Advertisement

Dakshina Kannada: ಒಬ್ಬೊಬ್ಬ ವಿಎಒಗಳಿಗೆ ಐದಾರು ಗ್ರಾಮಗಳ ಹೊಣೆ!

01:18 AM Aug 25, 2024 | Team Udayavani |

ಬಂಟ್ವಾಳ: ಗ್ರಾಮ ಆಡಳಿತ ಅಧಿಕಾರಿ(ವಿಎಒ)ಗಳ ಕೊರತೆಯ ಕಾರಣದಿಂದ ಒಬ್ಬರೇ ಐದಾರು ಗ್ರಾಮಗಳ ಹೊಣೆ ಹೊರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ 286 ಗ್ರಾಮ ವೃತ್ತಗಳಿಗೆ ಸದ್ಯಕ್ಕೆ 205 ವಿಎಒ ಗಳಿದ್ದರೂ ಇವರಲ್ಲಿ 66 ಮಂದಿ ಕಂದಾಯ ಇಲಾಖೆ ಕಚೇರಿ ಗಳಿಗೆ ನಿಯೋಜಿತ ಜಿಲ್ಲೆಯ 422 ಗ್ರಾಮಗಳನ್ನು ಕೇವಲ 138 ಮಂದಿ ವಿಎಒ ಗಳು ನೋಡಿಕೊಳ್ಳಬೇಕಿದೆ.

Advertisement

ನಿವೇಶನ, ಪ್ರಾಕೃತಿಕ ವಿಕೋಪ, ಮಾಸಾಶನ, ಹಲವು ಬಗೆಯ ಸಮೀಕ್ಷೆಗಳು, ಚುನಾವಣೆ- ಹಲವು ಹೊಣೆಗಳು ಈ ಅಧಿಕಾರಿಗಳಿವೆ. ದ.ಕ. ಜಿಲ್ಲೆಯಲ್ಲಿ 286 ಗ್ರಾಮ ವೃತ್ತ(ವಿಲೇಜ್‌ ಸರ್ಕಲ್‌)ಗಳಿದ್ದು, ಒಂದೊಂದು ವೃತ್ತಗಳಿಗೆ ಒಬ್ಬರು ವಿಎಒ ಗಳಿರಬೇಕು. ಭೂಮಿ ಕೇಂದ್ರವೂ ಸಹಿತ ಜಿಲ್ಲೆಗೆ ಒಟ್ಟು 325 ವಿಎಒ ಗಳ ಹುದ್ದೆ ಮಂಜೂರಾಗಿದ್ದು, ಸದ್ಯಕ್ಕೆ 91 ಹುದ್ದೆಗಳು ಖಾಲಿ ಇವೆ. ಅಂದರೆ ಗ್ರಾಮ ವೃತ್ತಗಳ ಪೈಕಿ 81 ಹಾಗೂ ಭೂಮಿ ಕೇಂದ್ರದ ಪೈಕಿ 10 ವಿಎಒ ಹುದ್ದೆಗಳು ಖಾಲಿ ಇವೆ.

ಈ ಮಧ್ಯೆ ಕೇಸ್‌ ವರ್ಕರ್‌ಗಳು ಇಲ್ಲ ಎನ್ನುವ ಕಾರಣಕ್ಕೆ ವಿಎಒಗಳನ್ನೇ ಡಿಸಿ ಕಚೇರಿ, ಎಸಿ ಕಚೇರಿ, ತಾಲೂಕು ಕಚೇರಿಗಳಿಗೆ ನಿಯೋಜಿಸಿರುವ ಪರಿಣಾಮ ಗ್ರಾಮಗಳಲ್ಲಿ ಕೆಲಸ ಮಾಡುವ ವಿಎಒಗಳ ಒತ್ತಡ ಹೆಚ್ಚಾಗಿದೆ. ಹೀಗೆ ನಿಯೋಜಿತರಾದವರು ಗ್ರಾಮ ಗಳಿಗೆ ತೆರಳಬೇಕಾದ ಒತ್ತಡವೂ ಇದೆ.

