Advertisement

ದಕ್ಷಿಣ ಕನ್ನಡ: 630 ಮಂದಿಯ ತಪಾಸಣೆ

01:08 AM Mar 21, 2020 | Sriram |

ಮಂಗಳೂರು:ಕೋವಿಡ್‌ 19 ವೈರಸ್‌ ಹರಡದಂತೆ ತಡೆಯುವ ಸಲುವಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ಶುಕ್ರವಾರ 630 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ.

Advertisement

1,564 ಮಂದಿ ಈಗಾಗಲೇ ಮನೆಯಲ್ಲೇ ನಿಗಾದಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ 14 ಮಂದಿ ನಿಗಾದಲ್ಲಿದ್ದು, ವೆನ್ಲಾಕ್ ನಲ್ಲಿ ಯಾರೂ ಇಲ್ಲ. 10 ಮಂದಿ ಈಗಾಗಲೇ 28 ದಿನಗಳ ನಿಗಾ ಅವಧಿಯನ್ನು ಪೂರೈಸಿದ್ದು, ಆರೋಗ್ಯದಲ್ಲಿ ಚೇತರಿಕೆ ಉಂಟಾಗಿದೆ. 9 ಮಂದಿಯ ಗಂಟಲು ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ.

17 ಮಂದಿಯ ಗಂಟಲು ಸ್ರಾವ ಪರೀಕ್ಷಾ ವರದಿ ಲಭ್ಯವಾಗಿದ್ದು, ಯಾರಲ್ಲಿಯೂ ಕೋವಿಡ್‌ 19 ಸೋಂಕು ಪತ್ತೆಯಾಗಿಲ್ಲ. ಜ್ವರ, ಶೀತ, ಕೆಮ್ಮು ಮುಂತಾದ ಕಾರಣಗಳಿಂದ ಶುಕ್ರವಾರ ಒಟ್ಟು 5 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.

ಆನ್‌ಲೈನ್‌ ವ್ಯವಹಾರಕ್ಕೆ ಮನವಿ
ದ.ಕ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ಮುಂದುವರಿದಿದ್ದು, ಬ್ಯಾಂಕ್‌, ಭವಿಷ್ಯನಿಧಿ ಕಚೇರಿಗಳಿಗೆ ಭೇಟಿ ನೀಡುವುದನ್ನು ಮುಂದೂಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ ಸಂದೇಶ ರವಾನಿಸಿ ಕೋವಿಡ್‌ 19 ವೈರಸ್‌ ಭೀತಿ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕಿಗೆ ಆಗಮಿಸುವುದನ್ನು ಸ್ವಲ್ಪ ದಿನಗಳ ಕಾಲ ಆದಷ್ಟು ಕಡಿಮೆ ಮಾಡಬೇಕು. ಡಿಜಿಟಲ್‌ ಬ್ಯಾಂಕಿಂಗ್‌ನ್ನೇ ಹೆಚ್ಚು ಬಳಸಬೇಕು ಎಂದು ಮನವಿ ಮಾಡಿವೆ.

ಭವಿಷ್ಯನಿಧಿ ಕಚೇರಿಗೂ ಸಾರ್ವಜನಿಕರು ಭೇಟಿ ನೀಡದಿರುವುದು ಉತ್ತಮ. ಆನ್‌ಲೈನ್‌ ಮುಖಾಂತರ ವ್ಯವಹಾರ ಮಾಡಿ ಸ್ವಲ್ಪ ದಿನ ಕಾಲ ಸಹಕರಿಸಬೇಕೆಂದು ತಿಳಿಸಲಾಗಿದೆ. ಎಲ್‌ಐಸಿ ಸಂಸ್ಥೆಯೂ ಎಲ್ಲ ಗ್ರಾಹಕರಿಗೆ ಸಂದೇಶ ರವಾನಿಸಿ ವೈಯಕ್ತಿಕ ಸ್ವತ್ಛತೆ ಕಾಪಾಡಲು ಮನವಿ ಮಾಡಿದೆ.

Advertisement

ನ್ಯಾಯಬೆಲೆ ಅಂಗಡಿ
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಾ.22ರಂದು ಜಿಲ್ಲೆಯಲ್ಲಿ ಯಾವುದೇ ನ್ಯಾಯಬೆಲೆ ಅಂಗಡಿಗಳು ಕಾರ್ಯಾಚರಿಸುವುದಿಲ್ಲ. ಈ ದಿನದ ಬದಲಾಗಿ ಮಾ.24ರಂದು ಎಲ್ಲ ನ್ಯಾಯಬೆಲೆ ಅಂಗಡಿಗಳು ಕಾರ್ಯಾಚರಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ವಿದೇಶಿಯರಿಗೆ ಲಾಡ್ಜ್ ಕೊರತೆ
ನಗರದಲ್ಲಿ ವಿದೇಶಿಯರಿಗೆ ಲಾಡ್ಜ್ಗಳಲ್ಲಿ ತಂಗಲು ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಹಿಂದೆಯೇ ಮಂಗಳೂರಿಗೆ ಆಗಮಿಸಿದ್ದರೂ ಅವರಿಗೆ ರೂಮ್‌ ನೀಡಲು ನಿರಾಕರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್‌ ಕುಮಾರ್‌ ಹೆಗ್ಡೆ ಶಾನಾಡಿ ಅವರು ಲಾಡ್ಜ್ ಮಾಲಕ ಸಭೆ ನಡೆಸಿದರು.

