ಮಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಇಲಾಖೆಗೆ ನೀಡುವ ಅನುದಾನದ ಸದ್ಬಳಕೆಯಲ್ಲಿ ಸತತ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಈ ವರ್ಷಾರ್ಧದಲ್ಲಿ ಮೊದಲ ಸ್ಥಾನದಲ್ಲಿದೆ. 2017-18ನೇ ಸಾಲಿನಲ್ಲಿ ದ.ಕ.ಜಿಲ್ಲಾ ಆರೋಗ್ಯ ಇಲಾಖೆಗೆ ಒಟ್ಟು 28.56 ಕೋ.ರೂ.ಬಿಡುಗಡೆಯಾಗಿದ್ದು, 25.98 ಕೋ.ರೂ.ಗಳನ್ನು ಬಳಕೆ ಮಾಡಿಕೊಂಡು, ಶೇ.91ರಷ್ಟು ಗುರಿ ಸಾಧಿಸಿದೆ.
2018-19ನೇ ಸಾಲಿನಲ್ಲಿ 36.70 ಕೋ.ರೂ.ಗಳಲ್ಲಿ 31.3 ಕೋಟಿ ರೂ.ಗಳು ವಿನಿಯೋಗವಾಗಿ ಶೇ.85ರಷ್ಟು ಗುರಿ ಸಾಧನೆಯಾಗಿದೆ. ಈ ಎರಡೂ ವರ್ಷಗಳಲ್ಲಿ ಕ್ರಮವಾಗಿ ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳು ಮೊದಲ ಸ್ಥಾನದಲ್ಲಿದ್ದವು. 2019-20ನೇ ಸಾಲಿನ ಮೊದಲ ಆರು ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅನುದಾನದ ಸದ್ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಸ್ಥಾನವನ್ನು ವರ್ಷಪೂರ್ತಿ ಕಾಯ್ದುಕೊಳ್ಳಲು ಪಣ ತೊಟ್ಟಿದೆ.
2ನೇ ಸ್ಥಾನದಲ್ಲಿ ರಾಮನಗರ: 2019-20ನೇ ಸಾಲಿನಲ್ಲಿ ದ.ಕ.ಜಿಲ್ಲೆಗೆ ಒಟ್ಟು 36.45 ಕೋ.ರೂ.ಅನುದಾನ ಅನುಮೋದನೆಗೊಂಡಿದ್ದು, ಈಗಾಗಲೇ 14.58 ಕೋಟಿ ರೂ.ಖರ್ಚಾಗಿದೆ. ಅನುಮೋದಿತ 21.86 ಕೋ.ರೂ.ಗಳ ಪೈಕಿ 8.59 ಕೋ.ರೂ.ಗಳನ್ನು ಬಳಕೆ ಮಾಡುವ ಮೂಲಕ ರಾಮನಗರ ಎರಡನೇ ಸ್ಥಾನದಲ್ಲಿದೆ. 26 ಕೋ.ರೂ. ಪೈಕಿ 10 ಕೋ.ರೂ.ಗಳನ್ನು ಬಳಸಿ, ಉಡುಪಿ 9ನೇ ಸ್ಥಾನದಲ್ಲಿದೆ. ಅನುದಾನದ ಸದ್ಬಳಕೆಯಲ್ಲಿ ವಿಫಲವಾದ ಎಲ್ಲ 30 ಜಿಲ್ಲೆ ಮತ್ತು ಬಿಬಿಎಂಪಿಗೆ ಆರೋಗ್ಯ ಸಚಿವರು ಮೂರು ತಿಂಗಳ ಗಡುವು ನೀಡಿದ್ದಾರೆ.
ಅನುದಾನ ಸದ್ವಿನಿಯೋಗ: ಸಿಬ್ಬಂದಿ ವೇತನ, ಆರೋಗ್ಯ ಕೇಂದ್ರಗಳಿಗೆ ಮುಕ್ತ ನಿಧಿ ಅನುದಾನ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ರಾಷ್ಟ್ರೀಯ ಔಷಧ ಅನುದಾನ, ಆಸ್ಪತ್ರೆಯ ಲ್ಯಾಬ್‌ಗಳಲ್ಲಿ ಉಚಿತ ಸೇವೆ, ಸಿಬ್ಬಂದಿ ತರಬೇತಿ, ಕುಷ್ಠರೋಗ, ಟಿಬಿ, ತಂಬಾಕು ನಿಯಂತ್ರಣ ಮತ್ತಿತರ ಕಾರ್ಯಕ್ರಮಗಳು, ತಾಯಿ ಮಕ್ಕಳ ಅಭಿವೃದ್ಧಿ ಸಂಬಂಧಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಈ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವರ ಜಿಲ್ಲೆಗೆ ಕೊನೆ ಸ್ಥಾನ: ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಬಳ್ಳಾರಿ ಅನುದಾನ ಸದ್ಬಳಕೆಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳುಗಳಲ್ಲಿ ಹೆಚ್ಚು ಅನುದಾನ ಬಳಕೆ ಮಾಡಿ ತನ್ನ ಜಿಲ್ಲೆಯಲ್ಲಿ ಪರಿಣಾಮಕಾರಿ ಆರೋಗ್ಯ ಸೇವೆ ನೀಡುವಂತೆ ಮಾಡುವ ಸವಾಲು ಆರೋಗ್ಯ ಸಚಿವರಿಗಿದೆ. ಅನುಮೋದಿತ 66.63 ಕೋ.ರೂ.ಪೈಕಿ 16.32 ಕೋ.ರೂ.ಗಳನ್ನು ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಬಳಸಿದೆ.
400 ಕೋ.ರೂ.ಬಾಕಿ!: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಇಲಾಖೆಗೆ 2019-20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪೈಕಿ ಸುಮಾರು 400 ಕೋ.ರೂ.ಬಳಕೆಯಾಗಿಲ್ಲ. ಬಳಕೆ ಮಾಡದೆ ಇದ್ದಲ್ಲಿ ಮುಂದಿನ ಬಾರಿ ಅನುದಾನ ಕೇಳುವುದು ಕಷ್ಟವಾಗುತ್ತದೆ. ದ.ಕ.ಜಿಲ್ಲೆಯವರು ಇತರರಿಗಿಂತ ಹೆಚ್ಚು ಖರ್ಚು ಮಾಡಿದ್ದು, ಮೊದಲ ರ್‍ಯಾಂಕಿಂಗ್ ನೀಡಲಾಗಿದೆ. ಆದರೂ, ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಹಣ ಖರ್ಚಾಗದೆ ಬಾಕಿಯಿದ್ದು, ಮುಂದಿನ ಮೂರು ತಿಂಗಳೊಳಗೆ ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು “ಉದಯವಾಣಿ’ಗೆ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಅನುದಾನ ಸದ್ಬಳಕೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಳಿದ ಜಿಲ್ಲೆಗಳಲ್ಲಿಯೂ ಶೇ.100 ಸಾಧನೆ ಆಗಿಲ್ಲದ ಕಾರಣ ಒಟ್ಟಾರೆ ಈ ಯೋಜನೆ ವಿನಿಯೋಗದಲ್ಲಿ ವಿಫಲವಾಗಿದೆ. ಬಳ್ಳಾರಿ ಸಹಿತ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ 3 ತಿಂಗಳ ಟಾರ್ಗೆಟ್ ನೀಡಲಾಗಿದೆ. ಇಲ್ಲವಾದಲ್ಲಿ ಆಯಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
-ಶ್ರೀರಾಮುಲು, ಆರೋಗ್ಯ ಸಚಿವ