Advertisement

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

11:53 PM Dec 23, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ 2 ವರ್ಷಗಳ ಅವಧಿಯಲ್ಲಿ ಯಾವುದೇ ಹೊಸ ಯೋಜನೆ ಬಂದಿಲ್ಲ ಹಾಗೂ ತುರ್ತು ಕಾಮಗಾರಿಗಳಿಗೂ ಅನುದಾನ ನೀಡಿಲ್ಲ. ಕರಾವಳಿ ಬಗ್ಗೆ ಸರಕಾರ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ಸಂಸದರು, ದ.ಕ. ಜಿಲ್ಲೆಯ ಬಿಜೆಪಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಕೆಡಿಪಿ ಸಭೆಯಿಂದ ಹೊರ ನಡೆದ ಘಟನೆ ಸೋಮವಾರ ನಡೆಯಿತು.

Advertisement

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಆಯೋಜಿಸಲಾದ ತ್ತೈಮಾಸಿಕ ಕೆಡಿಪಿ ಸಭೆಯು ಇಂಥದ್ದೊಂದು ಘಟನೆಗೆ ಸಾಕ್ಷಿಯಾಯಿತು.
ಶಾಸಕ ಹರೀಶ್‌ ಪೂಂಜ ಮಾತ ನಾಡಿ, “ಮಳೆಯಿಂದ ಜಿಲ್ಲೆಯ ಹಲವು ರಸ್ತೆಗಳಲ್ಲಿ ಹೊಂಡಗಳೆದ್ದಿವೆ. ಗ್ರಾಮೀಣ, ನಗರ ಭಾಗದ ರಸ್ತೆ ದುರಸ್ತಿಗೆ 2 ವರ್ಷಗಳಿಂದ ಹಣ ಬಂದಿಲ್ಲ. ಉತ್ತರ ಕರ್ನಾ ಟಕಕ್ಕೆ ಕಲ್ಯಾಣ ಭಾಗ್ಯ ಕಲ್ಪಿಸುತ್ತಿದ್ದರೂ ಕರಾವಳಿ ಜನರು ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಹಲಗೆ ಹಾಕಲೂ ಹಣವಿಲ್ಲ!
ಶಾಸಕ ಡಾ| ವೈ.ಭರತ್‌ ಶೆಟ್ಟಿ ಮಾತನಾಡಿ, ಕಿಂಡಿ ಅಣೆಕಟ್ಟೆಗೆ ಹಲಗೆ ಇನ್ನೂ ಹಾಕಿಲ್ಲ. ಅದಕ್ಕೆ ಹಣ ಮೀಸಲಿಟ್ಟಿಲ್ಲ. ಇನ್ನು ಯಾವಾಗ ಹಲಗೆ ಹಾಕುವುದು? 100 ಮೀ. ರಸ್ತೆ ಮಾಡಲು ನಮ್ಮಲ್ಲಿ ಹಣವಿಲ್ಲ. ಕಳೆದ ವರ್ಷದ ಮಳೆ ಹಾನಿ ಹಣ ಇನ್ನೂ ಬಂದಿಲ್ಲ ಎಂದರು.

ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಕಳೆದ ಅವಧಿಯಲ್ಲಿ ಆದ ಹಲವು ಕಾಮಗಾರಿಯನ್ನು ತಡೆಹಿಡಿದು ಕೆಲಸ ಮುಂದುವರಿಸಲು ಬಿಡಲಿಲ್ಲ. ಮಂಗಳೂರಿನಲ್ಲಿ ಜಲಸಿರಿ ಯೋಜನೆ ನಡೆಯುತ್ತಿರುವಾಗ ರಸ್ತೆ ರಿಪೇರಿಗೆ 72 ಕೋ.ರೂ. ಅಗತ್ಯ ಇದೆ. ಆದರೆ ಆ ಹಣವನ್ನು ಸರಕಾರ ಬೇರೆ ಕೆಲಸಗಳಿಗೆ ನೀಡಿದ ಕಾರಣ ರಸ್ತೆ ದುರಸ್ತಿ ಆಗುತ್ತಿಲ್ಲ. ವಿವಿಧ ಸಮುದಾಯ ಭವನಗಳನ್ನು ಅನುದಾನವಿಲ್ಲದೆ ರದ್ದು ಮಾಡಲಾಗಿದೆ ಎಂದರು.

