ಮಂಗಳೂರು: ಮಂಗಳೂರಿನ ಏಳನೇ ಕೆಎಸ್‌ಆರ್‌ಪಿ ಬೆಟಾಲಿಯನ್ ಕಮಾಂಡೆಂಟ್ ಆಗಿದ್ದ ಕಮಾಂಡೆಂಟ್ ಕೃಷ್ಣಪ್ಪ ಅವರನ್ನು ಅಕ್ರಮ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್. ಅವರು ತೀರ್ಪು ನೀಡಿದ್ದಾರೆ.
1991ರ ಬ್ಯಾಚ್‌ನ ಅಧಿಕಾರಿಯಾಗಿದ್ದ ಕೃಷ್ಣಪ್ಪ ಅವರ ಮನೆ ಮತ್ತು ಕಚೇರಿಗೆ 2006ನೇ ಇಸವಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅನಂತರ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಿದಾಗ ಸುಮಾರು 87 ಲಕ್ಷ ರೂ.ಗಿಂತಲೂ ಅಧಿಕವಾದ ಆಸ್ತಿ ಪಾಸ್ತಿ ಹೊಂದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಸನ್ನ ವಿ. ರಾಜ್ ಅವರು ತನಿಖೆ ನಡೆಸಿ ಡಾ.ಪ್ರಭುದೇವ ಮಾನೆ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಕೃಷ್ಣಪ್ಪ ಅವರು ಮೂಲತಃ ಹಾವೇರಿ ಜಿಲ್ಲೆಯ ಖಂಡೇರಾಯನ ಹಳ್ಳಿಯವರಾಗಿದ್ದು, ಖಂಡೇ ರಾಯನ ಹಳ್ಳಿ ಮತ್ತು ದಾವಣ ಗೆರೆಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದರು. ಕೆಎಸ್‌ಆರ್‌ಪಿ ಅಧಿಕಾರಿಯಾಗುವ ಪೂರ್ವದಲ್ಲಿ ಕೇಂದ್ರ ಸರಕಾರದ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಕೃಷ್ಣಪ್ಪ ಅವರ ಪತ್ನಿಗೆ ಮದುವೆ ಸಂದರ್ಭದಲ್ಲಿ ತವರು ಮನೆಯವರು ಚಿನ್ನ, ಬೆಳ್ಳಿ ಅಲ್ಲದೆ ಸ್ಥಿರಾಸ್ತಿಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು. ಈ ಎಲ್ಲ ವಿಚಾರಗಳನ್ನು ಕೃಷ್ಣಪ್ಪ ಅವರು ಪ್ರತಿವರ್ಷ ಸರಕಾರಕ್ಕೆ ಸಲ್ಲಿಸುವ ಆಸ್ತಿ ಮತ್ತು ದಾಯತ್ವ ಪಟ್ಟಿಯಲ್ಲಿ ತಿಳಿಸಿದ್ದರೂ ಕೂಡ ಈ ಆದಾಯಗಳನ್ನು ಪರಿಶೀಲಿಸದೆ ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಕೆಪಿಎಸ್ ಅಧಿಕಾರಿಯಾಗಿದ್ದ ಕೃಷ್ಣಪ್ಪ ಅವರು ಮುಂದೆ ಐಪಿಎಸ್ ಅಧಿಕಾರಿಯಾಗಿ ಪದೋನ್ನತಿ ಗೊಳ್ಳುವುದನ್ನು ತಪ್ಪಿಸುವ ಉದ್ದೇಶ ದಿಂದ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕೃಷ್ಣಪ್ಪ ಅವರ ನ್ಯಾಯವಾದಿ ಪಿ.ಪಿ. ಹೆಗ್ಡೆ ಅಸೋಸಿಯೇಟ್ಸ್‌ನ ರಾಜೇಶ್ ಕುಮಾರ್ ಅಮ್ಟಾಡಿ ಅವರು ವಾದಿಸಿದ್ದರು.