Advertisement

ನಿರ್ಗಮನ ಏಕೆಂದು ಚರ್ಚೆಯಾಗಲಿ

02:36 AM Sep 07, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್‌ ಸೆಂಥಿಲ್‌ ಅವರು ಐಎಎಸ್‌ ಹುದ್ದೆಗೆ ಶುಕ್ರವಾರ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಿರ್ಧಾರದ ಕುರಿತು ಶಶಿಕಾಂತ ಸೆಂಥಿಲ್‌ ಅವರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.

Advertisement

ನಿಮ್ಮ ನಿರ್ಧಾರಕ್ಕೆ ಕಾರಣವೇನು?
ನಂಬಿಕೊಂಡು ಬಂದ ಸಿದ್ಧಾಂತ ಮತ್ತು ನನ್ನ ಸೇವಾ ಕಾರ್ಯಕ್ಕೂ ಸಂಘರ್ಷ ಏರ್ಪಟ್ಟಾಗ ನಾನು ಹುದ್ದೆಯನ್ನು ಬಿಡಬೇಕು ಅಥವಾ ಸಿದ್ಧಾಂತ ಬಿಡಬೇಕು. ಸಿದ್ಧಾಂತದೊಂದಿಗೆ ರಾಜಿ ಸಾಧ್ಯವಾಗದ ಕಾರಣ ಹುದ್ದೆ ತೊರೆದಿದ್ದೇನೆ. ನನ್ನ ರಾಜೀನಾಮೆ ನನ್ನ ವೈಯಕ್ತಿಕ ಕಾರಣಗಳಿಗಾಗಿ. ದೇಶದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳಿಂದ ನನಗೆ ಆಶ್ಚರ್ಯವಾಗುತ್ತಿದೆ. ಈಗಿನ ಒಂದಷ್ಟು ಬೆಳವಣಿಗೆಗಳು ನನಗೆ ಯಾವುದೋ ಕಾರಣಕ್ಕೆ ಒಪ್ಪಿಗೆಯಾಗುತ್ತಿಲ್ಲ.

ನಿರ್ದಿಷ್ಟವಾಗಿ ಯಾವ ವಿಚಾರದ ಬಗ್ಗೆ ನೀವು ಬೊಟ್ಟು ಮಾಡುತ್ತಿದ್ದೀರಿ?
ನಿರ್ದಿಷ್ಟವಾಗಿ ಇದು ಎನ್ನಲಾಗದು. ಬಹುತೇಕ ಎಲ್ಲ ವಿಚಾರದಲ್ಲಿಯೂ ಇಂತಹ ಬೆಳವಣಿಗೆ ನಡೆಯುತ್ತಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆಯೋ ಎಂದು ಯೋಚಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ಪ್ರಾಯಃ ಒಂದು ದಿನವೇ ಬೇಕಾಗಬಹುದು.

ಒತ್ತಡವೇನಾದರೂ ಇತ್ತೇ?
ಅತ್ಯಂತ ಸ್ಪಷ್ಟವಾಗಿ ಹೇಳುತ್ತೇನೆ; ಜಿಲ್ಲೆಯಲ್ಲಿ ನನಗೆ ಯಾರ ಒತ್ತಡವೂ ಇರಲಿಲ್ಲ. ಯಾರೂ-ಯಾವ ಕಾರಣಕ್ಕೂ ಒತ್ತಡ ನೀಡಿಲ್ಲ. ಯಾವುದೇ ಸರಕಾರದ ಅವಧಿಯಲ್ಲಿಯೂ ಒತ್ತಡ ಬಂದಿರಲಿಲ್ಲ. ಒಂದು ವೇಳೆ ಸಣ್ಣಪುಟ್ಟ ಒತ್ತಡ ಇದ್ದರೂ ಅದನ್ನು ನಿಭಾಯಿಸುವ ಬಗೆಯೂ ನನಗೆ ಗೊತ್ತಿತ್ತು.

ರಾಜೀನಾಮೆ ನಿಮ್ಮ ದಿಢೀರ್‌ ನಿರ್ಧಾರವೇ?
ದಿಢೀರ್‌ ನಿರ್ಧಾರವಲ್ಲ. ನಾನು ಜಿಲ್ಲಾಧಿಕಾರಿ ಆಗಬೇಕು ಎಂದು ಬಂದವನಲ್ಲ. ವಿವಿಧ ಹಂತಗಳನ್ನು ದಾಟಿ ಬಂದದ್ದು. ಆದರೆ ನನ್ನ ಸುತ್ತಮುತ್ತ ನಡೆಯುವ ಸಣ್ಣ ಅಥವಾ ಗಂಭೀರ ವಿದ್ಯಮಾನ ನನ್ನ ಸಿದ್ಧಾಂತಕ್ಕೆ ಧಕ್ಕೆ ತಂದಾಗ, ಸರಕಾರಿ ವ್ಯವಸ್ಥೆಯೊಳಗೆ ಇದ್ದು ವಿರೋಧಿಸುವಂತಿಲ್ಲ. ಹೀಗಾಗಿ ವ್ಯವಸ್ಥೆಯಿಂದ ಹೊರಬರುವ ಯೋಚನೆ ಮಾಡಿದ್ದೆ.

Advertisement

ರಾಜಕೀಯ ಪ್ರವೇಶದ ಯೋಚನೆ ಇದೆಯಾ?
ಖಂಡಿತ ಇಲ್ಲ.

ಐಪಿಎಸ್‌ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ನಿಮ್ಮ ರಾಜೀನಾಮೆ; ಇದು ಯಾವುದರ ಸೂಚನೆ?
ಒಂದಂತೂ ಸ್ಪಷ್ಟ; ನಾವೆಲ್ಲ ಇಂಥದೊಂದು ನಿರ್ಧಾರ ತೆಗೆದುಕೊಳ್ಳುವುದಾದರೆ ವ್ಯವಸ್ಥೆಯಲ್ಲಿ ಎಲ್ಲೋ ಒಂದು ಕಡೆ ಸಮಸ್ಯೆ ಆಗುತ್ತಿದೆ. ಅದೇನು ಎಂಬುದನ್ನು ಎಲ್ಲರೂ ಚರ್ಚೆ ಮಾಡಬೇಕು. ಈ ಬಗ್ಗೆ ಬಹಿರಂಗ ಚರ್ಚೆಯೇ ನಡೆಯಲಿ. ನಾನೂ ಭಾಗವಹಿಸಲು ಸಿದ್ಧ.

ಮುಂದೇನು ಅಂತ ನಿರ್ಧರಿಸಿದ್ದೀರಾ?
ಮುಂದೇನು ಅಂತ ಗೊತ್ತಿಲ್ಲ. ಏನು ಮಾಡಬೇಕು ಎಂಬುದನ್ನೂ ನಿರ್ಧರಿಸಿಲ್ಲ. ಯೋಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಜನರ ಜತೆಗೆ ತೊಡಗಿಸಿಕೊಳ್ಳಬೇಕಿದೆ.

ದ.ಕ. ನನ್ನ ಎರಡನೇ ಮನೆ
ನಿಮ್ಮ ನಿರ್ಧಾರ ಜಿಲ್ಲೆಯ ಜನರಿಗೆ ಬೇಸರ ತಂದಿದೆಯಲ್ಲವೇ?
ಹಾಗೇನಿಲ್ಲ. ನನ್ನ ಒಂದು ಭಾಗ ಇಲ್ಲಿಯೇ ಉಳಿಯುತ್ತದೆ. ದ.ಕ. ಯಾವತ್ತಿಗೂ ನನ್ನ ಎರಡನೇ ಮನೆಯಾಗಿರುತ್ತದೆ. ಜಿಲ್ಲಾಧಿಕಾರಿ ಕಚೇರಿಯ ಎಲ್ಲ ಸಿಬಂದಿ ಮತ್ತು ಜಿಲ್ಲೆಯ ಅಧಿಕಾರಿ ವಲಯ ನೀಡಿದ ಸಹಕಾರ ಮಾದರಿ. ಎಲ್ಲ ಸಂದರ್ಭಗಳಲ್ಲಿಯೂ ಜಿಲ್ಲೆಯ ಜನರು ಪಕ್ಷಾತೀತವಾಗಿ ನನ್ನ ಮೇಲೆ ಇರಿಸಿರುವ ಪ್ರೀತಿ -ಸಹಕಾರಕ್ಕೆ ಸದಾ ಆಭಾರಿ. ರಾಜೀನಾಮೆ ನೀಡುವ ಕಾರಣಕ್ಕಾಗಿ ಜಿಲ್ಲೆಯ ಜನರಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ರಾಜೀನಾಮೆ ನನ್ನ ವೈಯಕ್ತಿಕ ನಿರ್ಧಾರವಾಗಿದ್ದು, ಯಾರು ಮನವಿ ಮಾಡಿದರೂ ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ.

