advertisement

ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ವೈಭವ

08:37 PM Nov 01, 2019 | Team Udayavani |

ಮಹಾನಗರ: ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.

Advertisement

ಮಂಗಳೂರು ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನೀತಿಸಂಹಿತೆ ಜಾರಿಯಾಗಿರುವ ಕಾರಣದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಜತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಭಾಷಣದಲ್ಲಿಯೂ ಸರಕಾರದ ಸಾಧನೆ-ಯೋಜನೆ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ಸಂಬಂಧಿತ ಯಾವುದೇ ವಿಚಾರವನ್ನು ಉಲ್ಲೇಖೀಸಲಿಲ್ಲ.

ಎರಡು ದಿನಗಳಿಂದ ನಗರದಲ್ಲಿ ಭಾರೀ ಮಳೆ ಆಗುತ್ತಿದ್ದ ಕಾರಣದಿಂದ ನೆಹರೂ ಮೈದಾನದ ನಾಲ್ಕೂ ಸುತ್ತ ಶೀಟ್‌ ಹಾಕಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಮಾತ್ರ ಮಳೆ ಬಾರದೆ ಕಾರ್ಯಕ್ರಮ ಸಾಂಗವಾಗಿ ನಡೆಯಿತು. ಬೆಳಗ್ಗೆ 9.05ಕ್ಕೆ ನೆಹರೂ ಮೈದಾನದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ಮುಜರಾಯಿ ಖಾತೆಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.

ಗಮನಸೆಳೆದ ಟ್ಯಾಬ್ಲೋ
ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜ್ಯೋತಿ ವೃತ್ತದಿಂದ ನೆಹರೂ ಮೈದಾನದ ವರೆಗೆ ಮೆರವಣಿಗೆ ನಡೆಯಿತು. ಮಲೇರಿಯಾ, ಡೆಂಗ್ಯೂ, ಮಂಗನ ಕಾಯಿಲೆ ನಿಯಂತ್ರಣ, ತಂಬಾಕು ನಿಯಂತ್ರಣದ ಬಗ್ಗೆ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಟ್ಯಾಬ್ಲೋ, ದ.ಕ. ಜಾನಪದ ಕಲೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಟ್ಯಾಬ್ಲೋ, ಕರ್ನಾಟಕ ಕಲಾ ವೈಭವ ಸಾರುವ ಸಾರ್ವಜನಿಕ ಶಿಕ್ಷಣ ಇಲಾಖೆ ಟ್ಯಾಬ್ಲೋ, ಅಡಿಕೆಯಿಂದ ಶೃಂಗಾರಗೊಂಡ ಭುವನೇಶ್ವರಿಯ ಮೂರ್ತಿ ಇರುವ ತೋಟಗಾರಿಕಾ ಇಲಾಖೆಯ ಟ್ಯಾಬ್ಲೋ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೆರವಣಿಗೆ ತಂಡ, ತುಳು ಸಾಹಿತ್ಯ ಅಕಾಡೆಮಿಯ ಹುಲಿ ವೇಷ ಮೆರವಣಿಗೆ ತಂಡ, ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ಇಲಾಖೆಯ ಟ್ಯಾಬ್ಲೋ, ವನ್ಯಜೀವಿಗಳನ್ನು ಸಂರಕ್ಷಿಸುವ ಅರಣ್ಯ ಇಲಾಖೆಯ ಟ್ಯಾಬ್ಲೋ, ಹಿಂದೂ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆಯ ಮೆರವಣಿಗೆ ತಂಡ, ಸ್ವತ್ಛತೆಯನ್ನು ಸಾರುವ ನಗರಾಭಿವೃದ್ಧಿ ಇಲಾಖೆಯ ಟ್ಯಾಬ್ಲೋ, ಮೂಡಾ ನೇತೃತ್ವದ ಭುವನೇಶ್ವರಿ ಟ್ಯಾಬ್ಲೋ ಮೆರವಣಿಗೆಯಲ್ಲಿ ಜನರ ಗಮನಸೆಳೆಯಿತು.

