ಬಂಟ್ವಾಳ: ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 24 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಕೇದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ನಡೆದಿದೆ.
ಇಂದು ಮುಂಜಾನೆ ಸುಮಾರು 06.30ರ ಸಮಯಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ತಮ್ಮ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಪಾಟ್ರಕೋಡಿ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಕೆಎ.19.ಎಎ.9294 ನೊಂದಣಿ ಸಂಖ್ಯೆಯ ಪಿಕ್ ಆಪ್ ವಾಹನ, ಕೆಎಲ್ 14-ಎಕ್ಸ್-9707 ನೊಂದಣಿ ಸಂಖ್ಯೆಯ ಕಾರೊಂದರಲ್ಲಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ರೂ 17,50,000 ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಸುಮಾರು ರೂ 3,00,000 ಮೌಲ್ಯದ ಪಿಕ್ ಅಪ್ ವಾಹನ, ಸುಮಾರು ರೂ 4,00,000 ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ 24,50,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾತ್ರವಲ್ಲದೆ ಆರೋಪಿಗಳಾದ ಮಂಜೇಶ್ವರ ದೂರ್ಮಕ್ಕಾಡ್ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ (26), ಹೊಸಂಗಡಿ ನಿವಾಸಿ ಮೊಹಮ್ಮದ್ ಶಫಿಕ್ (31), ಕನ್ಯಾನ ಗ್ರಾಮದ ಖಲಂದರ್ ಶಾಫಿ (26) ಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8 (C) r/w 20(b) (ii) C ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಇಬ್ರಾಹಿಂ ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗೂ 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿದೆ.