Advertisement
ಬಂದೂಕು ಲೈಸನ್ಸ್‌ಗಳ ಪರಿಶೀಲನೆ ಈಗಾಗಲೇ ನಡೆಸಲಾಗಿದ್ದು, ಶೇ. 99ರಷ್ಟು ಪೂರ್ತಿಗೊಂಡಿದೆ. ಅಕ್ರಮ ಮದ್ಯ ತಯಾರಿ ಮತ್ತು ಮಾರಾಟದ ವಿರುದ್ಧ ದಾಳಿ ನಡೆಸಲಾಗುತ್ತಿದೆ. ರೌಡಿಗಳು, ಮದ್ಯ ಮಾರಾಟಗಾರರು ಮತ್ತು ಮತೀಯ ಗೂಂಡಾಗಳ ವಿರುದ್ಧ ಕಾರ್ಯಾಚರಣೆ ಆರಂಭವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ.ಆರ್. ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮಂಗಳೂರು ನಗರ ಸಿಸಿಬಿ ಇನ್ಸ್‌ಪೆಕ್ಟರ್ ಆಗಿದ್ದ ಸುನಿಲ್ ನಾಯ್ಕ ಈಗ ಡಿಸಿಐಬಿಗೆ ವರ್ಗಾವಣೆಗೊಂಡಿದ್ದು, ಅವರು ಈ ನಿಗ್ರಹ ಪಡೆಯ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿಗೊಂಡಿದ್ದಾರೆ. ಇನ್ನುಳಿದಂತೆ ಮೂವರು ಪಿಎಸ್‌ಐಗಳು ಮತ್ತು ಎಂಟು ಮಂದಿ ಸಿಬಂದಿ ಈ ತಂಡದಲ್ಲಿದ್ದಾರೆ. ಇತ್ತೀಚೆಗೆ ತಂಡದ ಸದಸ್ಯರನ್ನು ನೇಮಿಸಲಾಗಿದ್ದು, ಅಗತ್ಯ ಬಿದ್ದರೆ ಇನ್ನಷ್ಟು ಸಿಬಂದಿಯನ್ನು ಸೇರಿಸಿಕೊಳ್ಳಲಾಗುವುದು ಎಂದು ಎಸ್‌ಪಿ ವಿವರಿಸಿದ್ದಾರೆ. ಪಟ್ಟಿಯಲ್ಲಿ 412 ಗೂಂಡಾಗಳು
ಜಿಲ್ಲೆಯಲ್ಲಿ ಈ ಹಿಂದೆ ನಡೆದ ಎಲ್ಲ ಕೋಮುಗಲಭೆಗಳ ಆಧಾರದಲ್ಲಿ ಒಟ್ಟು 412 ಮಂದಿ ಮತೀಯ ಗೂಂಡಾಗಳ ಪಟ್ಟಿಯನ್ನು ತಯಾರಿಸಲಾಗಿದೆ. ಅವರಲ್ಲಿ ಕೆಲವರು ಈಗ ನಿಷ್ಕ್ರಿಯರಾಗಿದ್ದಾರೆ. ಆದರೆ 300ರಷ್ಟು ಮಂದಿ ಮತೀಯ ಗೂಂಡಾಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಅವರ ಪ್ರತ್ಯೇಕ ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗದೆ ಪರೋಕ್ಷ ಬೆಂಬಲ ನೀಡುತ್ತಿರುವವರ ಹೆಸರನ್ನು ಕೂಡ ಪರಿಗಣಿಸಲಾಗಿದೆ. ಪಟ್ಟಿ ಮಾಡಲಾದ ಮತೀಯ ಗೂಂಡಾಗಳ ಚಲನವಲನಗಳ ಮೇಲೆ ನಿಗಾ ಇರಿಸಿ, ಅವರು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುತ್ತಾರೆಯೇ, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆಯೇ ಎಂಬಿತ್ಯಾದಿ ಮಾಹಿತಿ ಪಡೆದು ವರದಿ ತರಿಸಲಾಗುತ್ತಿದೆ. ಈ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
Related Articles
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬೀಟ್ ಚುರುಕುಗೊಳಿಸಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಹಳ್ಳಿಹಳ್ಳಿಗೂ ಪೊಲೀಸ್ ಸಿಬಂದಿ ಭೇಟಿ ನೀಡಿ, ತಮ್ಮ ಹಾಜರಾತಿ ಖಾತರಿಪಡಿಸುವುದು, ಗ್ರಾಮೀಣ ಜನರ ಜತೆ ನಿರಂತರ ಸಂಪರ್ಕ ಇರಿಸಿಕೊಂಡು ಮಾಹಿತಿ ಕಲೆ ಹಾಕಿ, ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕೆಂದು ಸೂಚಿಸಲಾಗಿದೆ ಎಂದು ಎಸ್‌ಪಿ ಡಾ| ರವಿಕಾಂತೇ ಗೌಡ ಅವರು ವಿವರಿಸಿದ್ದಾರೆ.
Advertisement