ಪಾಸ್‌ಪೋರ್ಟ್‌ನ್ನು ತಪಾಸಣೆ ಮಾಡಬೇಕು. ಒಂದು ತಿಂಗಳ ಹಿಂದೆ ವಿದೇಶದಿಂದ ಆಗಮಿಸಿರುವವರಿಗೆ ಅವಕಾಶ ನೀಡಬೇಕು. 15 ದಿನಗಳ ಹಿಂದೆಯಷ್ಟೇ ಆಗಮಿಸಿದ್ದರೆ ಅಂತವರನ್ನು ಪರೀಕ್ಷೆಗೊಳಪಡಿಸಲು ಸೂಚಿಸಬೇಕು. ಅವರು ಒಪ್ಪದಿದ್ದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ಸೆಲೂನ್‌, ಬ್ಯೂಟಿಪಾರ್ಲರ್‌ ಬಂದ್‌
ಶನಿವಾರದಿಂದಲೇ ಉಭಯ ಜಿಲ್ಲೆಗಳಲ್ಲಿ ಎಲ್ಲ ಬ್ಯೂಟಿಪಾರ್ಲರ್‌ ಮತ್ತು ಸೆಲೂನ್‌ಗಳು ತಾತ್ಕಾಲಿಕವಾಗಿ ಬಂದ್‌ ಆಗಲಿವೆ.

ಆರ್‌ಟಿಒ: ದೈನಂದಿನ ಸೇವೆ ಮೊಟಕು
ಮಂಗಳೂರು/ಉಡುಪಿ: ಕೋವಿಡ್‌ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕಚೇರಿಯಲ್ಲಿ ಜನದಟ್ಟನೆ ನಿವಾರಿಸುವುದು ಹಾಗೂ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳೂರು, ಪುತ್ತೂರು, ಉಡುಪಿ ಹಾಗೂ ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ಮೊಟಕುಗೊಳಿಸಲಾಗಿದೆ.

ವಾಹನ ಚಾಲನಾ ಕಲಿಕಾ ಅನುಜ್ಞಾ ಪತ್ರ ನೀಡಿಕೆ ಸಂಪೂರ್ಣವಾಗಿ ನಿಬಂìಧಿಸಲಾಗಿದೆ. ಎಪ್ರಿಲ್‌ 15ರ ವರೆಗೆ ಸಿಂಧುತ್ವ ಹೊಂದಲಿರುವ ಕಲಿಕಾ ಚಾಲನಾ ಅನುಜ್ಞಾ ಪತ್ರಗಳ ಅಭ್ಯರ್ಥಿಗಳು ಮಾತ್ರ ಕಾಯಂ ಚಾಲನಾ ಅನುಜ್ಞಾ ಪತ್ರಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಮಾ. 20ರಿಂದ ಮುಂದಿನ ಆದೇಶದವರೆಗೆ ಯಾವುದೇ ಕಲಿಕಾ ಚಾಲನಾ ಅನುಜ್ಞಾ ಪತ್ರ ಮತ್ತು ಖಾಯಂ ಚಾಲನಾ ಅನುಜ್ಞಾ ಪತ್ರಗಳಿಗಾಗಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ನಿಬಂìಧಿಸಲಾಗಿದೆ. ವಾಹನ ಚಾಲನಾ ಅನುಜ್ಞಾ ಪತ್ರದ ನವೀಕರಣ-ನಿರ್ಬಂಧವು ಅನ್ವಯಿಸುದಿಲ್ಲ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟನೆತಿಳಿಸಿದೆ.

ಮಂಗಳೂರು: ದ. ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ .ಪೊನ್ನುರಾಜ್‌ ಅವರು ಗುರುವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ವೈದ್ಯಕೀಯ ತಪಾಸಣ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಜಿಲ್ಲಾ ಅರೋಗ್ಯಾಧಿಕಾರಿ ಡಾ|ರಾಜೇಶ್‌, ಮಂಗಳೂರು ಉಪವಿಭಾಗಾಧಿಕಾರಿ ಮದನ್‌ ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next