ಅವರ ಜತೆ ಈ ಹಿಂದೆ ರಾಯಚೂರಿ ನಲ್ಲಿಯೂ ಕೆಲಸ ನಿರ್ವಹಿಸಿದ್ದೆ. ಅವರು ಜಿಲ್ಲಾಧಿಕಾರಿಯಾಗಿದ್ದಾಗ ನಾನು ಅಪರ ಜಿಲ್ಲಾಧಿಕಾರಿಯಾಗಿದ್ದೆ. ದ.ಕ. ಜಿಲ್ಲೆಯಲ್ಲಿಯೂ 1 ವರ್ಷದಿಂದ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾನು ಕಂಡಂತೆ ಅವರು ದಕ್ಷ ಅಧಿಕಾರಿ. ಜನಸಾಮಾನ್ಯರ ಬಗ್ಗೆ ಅವರಲ್ಲಿ ಅಪಾರ ಪ್ರೀತಿ-ಕಾಳಜಿ ಇತ್ತು.
– ಡಾ| ಆರ್‌. ಸೆಲ್ವಮಣಿ, ದಕ ಜಿಪಂ ಸಿಇಒ

ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದು, ಹಿಂಪಡೆಯಲು ಒತ್ತಾಯ ಮಾಡಬೇಡಿ ಎಂದು ತಿಳಿಸಿದ್ದಾರೆ. ಜಿಲ್ಲೆಗೆ ನೆರೆ, ಮಳೆ ಸೇರಿದಂತೆ ಅವ್ಯವಸ್ಥೆ ಸಂಭವಿಸಿದಾಗ ಒಳ್ಳೆಯ ರೀತಿಯಲ್ಲಿ ಕೆಲಸ ನಿಭಾಯಿಸಿದ್ದಾರೆ. ಜನಪ್ರತಿನಿಧಿಗಳಾಗಿ ನಮ್ಮ ಸಲಹೆ, ಬೇಡಿಕೆಗಳಿಗೆ ತುರ್ತು ಸ್ಪಂದಿಸುತ್ತಿದ್ದರು.
– ಡಿ. ವೇದವ್ಯಾಸ ಕಾಮತ್‌, ಶಾಸಕ

ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರ ರಾಜೀನಾಮೆ ವಿಚಾರ ಕೇಳಿ ಶಾಕ್‌ ಆಗಿದೆ. ಅವರೊಬ್ಬ ದಕ್ಷ ಅಧಿಕಾರಿಯಾಗಿದ್ದರು. ಮನ ವೊಲಿಸುವ ಪ್ರಯತ್ನ ಮಾಡಿದ್ದೇನೆ.
– ಯು.ಟಿ. ಖಾದರ್‌,
ಶಾಸಕ

ಜಿಲ್ಲೆಗೆ ಅವರ ಸೇವೆ ಇನ್ನಷ್ಟು ಬೇಕಿತ್ತು. ನಾನು ಸೆಂಥಿಲ್‌ ಅವರಿಗೆ ಕರೆ ಮಾಡಿದ್ದೆ. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಮುಖತಃ ಭೇಟಿಯಾಗಿ ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸುತ್ತೇನೆ.
– ಸಂಜೀವ ಮಠಂದೂರು,
ಬಿಜೆಪಿ ದಕ ಜಿಲ್ಲಾಧ್ಯಕ್ಷ

ಅವರ ರಾಜೀನಾಮೆ ಬೇಸರ ತಂದಿದೆ. ಜಿಲ್ಲೆಯಲ್ಲಿ ಭಾರೀ ಮಳೆ, ಅತಿವೃಷ್ಟಿ, ಅನಾವೃಷ್ಟಿಗಳಾದ ಸಂದರ್ಭ ಅವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ.
– ಐವನ್‌ ಡಿ’ಸೋಜಾ, ವಿಧಾನಪರಿಷತ್‌ ಸದಸ್ಯ

ನಾನು ಈವರೆಗೆ 25 ಜಿಲ್ಲಾಧಿಕಾರಿಗಳ ಜತೆ ಕೆಲಸ ನಿರ್ವಹಿಸಿದ್ದೇನೆ. ಸೆಂಥಿಲ್‌ ನಾನು ಕಂಡ ಅತ್ಯುತ್ತಮ ಜಿಲ್ಲಾಧಿಕಾರಿ. ಕೆಲಸದ ಜತೆಗೆ ನನ್ನ ಊಟ-ತಿಂಡಿಯ ಬಗ್ಗೆಯೂ ವಿಚಾರಿಸುತ್ತಿದ್ದರು. ಅವರ ರಾಜೀನಾಮೆ ಬೇಸರ ತಂದಿದೆ.
– ಬಾಬಣ್ಣ,
ಜಿಲ್ಲಾಧಿಕಾರಿ ಕಾರು ಚಾಲಕ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next