ಮೈದಾನದಲ್ಲಿ ಸಾಂಸ್ಕೃತಿಕ ವೈಭವ
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕನ್ನಡ ನಾಡು ನುಡಿಯ ಅಸ್ಮಿತೆಗೆ ಸಂಬಂಧಿಸಿದ ಕಾರ್ಯಕ್ರಮ ಗಮನಸೆಳೆಯಿತು. ಡೊಂಗರಕೇರಿಯ ಕೆನರಾ ಆಂಗ್ಲಮಾಧ್ಯಮ ಶಾಲೆ, ಉರ್ವ ಸೈಂಟ್‌ ಅಲೋಶಿಯಸ್‌ ಆಂಗ್ಲ ಮಾಧ್ಯಮ ಶಾಲೆ, ಉರ್ವ ಪೊಂಪೈ ಪ್ರೌಢಶಾಲೆ, ಕುಂಜತ್ತಬೈಲ್‌ನ ನೊಬಲ್‌ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.
ಮನಸೆಳೆದ ಪುಟಾಣಿಗಳ ಹುಲಿವೇಷ

Advertisement

ಕುಂಜತ್ತಬೈಲ್‌ನ ನೊಬಲ್‌ ಆಂ.ಮಾ. ಶಾಲೆಯ ಪುಟಾಣಿಗಳ ನೃತ್ಯದಲ್ಲಿ ಪುಟಾಣಿಗಳ ಹುಲಿವೇಷ ಕುಣಿತ ಎಲ್ಲರ ಗಮನಸೆಳೆಯಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಜಿಲ್ಲಾಡಳಿತದ ಅಧಿಕಾರಿಗಳು ಪುಟಾಣಿಗಳನ್ನು ಬೆನ್ನುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷ ನಗದು ಬಹುಮಾನ ನೀಡಿದರು.

ಮನಸೆಳೆದ ಪಥಸಂಚಲನ
ನೆಹರೂ ಮೈದಾನದಲ್ಲಿ ಆಕರ್ಷಕ ಕವಾಯತಿ ನಡೆಯಿತು. ವಿಟuಲ್‌ ಕೆ. ಶಿಂಧೆ ದಂಡನಾಯಕರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ 7ನೇ ಬೆಟಾಲಿಯನ್‌, ಸಿಎಆರ್‌ ತುಕಡಿ, ಮಂಗಳೂರು ನಗರ ಮಹಿಳಾ ಪೊಲೀಸ್‌ ತುಕುಡಿ, ಗೃಹರಕ್ಷಕ ದಳ, ಪೊಲೀಸ್‌ ಬ್ಯಾಂಡ್‌ ಡಿ.ಎ.ಆರ್‌. ಮಂಗಳೂರು, ಕೆ.ಎಸ್‌ಆರ್‌.ಪಿ ಪೊಲೀಸ್‌ ಬ್ಯಾಂಡ್‌, ಕರ್ನಾಟಕ ಅಗ್ನಿಶಾಮಕದಳ ಮಂಗಳೂರು ಘಟಕ, ಎನ್‌.ಸಿ.ಸಿ. ಸೀನಿಯರ್‌, ಆರ್‌ಎಸ್‌ಪಿ ಹುಡುಗಿಯರು, ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಭಾರತ್‌ ಸೇವಾದಳ, ಆರ್‌ಎಸ್‌ಪಿ ಹುಡುಗರ ತಂಡ, ಎನ್‌ಸಿಸಿ ಏರ್‌ವಿಂಗ್‌ ಜ್ಯೂನಿಯರ್‌, ಬಲ್ಮಠ ಮಹಿಳಾ ಪಿಯು ಕಾಲೇಜಿನ ಭಾರತ್‌ ಸೇವಾದಳ ಸೀನಿಯರ್‌ ತಂಡ ಭಾಗವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next