Advertisement

ದಕ್ಷಿಣ ಕನ್ನಡ: 86 ಡ್ರಗ್ಸ್‌ ಪ್ರಕರಣ; ಸದನದಲ್ಲಿ ಗೃಹ ಸಚಿವ ಆರಗ ಮಾಹಿತಿ

08:08 PM Dec 28, 2022 | Team Udayavani |

ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪೆನಿ ಉದ್ಯೋಗಿಗಳನ್ನು ಗುರಿಯಾಗಿ ಇರಿಸಿಕೊಂಡು ನಡೆದ ಡ್ರಗ್ಸ್‌ ಮಾರಾಟದ ಒಟ್ಟು 86 ಪ್ರಕರಣಗಳು ದಾಖಲಾಗಿವೆ.

Advertisement

ಅವುಗಳಲ್ಲಿ 280 ಕೆ.ಜಿ.ಗೂ ಅಧಿಕ ಗಾಂಜಾ ಮತ್ತು ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

146 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ 18 ಪ್ರಕರಣಗಳಲ್ಲಿ 24 ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ವಿಧಾನಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಲಿಖಿತ ಉತ್ತರವನ್ನು ಗೃಹ ಸಚಿವರು ಸದನದಲ್ಲಿ ಮಂಡಿಸಿದ್ದು, ಅದರಲ್ಲಿ ಈ ಮಾಹಿತಿ ಒದಗಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ 2019ರಲ್ಲಿ 17 ಪ್ರಕರಣಗಳು ದಾಖಲಾಗಿದ್ದು, 22 ಆರೋಪಿಗಳನ್ನು ಬಂಧಿಸಲಾಗಿದೆ. 6 ಕೆ.ಜಿ. ಗಾಂಜಾ ವಶಪಡಿಸಿಕೊಂಡು 3 ಪ್ರಕರಣಗಳಲ್ಲಿ 5 ಮಂದಿ ಆರೋಪಿಗಳಿಗೆ ಶಿಕ್ಷೆಯಾಗಿದೆ.

Advertisement

2020ರಲ್ಲಿ 28 ಪ್ರಕರಣಗಳಲ್ಲಿ 55 ಆರೋಪಿಗಳನ್ನು ಬಂಧಿಸಲಾಗಿದ್ದು, 251.16 ಕೆ.ಜಿ. ಗಾಂಜಾ, 350 ಗ್ರಾಂ ಹಶೀಷ್‌ ಆಯಿಲ್‌ ವಶಪಡಿಸಿಕೊಳ್ಳಲಾಗಿದ್ದು, 7 ಪ್ರಕರಣಗಳಲ್ಲಿ 8 ಮಂದಿಗೆ ಶಿಕ್ಷೆಯಾಗಿದೆ.

2021ರಲ್ಲಿ 9 ಪ್ರಕರಣಗಳಲ್ಲಿ 20 ಆರೋಪಿಗಳನ್ನು ಬಂಧಿಸಲಾಗಿದ್ದು, 12 ಕೆ.ಜಿ. ಗಾಂಜಾ, 350 ಗ್ರಾಂ ಹಶೀಷ್‌ ಆಯಿಲ್‌, 3.19 ಗ್ರಾಂ ಎಂಡಿಎಂಎ, 1.20 ಗ್ರಾಂ ಎಲ್‌ಎಸ್‌ಡಿ ವಶಪಡಿಸಿಕೊಳ್ಳಲಾಗಿದ್ದು, ಯಾವ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ.

2022ರ ನವೆಂಬರ್‌ ಅಂತ್ಯದ ವರೆಗೆ 32 ಪ್ರಕರಣಗಳು ದಾಖಲಾಗಿದ್ದು, 49 ಆರೋಪಿಗಳನ್ನು ಬಂಧಿಸಲಾಗಿದೆ. 8 ಪ್ರಕರಣಗಳಲ್ಲಿ 11 ಮಂದಿಗೆ ಶಿಕ್ಷೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ಮಾರಾಟ ಮಾಡಲು ಯತ್ನಿಸುವ, ಮಾದಕ ವಸ್ತುಗಳ ಸೇವನೆ ಹಾಗೂ ಮಾದಕ ವಸ್ತುಗಳನ್ನು ಅಕ್ರಮವಾಗಿ ಹೊಂದಿದವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ದ್ರವ್ಯ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next