Advertisement
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರಿನ ಕೊಡಿಯಾಲಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ 24ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿದ್ದು, ಉದ್ಘಾಟನೆಯ ಹಿನ್ನೆಲೆಯಲ್ಲಿ ಮೊದಲನೇ ದಿನ ನೂರಾರು ಮಂದಿ ಸಾಹಿತ್ಯಾಸಕ್ತರು ಆಗಮಿಸಿ, ಸಮ್ಮೇಳನದಲ್ಲಿ ಭಾಗಿಯಾದರು.
Related Articles
Advertisement
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಶಾರದಾ ವಿದ್ಯಾಲಯದ ಮಹಾದ್ವಾರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು ಅವರು ದಿಬ್ಬಣ ಉದ್ಘಾಟಿಸಿ, ಕನ್ನಡ ಭಾಷೆ ಉಳಿಸಲು ಕನ್ನಡ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗುತ್ತದೆ ಎಂದರು. ಶ್ರೀ ಶರವು ಮಹಾಗಣಪತಿ ದೇವ ಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ಮಾಡಿದರು.
ಇದೇ ವೇಳೆ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಷಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಶ್ರೀನಿವಾಸ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ರಾಘವೇಂದ್ರ ರಾವ್, ಕರ್ಣಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ ಎಂ.ಎಸ್., ತುಳುನಾಡು ಎಜುಕೇಶನ್ ಟ್ರಸ್ಟ್ ವಿಶ್ವಸ್ಥ ಸೀತಾರಾಮ ಆಚಾರ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಾಹಿತಿ ಡಾ| ಬಿ.ಎ. ವಿವೇಕ ರೈ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯೆ ಜಯಶ್ರೀ ಕುಡ್ವ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಎಂಸಿಎಫ್ ಆಡಳಿತ ನಿರ್ದೇಶಕ ಕೆ. ಪ್ರಭಾಕರ ರಾವ್ ಸಹಿತ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಗೋಪಾಲಕೃಷ್ಣ ನಿರ್ವಹಿಸಿದರು.
ಇಂದಿನ ಕಾರ್ಯಕ್ರಮ :
ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಫೆ. 13ರಂದು ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ. ಬೆಳಗ್ಗೆ 7.30ರಿಂದ 9 ಗಂಟೆಯವರೆಗೆ ವಾದ್ಯಗೋಷ್ಠಿ- ಚಿಂತನ-ಉದಯರಾಗ-ಯೋಗ ಪ್ರಾತ್ಯಕ್ಷಿಕೆ, ಬೆಳಗ್ಗೆ 9 ಗಂಟೆಯಿಂದ 10 ಗಂಟೆಯ ವರೆಗೆ ಪ್ರಕೃತಿ-ಪ್ರಗತಿ-ಅನುಸಂಧಾನ ಎಂಬ ವಿಷಯದ ಬಗ್ಗೆ ಗೋಷ್ಠಿ, 10 ಗಂಟೆ ಯಿಂದ 11.15ರ ವರೆಗೆ ದಕ್ಷಿಣ ಕನ್ನಡ: ಬಹುಭಾಷಾ ಪಂಡಿತ ಪರಂಪರೆ ವಿಷಯದಲ್ಲಿ ಗೋಷ್ಠಿ, 11.15ರಿಂದ 11.45ರ ವರೆಗೆ ನವರಸ ಗಾಯನ, ಮಧ್ಯಾಹ್ನ 11.45ರಿಂದ 1 ಗಂಟೆಯವರೆಗೆ ಆತ್ಮ ನಿರ್ಭರ ಭಾರತ ಸಂವಾದ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ 1.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಅಗಲಿದ ಸಾಧಕರ ಸಂಸ್ಮರಣೆ 1.30ರಿಂದ 2 ಗಂಟೆಯವರೆಗೆ ನಡೆಯಲಿದೆ. ಮಧ್ಯಾ ಹ್ನ 2 ಗಂಟೆಯಿಂದ 2.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 2.30ರಿಂದ 3.30ರ ವರೆಗೆ ಕವಿಗೋಷ್ಠಿ-1, 3.30ರಿಂದ 4.30ರ ವರೆಗೆ ಮೌಖೀಕ ಪರಂಪರೆ ಮತ್ತು ತೌಳವ ಜೀವನ ವಿಷಯದ ಬಗ್ಗೆ ಗೋಷ್ಠಿ, ಸಂಜೆ 4.30ರಿಂದ 5.30ರ ವರೆಗೆ ಲಲಿತ ಪ್ರಬಂಧ ಗೋಷ್ಠಿ, ಸಂಜೆ 5.30ರಿಂದ ಡಾ| ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಆಧಾರಿತ ಚೋಮನ ದುಡಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 4ರಿಂದ ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ರಾಗ ಸುಧಾರಸ ರಾಷ್ಟ್ರೀಯ ಸಂಗೀತೋತ್ಸವ ನಡೆಯಲಿದೆ.