ವಾಡಿ: ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್ ಗಳು ಸಾಮಾನ್ಯವಾಗಿ ಗುಜರಿಗೆ ಸೇರುವಂತೆ ಕಾಣುತ್ತಿರುತ್ತಿವೆ. ಆದರೆ ಹೆದ್ದಾರಿಯಲ್ಲಿ ಓಡುವ ಬಸ್‌ಗಳು ಕೂಡ ದಟ್ಟವಾದ ಕಪ್ಪು ಹೊಗೆಯನ್ನು ಹೊರಸೂಸುತ್ತ ಪರಿಸರ ಮಾಲಿನ್ಯ ಹೆಚ್ಚಿಸುತ್ತಿವೆ. ದುರಸ್ತಿ ಕಾಣದ ಬಸ್ ಗಳು, ನಿಯಮ ಬಾಹಿರವಾಗಿ ರಸ್ತೆಗಿಳಿದು ಪ್ರಯಾಣಿಕರ ಜೀವ ತಿನ್ನುತ್ತಿವೆ. ಕರ್ಕಶವಾದ ಸಂಗೀತ ಹೊರಡಿಸುವ ಮೂಲಕ ಚಾಲಕರ ನೆಮ್ಮದಿಯೂ ಕದಡುತ್ತಿವೆ. ಮೂಲೆ ಸೇರಬೇಕಾದ ಡಕೋಟಾ ಬಸ್ ಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಿಸುವ ಮೂಲಕ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರ ಪರದಾಟಕ್ಕೆ ಕಾರಣವಾಗಿದೆ.
ಕಲಬುರಗಿ-ಯಾದಗಿರಿ -ವಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಸಂಚರಿಸುತ್ತಿರುವ 40ಕ್ಕೂ ಹೆಚ್ಚು ಬಸ್‌ಗಳ ಪೈಕಿ ಸುಮಾರು 20 ಬಸ್‌ಗಳು ಗುಜರಿಗೆ ಸೇರುವಷ್ಟು ಹಳೆಯದಾಗಿವೆ. ಕೆಲವು ಹೊಸ ಬಸ್‌ಗಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಊರು ಸೇರಿಸುತ್ತಿದ್ದರೆ, ಇನ್ನು ಕೆಲವು ಬಸ್ ಗಳಲ್ಲಿ ಪ್ರಯಾಣಿಸುವರು ಸಾರಿಗೆ ಸಂಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಉತ್ತಮ ರಸ್ತೆಯಿದ್ದರೂ ಬಸ್ಸಿನ ಕಿಟಕಿ ಗಾಜುಗಳು ಕಟಕಟ ಸದ್ದು ಮಾಡುತ್ತಿರುತ್ತವೆ. ಸೀಟುಗಳು ಅಲುಗಾಡುತ್ತಿರುತ್ತವೆ. ಉದಾಹರಣೆಗೆ ಕಲಬುರಗಿ ಘಟಕಕ್ಕೆ ಸೇರಿದ (ಕೆಎ-32-ಎಫ್1945) ಬಸ್ಸೊಂದು ಸಂಪೂರ್ಣ ದುರಸ್ತಿಗೆ ಬಂದಿದ್ದರೂ ನಿತ್ಯವೂ ಸಂಚರಿಸುತ್ತಿದೆ. ಬಸ್ಸಿನ ಸೀಟುಗಳು ಧೂಳಿನಿಂದ ಆವರಿಸಿರುತ್ತವೆ. ನಿಲ್ದಾಣ ಸೇರುವ ವರೆಗೂ ನಿರಂತರವಾಗಿ ತಗಡಿನ ಸದ್ದು ಕೇಳಿ ಬರುತ್ತದೆ. ಸೀಟಿನಲ್ಲಿ ಕುಳಿತ ಪ್ರಯಾಣಿಕರು ಜೋಲಿ ಹೊಡೆಯುವಷ್ಟರ ಮಟ್ಟಿಗೆ ಬಸ್ ಹಾಳಾಗಿದೆ. ಕಿಟಕಿ, ಬಾಗಿಲು, ಕನ್ನಡಿ, ಸೈರನ್, ಬ್ರೇಕ್, ಯಂತ್ರಗಳು ದಾರಿಯುದ್ದಕ್ಕೂ ತನ್ನದೇ ಆದ ನಾದ ಹೊರಡಿಸುತ್ತವೆ. ಇಂತಹ ಬಸ್‌ಗಳು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗುತ್ತಿವೆ.