ಕೆಲವು ದಿನಗಳ ಹಿಂದೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ದ.ಕ.ಜಿಲ್ಲಾ ಘಟಕವು ಜಿಲ್ಲಾಧಿಕಾರಿ ಮುಲ್ಲೈ  ಮುಗಿಲನ್‌ ಅವರನ್ನು ಭೇಟಿಯಾಗಿ, ಬರೀ 138 ಮಂದಿ ವಿಎಒಗಳಿಗೆ ಜಿಲ್ಲೆಯ ಎಲ್ಲ ಗ್ರಾಮಗಳನ್ನು ನಿರ್ವಹಿಸಲು ಕಷ್ಟ. ಕನಿಷ್ಠ ಪಕ್ಷ ಕೇಸ್‌ ವರ್ಕರ್‌ಗಳು ಇಲ್ಲ ಎಂಬ ಕಾರಣಕ್ಕೆ ಕಚೇರಿಗಳಿಗೆ ನಿಯೋಜಿಸಲಾದ ವಿಎಒಗಳನ್ನಾದರೂ ಕ್ಷೇತ್ರಕ್ಕೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ 1,887ಹುದ್ದೆ ಖಾಲಿ
ರಾಜ್ಯದಲ್ಲಿ ವಿಎಒಗಳ ಒಟ್ಟು 9,839 ಮಂಜೂರು ಹುದ್ದೆಗಳಾಗಿದ್ದು, ಈ ಪೈಕಿ 1,887 ಹುದ್ದೆಗಳು ಖಾಲಿ ಇವೆ. ಉಡುಪಿಯಲ್ಲಿ 215 ರಲ್ಲಿ 41 ಹುದ್ದೆಗಳು ಖಾಲಿಯಿದ್ದರೆ, ಕೊಡಗಿನಲ್ಲಿ 131ರಲ್ಲಿ 10 ಖಾಲಿಯಿವೆ.

Advertisement

ಸಾವಿರ ಹುದ್ದೆ ಭರ್ತಿಗೆ ಪ್ರಕ್ರಿಯೆ
ರಾಜ್ಯದಲ್ಲಿ ಪ್ರಸ್ತುತ ಒಂದು ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಪೈಕಿ ಕೊಡಗಿಗೆ 6, ಉಡುಪಿಗೆ 22 ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ 50 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ವಿಎಒ ನೇಮಕ ಪ್ರಕ್ರಿಯೆ ಆರಂಭ
“ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಎಒಗಳಲ್ಲಿ ಸಾಧ್ಯವಾದಷ್ಟು ಮಂದಿಯನ್ನು ಗ್ರಾಮಗಳಿಗೆ ಕಳುಹಿಸಿ ಕೊಟ್ಟಿದ್ದೇವೆ. ಉಳಿದಂತೆ ಜಿಲ್ಲೆಯಲ್ಲಿ ಖಾಲಿ ಇರುವ 90ರಷ್ಟು ಎವಿಒಗಳ ನೇಮಕಕ್ಕೆ ಸಂಬಂಧಿಸಿ ಈಗಾಗಲೇ ರಾಜ್ಯಮಟ್ಟದಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಅದರ ಬಳಿಕ ಎಲ್ಲ ಹುದ್ದೆಗಳು ಭರ್ತಿಯಾಗಲಿವೆ.” – ಡಾ| ಜಿ. ಸಂತೋಷ್‌ಕುಮಾರ್‌ , ಅಪರ ಜಿಲ್ಲಾಧಿಕಾರಿಗಳು, ದ.ಕ.ಜಿಲ್ಲೆ

ಡಿಸಿಯಿಂದ ಪೂರಕ ಸ್ಪಂದನೆ
“ವಿವಿಧ ಕಚೇರಿಗಳಲ್ಲಿರುವ ಒಂದಷ್ಟು ಎಎಒಗಳನ್ನು ಗ್ರಾಮಗಳಿಗೆ ಕಳುಹಿಸಿ ಕೊಡಲು ಡಿಸಿಯವರಿಗೆ ಮನವಿ ಮಾಡಲಾಗಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಅದರ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಬಗ್ಗೆ ಎಡಿಸಿಯವರು ಕೂಡ ತಾಲೂಕು ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ.”
ಸಂತೋಷ್‌ ಕೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ದ.ಕ.ಜಿಲ್ಲಾ ಘಟಕ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next