ಐವನ್‌ ಜತೆಗೆ ಚಕಮಕಿ
ದ.ಕ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಇಲಾಖಾವಾರು ವಿವಿಧ ಅನುದಾನ ಬಂದಿದೆ. ಲೆಕ್ಕ ಹೇಳುತ್ತೇವೆ ಎಂದು ವಿ.ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ತಿಳಿಸಿದಾಗ ಶಾಸಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

Advertisement

6 ಸಾವಿರ ಕೋ.ರೂ. ಬಿಡುಗಡೆ
ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಅಧಿಕಾರಿಗಳಿಂದ ಉತ್ತರ ಕೊಡಲು ಅವಕಾಶವನ್ನೂ ನೀಡದೆ ಟೀಕಿಸುವ ಕಾರಣದಿಂದ ಬಂದು ಸಭಾತ್ಯಾಗ ಮಾಡುವುದು ಸರಿಯಲ್ಲ. ಮಳೆ ಹಾನಿ ಪ್ರದೇಶಗಳಿಗೆ 2,000 ಕೋ. ರೂ. ಬಿಡುಗಡೆ ಮಾಡುವು ದಾಗಿ ಸಿಎಂ ಹೇಳಿದ್ದಾರೆ. ಪಿಡಬ್ಲ್ಯುಡಿ ರಸ್ತೆಗಳಿಗೆ 4,000 ಕೋ. ರೂ. ಬಿಡುಗಡೆ ಮಾಡಲಾಗುವುದು. ಇದರಲ್ಲಿ ಎಲ್ಲ ಶಾಸಕರ ಕ್ಷೇತ್ರಕ್ಕೂ ಪಕ್ಷಾತೀತವಾಗಿ ಅನು ದಾನ ನೀಡಲಾಗುವುದು ಎಂದರು.
ಶಾಸಕ ಅಶೋಕ್‌ ಕುಮಾರ್‌ ರೈ, ನಾಮ ನಿರ್ದೇಶಿತ ಸದಸ್ಯರಾದ ಮೆಲ್ವಿನ್‌ ಡಿ’ ಸೋಜಾ, ಹಮೀದ್‌ ಕಿನ್ಯ, ಸಂತೋಷ್‌ ಕುಮಾರ್‌, ಪ್ರವೀಣ್‌ ಕುಮಾರ್‌ ಜೈನ್‌, ಡಿ.ಸಿ. ಮುಲ್ಲೆ„ ಮುಗಿಲನ್‌, ಜಿಪಂ ಸಿಇಒ ಡಾ| ಆನಂದ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಸ್‌ಪಿ ಯತೀಶ್‌, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌, ಪಾಲಿಕೆ ಆಯುಕ್ತ ಆನಂದ್‌ ಸಿ.ಎಲ್‌. ಉಪಸ್ಥಿತರಿದ್ದರು.

ಬಿಜೆಪಿ ಶಾಸಕರು ಹೊರಗೆ; ಭೋಜೇಗೌಡ, ಸರ್ಜಿ ಒಳಗೆ!
ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌, ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಅವರು ಸಭೆಯಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಕಾಟಾಚಾರಕ್ಕೆ ಇಂತಹ ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಆರೋಪಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಕೂಡ ಸಭೆಯಿಂದ ಹೊರನಡೆದರು. ವಿ.ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರು ಮಾತ್ರ ಕೊಂಚ ಹೊತ್ತು ಕಳೆದ ಬಳಿಕ ಸಭೆಯಿಂದ ಹೊರ ಬಂದರು. ಹಾಗೂ ಕೆಲವೇ ನಿಮಿಷದ ಬಳಿಕ ಮತ್ತೆ ಸಭೆಗೆ ಆಗಮಿಸಿ ಕೊನೆಯವರೆಗೆ ಭಾಗವಹಿಸಿದರು. ವಿ.ಪರಿಷತ್‌ ಸದಸ್ಯ ಡಾ| ಧನಂಜಯ ಸರ್ಜಿ ಅವರು ಕೊನೆಯವರೆಗೆ ಸಭೆಯಲ್ಲಿದ್ದರು.

ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಕಿರುಕುಳ ಸಲ್ಲದು- ಬೋಜೇಗೌಡ
ಹೈನುಗಾರಿಗೆ ನೀಡುವ ಅನುದಾನ ಹೆಚ್ಚಿಸಿ. ಪಶು ಚಿಕಿತ್ಸಾ ವಾಹನಗಳ ಸಮರ್ಪಕ ಬಳಕೆ ಅಗತ್ಯ-ಡಾ|ಧನಂಜಯ ಸರ್ಜಿ
ಮೀನುಗಾರರ ಸಂಕಷ್ಟ ನಿಧಿ ಅನುದಾನ ತುರ್ತಾಗಿ ಸಿಗುವಂತೆ ಇಲಾಖೆ ಕಾರ್ಯನಿರ್ವಹಿಸಬೇಕು- ಐವನ್‌ ಡಿ’ ಸೋಜ ಹೇಳಿದರು.
ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಸೂಕ್ತ ವ್ಯವಸ್ಥೆ ಆಗಬೇಕಿದೆ-ಅಶೋಕ್‌ ಕುಮಾರ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next