ಬೆಂಗಳೂರು, ಹೈದ್ರಾಬಾದ, ಮುಂಬೈ, ಬೀದರ್, ಬಳ್ಳಾರಿ, ಹುಬ್ಬಳಿ, ರಾಯಚೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಉತ್ತಮವಾಗಿದೆ. ಹಲವಾರು ಎಕ್ಸ್‌ಪ್ರೆಸ್ ಬಸ್‌ಗಳು ಇದೇ ಹೆದ್ದಾರಿಯಲ್ಲಿ ಸಂಚರಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗಿವೆ. ಆದರೆ ಯಾದಗಿರಿ ಮತ್ತು ಕಲಬುರಗಿ ಘಟಕಗಳಿಂದ ಹೊರಡುವ ಕೆಲವು ಡಕೋಟಾ ಬಸ್‌ಗಳು ಹೆದ್ದಾರಿಯ ಉದ್ದೇಶವನ್ನೇ ಹಾಳು ಮಾಡಿವೆ.
ನಿಗದಿಪಡಿಸಲಾದ ದರ ನೀಡಿ ಪ್ರಯಾಣಿಸುವ ಜನರಿಗೆ ಗುಣಮಟ್ಟದ ಬಸ್ ಸೌಲಭ್ಯ ಒದಗಿಸುವಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಮತ್ತು ಯಾದಗಿರಿ ಘಟಕಗಳು ಸಂಪೂರ್ಣ ವಿಫಲವಾಗಿವೆ. ಹಳೆಯದಾದ ಬಸ್ ಗಳನ್ನು ಗುಜರಿಗೆ ಹಾಕದೇ ರಸ್ತೆಗೆ ಬಿಟ್ಟಿರುವುದು ಸರಿಯಲ್ಲ. ಈ ಎರಡೂ ಘಟಕದ ಅಧಿ ಕಾರಿಗಳು ಡಕೋಟಾ ಬಸ್ ಗಳನ್ನು ಹಿಂದಕ್ಕೆ ಪಡೆದು ಹೊಸ ಬಸ್‌ಗಳ ಸೌಕರ್ಯ ಒದಗಿಸಬೇಕು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದುರಸ್ತಿಗೆ ಬಂದಿರುವ ಯಾವ ಬಸ್‌ಗಳನ್ನು ಓಡಿಸುತ್ತಿಲ್ಲ. ಎಲ್ಲ ಉತ್ತಮ ಸ್ಥಿತಿಯ ಬಸ್ ಗಳು ಕಲಬುರಗಿ- ಯಾದಗಿರಿ ನಡುವೆ ಸಂಚರಿಸುತ್ತಿವೆ. ಹೆಚ್ಚು ಅಲುಗಾಡುತ್ತಿರುವ ಬಸ್ ಕುರಿತು ಪ್ರಯಾಣಿಕರ ಆರೋಪ ಎದೆ ಮೊದಲ ಸಲ ಕೇಳುತ್ತಿದ್ದೇವೆ. ಅಂತಹ ಯಾವ ಬಸ್ಸುಗಳಿವೆ ಎನ್ನುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
-ಮಂಜುನಾಥ ಮಾಯನ್ನವರ್, ಡಿಎಂ, ಈಶಾನ್ಯ ಸಾರಿಗೆ ಸಂಸ್ಥೆ, ಕಲಬುರಗಿ ಘಟಕ-1
ಗುಣಮಟ್ಟದ ಡಾಂಬರೀಕರಣದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಿದ್ದರೂ ವಾಡಿ-ಕಲಬುರಗಿ ಹಾಗೂ ವಾಡಿ-ಯಾದಗಿರಿ ನಡುವೆ ಕೆಲವು ಹಳೆಯ ಬಸ್‌ಗಳನ್ನು ಓಡಿಸಲಾಗುತ್ತಿದೆ. ಇವುಗಳಲ್ಲಿ ಪ್ರಯಾಣಿಸುವವರು ಹಿಂಸೆ ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೆ ಬಂದ ಮತ್ತು ಅವಧಿ ಮುಗಿದ ಬಸ್‌ಗಳನ್ನು ಹಿಂದಕ್ಕೆ ಪಡೆದು ಸುಸ್ಥಿತಿಯ ಬಸ್‌ಗಳನ್ನು ಒದಗಿಸಬೇಕು.
-ಯಶ್ವಂತ ಧನ್ನೇಕರ, ಪ್ರಯಾಣಿಕ
-ಮಡಿವಾಳಪ್ಪ ಹೇರೂರ