Advertisement

Dakshina Kannada District : ಕೆಲವೆಡೆ ಸಾಧಾರಣ ಮಳೆ

12:56 AM Mar 25, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ರವಿವಾರ ಸಾಧಾರಣ ಮಳೆಯಾಗಿದೆ. ಉಳಿದಂತೆ ಉರಿ ಸೆಕೆ ಮುಂದುವರಿದಿತ್ತು.

Advertisement

ಬಂಟ್ವಾಳ ತಾಲೂಕಿನ ಕೆಲವು ಕಡೆ ಸಂಜೆಯ ವೇಳೆಗೆ ಹನಿ ಮಳೆಯಾಗಿದೆ. ಮಂಗಳೂರು ಸಹಿತ ಜಿಲ್ಲೆಯ ಹಲವೆಡೆ ಬಿಸಿಲು ಮತ್ತು ಮೋಡದಿಂದ ಕೂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ಏರಿಕೆಯಾಗಿದೆ. ಮಂಗಳೂರಿನಲ್ಲಿ ಗುರುವಾರ 34.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು. 25.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಹೆಚ್ಚಿತ್ತು.

ಸಾಧಾರಣ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕರಾವಳಿ ಭಾಗದ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಗಾಳಿ-ಮಳೆಯಿಂದ ಮರ ಮುರಿದು ಹಾನಿ
ಕಡಬ: ಶನಿವಾರ ರಾತ್ರಿ ಕಡಬ ಪರಿಸರದಲ್ಲಿ ಸುರಿದ ಗಾಳಿ-ಮಳೆಗೆ ಮರ ಮುರಿದುಬಿದ್ದು ಕುಟ್ರಾಪ್ಪಾಡಿ ಗ್ರಾಮದ ಕಳಾರ ಅಡ್ಕಾಡಿಯಲ್ಲಿ 2 ಮನೆಗಳಿಗೆ ಹಾನಿಯಾಗಿದೆ.

ಅಡ್ಕಾಡಿ ನಿವಾಸಿ ಬಾಬು ಅವರ ವಾಸದ ಮನೆಯ ಮೇಲೆ ಮರ ಬಿದ್ದು ಮನೆ ಹಾಗೂ ಶೌಚಾಲಯಕ್ಕೆ ಹಾನಿಯಾಗಿದೆ. ಹತ್ತಿರದ ಶೀನ ಅವರ ಮನೆಯ ಅಂಗಳಕ್ಕೆ ವಿದ್ಯುತ್‌ ಕಂಬ ಮುರಿದುಬಿದ್ದು ಅಂಗಳದಲ್ಲಿರಿಸಲಾಗಿದ್ದ ನೀರಿನ ಟ್ಯಾಂಕ್‌ ಒಡೆದುಹೋಗಿದೆ.

Advertisement

ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ, ಗ್ರಾಮ ಲೆಕ್ಕಾಧಿಕಾರಿ ಶ್ರೀರಾಜ್‌, ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ಗೌಡ ಹಾಗೂ ಅಜಿತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೀಮ್‌ ಆರ್ಮಿ ಸಂಘಟನೆಯ ಕಡಬ ತಾಲೂಕು ಅಧ್ಯಕ್ಷ ರಾಘವ ಕಳಾರ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಡಬದ ಮೂರಾಜೆ ಬಳಿ ವಿದ್ಯುತ್‌ ಲೈನ್‌ಗೆ ಮರ ಬಿದ್ದು ವಿದ್ಯುತ್‌ ಕಂಬ ಮುರಿದಿದೆ. ಹಲವೆಡೆ ಮರದ ಕೊಂಬೆಗಳು ಮುರಿದುಬಿದ್ದು ಸಣ್ಣಪುಟ್ಟ ಹಾನಿ ಸಂಭವಿಸಿದೆ.

ಮರ ಬಿದ್ದು 5 ವಿದ್ಯುತ್‌ ಕಂಬಗಳಿಗೆ ಹಾನಿ
ಮಡಿಕೇರಿ: ಬೃಹತ್‌ ಗಾತ್ರದ ಮರವೊಂದು ರಸ್ತೆಗೆ ಅಡ್ಡಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾದ ಮತ್ತು ವಿದ್ಯುತ್‌ ಕಂಬಗಳು ಮುರಿದು ಬಿದ್ದ ಘಟನೆ ನಾಪೋಕ್ಲು ಭಾಗಮಂಡಲ ಮುಖ್ಯ ರಸ್ತೆಯ ಚೋನಾಕೆರೆ ಎಂಬಲ್ಲಿ ರವಿವಾರ ಮುಂಜಾನೆ ಸಂಭವಿಸಿದೆ.

ಮರ ಬಿದ್ದ ಪರಿಣಾಮ ರಸ್ತೆ ಬದಿಯ 5 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದ್ದು, ಚೋನಾಕೆರೆ, ಕೂರುಳಿ, ನೆಲಜಿ, ಎಮ್ಮೆಮಾಡು, ಬಲ್ಲಮಾವಟಿ, ಪೇರೂರು ಗ್ರಾಮಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಹಾನಿಗೀಡಾದ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಮರುಸ್ಥಾಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next