Advertisement

22ದಿನಗಳಿಂದ ತನ್ನ ಎರಡು ವರ್ಷದ ಮಗುವಿನ ಜೊತೆ ದ.ಕ. ಜಿಲ್ಲಾಧಿಕಾರಿಯ ಸೋಷಿಯಲ್ ಡಿಸ್ಟೆನ್ಸಿಂಗ್

01:11 PM Apr 15, 2020 | Hari Prasad |

ಮಂಗಳೂರು: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರೋಗ ಲಕ್ಷಣ ಇರುವವರು ನಿಗದಿತ ದಿನಗಳವರೆಗೆ ಪ್ರತ್ಯೇಕವಾಗಿ ವಾಸವಿರಬೇಕು ಎನ್ನುವುದು ಜಿಲ್ಲಾಡಳಿತದ ಸೂಚನೆ. ವಿಶೇಷವೆಂದರೆ, ಅಗತ್ಯ ಕಡೆಗಳಿಗೆ ಸುತ್ತಾಡಬೇಕಾಗುವುದರಿಂದ ಮುಂಜಾಗ್ರತ ಕ್ರಮವಾಗಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರೂ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿ, 22 ದಿನಗಳಿಂದ ತನ್ನ ಪುಟ್ಟ ಮಗುವಿನಿಂದ ದೂರವಿದ್ದು ಮಾದರಿಯಾಗಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡ ಮೊದಲ ದಿನದಿಂದ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ತಮ್ಮ ಎರಡು ವರ್ಷಗಳ ಮಗುವಿನ ಲಾಲನೆ, ಪಾಲನೆಯಿಂದ ದೂರ ಉಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಡಳಿತ ಕೆಲಸದ ಜತೆಗೆ ಮನೆಯಲ್ಲಿ ತಾಯಿಯಾಗಿ ಮಗುವಿನ ಆರೈಕೆಯಲ್ಲಿ ತೊಡಗುತ್ತಿದ್ದ ಅವರು ಈಗ ಮಗುವಿನ ಆರೋಗ್ಯದ ದೃಷ್ಟಿಯಿಂದ ಅಂತರ ಕಾಪಾಡುತ್ತಿದ್ದಾರೆ.

ದೂರದಿಂದಲೇ ಮಾತು
ಮಂಗಳೂರಿನಲ್ಲಿ ಇರುವ ಜಿಲ್ಲಾಧಿಕಾರಿ ಬಂಗಲೆಯಲ್ಲಿ ಸಿಂಧೂ ಬಿ. ರೂಪೇಶ್‌ ಜತೆಗೆ ಅವರ ತಂದೆ, ತಾಯಿ ಇದ್ದಾರೆ. ಸಿಂಧೂ ಅವರು ಕರ್ತವ್ಯದಲ್ಲಿ ಇರುವಾಗ ದಿನಪೂರ್ತಿ ತಂದೆ, ತಾಯಿಯೇ ಮಗುವನ್ನು ನೋಡಿಕೊಳ್ಳುತ್ತಾರೆ. ಜಿಲ್ಲಾಧಿಕಾರಿ ಮನೆಗೆ ಬಂದ ಮೇಲೆ ಮಗುವನ್ನು ಸ್ಪರ್ಶಿಸುತ್ತಿಲ್ಲ. ದೂರದಿಂದಲೇ ನೋಡಿ, ಮಾತನಾಡಿಸಿ ಖುಷಿ ಪಡುತ್ತಾರೆ. ಆದರೆ, ತಾಯಿ ಹತ್ತಿರ ಬರುತ್ತಿಲ್ಲವೆಂದು ಮಗು ಅಳುತ್ತಿತ್ತು.

ಪತಿ ಬಳಿಗೆ ಮಗು
ಜಿಲ್ಲಾಧಿಕಾರಿಯಾಗಿ ಆಸ್ಪತ್ರೆ ಮತ್ತಿತರ ಕಡೆಗಳಿಗೆ ಭೇಟಿ ನೀಡಬೇಕಾಗುತ್ತದೆ. ಸಭೆಗಳನ್ನು ನಡೆಸಬೇಕಾಗುತ್ತದೆ. ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಂಡರೂ ಸೋಂಕಿನ ಭೀತಿಯನ್ನು ನಿರಾಕರಿಸಲಾಗದು. ಹೀಗಾಗಿ ನನ್ನ ಮನೆಯಲ್ಲಿ ಸ್ವತಃ ಅಂತರವನ್ನು ಕಾಯ್ದುಕೊಂಡು ಪ್ರತ್ಯೇಕ ನಿಗಾದಲ್ಲಿ ಇದ್ದೇನೆ. ಲಾಕ್‌ಡೌನ್‌ ವಿಸ್ತರಣೆಯಾಗಿರುವುದರಿಂದ ಮಗುವನ್ನು ಶನಿವಾರ ಬೆಂಗಳೂರಿನಲ್ಲಿರುವ ಪತಿಯ ಬಳಿಗೆ ಕಳುಹಿಸಿಕೊಟ್ಟಿದ್ದೇನೆ ಎನ್ನುತ್ತಾರೆ ಸಿಂಧೂ.

ಎಡಿಸಿ ರೂಪಾ ಕೂಡ ಮಕ್ಕಳಿಂದ ದೂರ
ದ.ಕ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರೂ ತಮ್ಮ ಐದು ವರ್ಷದೊಳಗಿನ ಇಬ್ಬರು ಮಕ್ಕಳೊಂದಿಗೆ ಇದೇ ಕಾರಣಕ್ಕಾಗಿ ಬೆರೆಯುತ್ತಿಲ್ಲ. ಮುಂಜಾಗ್ರತ ಕ್ರಮವಾಗಿ ಮಕ್ಕಳನ್ನು ಮೈಸೂರಿನ ತಾಯಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

Advertisement

ಅಂತರ ಕಾಪಾಡುವುದು ಅನಿವಾರ್ಯ
ಆರೋಗ್ಯ ಇಲಾಖೆ ಅಧಿಕಾರಿ, ಸಿಬಂದಿ, ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ವಿವಿಧ ಇಲಾಖೆಗಳ ಬೇರೆ ಬೇರೆ ಅಧಿಕಾರಿಗಳು ಮುಂಜಾಗ್ರತ ಕ್ರಮವಾಗಿ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಕಚೇರಿ, ಆಸ್ಪತ್ರೆಗೆ ಬರುವವರು ಬಳಿಕ ಮನೆಮಂದಿ, ಮಕ್ಕಳಿಂದ ಅಂತರ ಕಾಪಾಡಿಕೊಂಡಿದ್ದಾರೆ. ಅದೇ ರೀತಿ ನಾನೂ ಮಗುವಿನಿಂದ ಅಂತರ ಕಾಪಾಡಿಕೊಂಡಿದ್ದೇನೆ.
– ಸಿಂಧೂ ಬಿ. ರೂಪೇಶ್‌, ಜಿಲ್ಲಾಧಿಕಾರಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next