ಬಂದರು: ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಪ್ರಾಮುಖ್ಯ ಮೀನುಗಾರಿಕೆ ಬಂದರುಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದಿರುವ ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಬೋಟುಗಳು ನಿಲ್ಲಲು ಜಾಗವೇ ಇಲ್ಲ; ಸದ್ಯ ಒಂದರ ಹಿಂದೆ-ಮುಂದೆ, ಅಕ್ಕ- ಪಕ್ಕ ನಿಲ್ಲಿಸಿದ ಬೋಟ್‌ಗಳು ಒಂದಕ್ಕೊಂದು ಢಿಕ್ಕಿ ಹೊಡೆದು “ಸಂಘರ್ಷ’ದ ಪರಿಸ್ಥಿತಿ!
ಮಳೆಗಾಲದ ಸಮಯ ಮೀನುಗಾರಿಕೆಗೆ ರಜೆ ಇರುವ ಕಾಲದಲ್ಲಿ 2 ತಿಂಗಳು ಎಲ್ಲ ಬೋಟ್‌ಗಳಿಗೆ ಲಂಗರು ಹಾಕಲು ಮಂಗಳೂರು ಬಂದರಿನಲ್ಲಿ ಸ್ಥಳವಿಲ್ಲ. ಹೀಗಾಗಿಯೇ ಒಂದರ ಹಿಂದೆ ಒಂದರಂತೆ ಅನೇಕ ಸಾಲುಗಳಲ್ಲಿ ಬೋಟ್ ನಿಲ್ಲಿಸುವ ಪರಿಸ್ಥಿತಿಗೆ ಪರಿಹಾರವೇ ಸಿಕ್ಕಿಲ್ಲ!
ಮಂಗಳೂರು ಮೀನುಗಾರಿಕೆ ದಕ್ಕೆಗೆ ಒಳಪಟ್ಟಂತೆ ಪರ್ಸಿನ್, ಟ್ರಾಲ್‌ಬೋಟು ಸಹಿತ ಸುಮಾರು 1,500ಕ್ಕೂ ಅಧಿಕ ಬೋಟುಗಳು ಇವೆ. ದಕ್ಕೆಯಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಅವಕಾಶವಿದೆ. ಉಳಿದಂತೆ 1,250 ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿ ಕೊಳ್ಳಬೇಕಾಗಿದೆ.
ಒಂದರ ಹಿಂದೆ ಇನ್ನೊಂದ ರಂತೆ ಸುಮಾರು 10 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿದೆ. ಮರದ ಹಾಗೂ ಸ್ಟೀಲ್‌ಬೋಟುಗಳು ಇದರಲ್ಲಿ ಇರುವುದರಿಂದ ಬಹಳಷ್ಟು ಬಾರಿ ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ. ನೀರಿನ ಏರಿಳಿತಕ್ಕೆ ಒಂದಕ್ಕೊಂದು ಬೋಟ್‌ಗಳು ತಾಗಿ ಹಾನಿಯಾಗುತ್ತಿವೆ. ಇದರ ದುರಸ್ತಿಗಾಗಿ ಸಾವಿರಾರು ರೂಪಾಯಿಗಳನ್ನು ಬೋಟ್ ಮಾಲಕರು ವೆಚ್ಚ ಮಾಡಬೇಕಾತ್ತದೆ.
ಉದ್ದದ ಸಾಲುಗಳಲ್ಲಿ ನಿಂತ ಬಳಿಕವೂ ಬಹಳಷ್ಟು ಬೋಟುಗಳು ಸ್ಥಳವಾಕಾಶವನ್ನು ಹುಡುಕಿಕೊಂಡು ಇತರ ಕಡೆಗಳಿಗೆ ಸಾಗುತ್ತವೆ. ಅದರಂತೆ, ಬೆಂಗ್ರೆ, ಕಸ್ಬಾ ಬೆಂಗ್ರೆ, ಬೋಳೂರು, ಕುದ್ರೋಳಿ, ಕೂಳೂರು ಮುಂತಾದ ಕಡೆಗಳಲ್ಲಿ ನಿಲ್ಲುತ್ತವೆ.
ಮೀನುಗಾರ ಮುಖಂಡರಾದ ಮೋಹನ್ ಬೆಂಗ್ರೆ “ಸುದಿನ’ ಜತೆಗೆ ಮಾತನಾಡಿ, “ಪ್ರಸ್ತುತ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಬೋಟುಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ಬೋಟುಗಳು ಎಲ್ಲೆಲ್ಲೋ ನಿಲ್ಲಿಸುವಂತಾ ಗಿದೆ. ಸಾವಿರಾರು ಬೋಟುಗಳು ಈ ವ್ಯಾಪ್ತಿಯಲ್ಲಿ ಬಂದು ಹೋಗುವುದರಿಂದ ದಕ್ಕೆ ಇನ್ನಷ್ಟು ಅಗಲವಾಗಬೇಕಾಗಿದೆ. ಮೂರನೇ ಹಂತದ ಜೆಟ್ಟಿಯ ವಿಸ್ತರಣೆ ಆದಷ್ಟು ಬೇಗ ನಡೆಸಿದರೆ ಬಹುತೇಕ ಸಮಸ್ಯೆ ಪರಿಹಾರವಾಗುತ್ತದೆ. ಈ ಬಗ್ಗೆ ಸರಕಾರ ವಿಶೇಷ ಆದ್ಯತೆ ನೀಡಬೇಕಿದೆ’ ಎನ್ನುತ್ತಾರೆ.