ಚಿಕ್ಕಮಗಳೂರು: ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶ್ವಾನ “ಡೈಸಿ’ ಸೋಮವಾರ ಬೆಳಗ್ಗೆ ಮೃತಪಟ್ಟಿದೆ. ಜಿಲ್ಲೆಯಲ್ಲಿ ನಡೆದಿದ್ದ 8 ಕೊಲೆ ಹಾಗೂ 20 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದ ಡೈಸಿ ಕ್ಯಾನ್ಸರ್‌ನಿಂದ
ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಏಳು ವರ್ಷಗಳ ವೃತ್ತಿ ಬದುಕಿನಲ್ಲಿ 8 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಲ್ಲದೆ ಕಳ್ಳತನದ 15 ಪ್ರಕರಣಗಳ ಬೆನ್ನತ್ತಿ ಯಶಸ್ವಿಯಾದ ಡೈಸಿ, ಇತರೆ 30 ಪ್ರಕರಣಗಳಲ್ಲಿ ಅದ್ಭುತವೆನಿಸುವ ಸುಳಿವುಗಳನ್ನು ನೀಡಿತ್ತು. ಡೈಸಿಯ ಈ ಚಾಕಚಕ್ಯತೆ ಪೊಲೀಸರ ಅರ್ಧದಷ್ಟು ಶ್ರಮವನ್ನು ಕಡಿಮೆ ಮಾಡುತ್ತಿತ್ತು. ಪೊಲೀಸ್ ಡಾಗ್ ಡೈಸಿ ಇದೇ ಕಾರಣಕ್ಕೆ ಪೊಲೀಸರ ಪ್ರೀತಿಗೂ ಪಾತ್ರವಾಗಿತ್ತು.
ಆದರೆ, ಮೈಗಂಟಿಕೊಂಡಿದ್ದ ಕ್ಯಾನ್ಸರ್ 3 ತಿಂಗಳಿಂದ ಡೈಸಿಯನ್ನು ಹೈರಾಣಾಗಿಸಿತ್ತು. ನಿರಂತರ ಚಿಕಿತ್ಸೆಯೂ ಫಲಿಸದೆ ಸೋಮವಾರ ಮೃತಪಟ್ಟ ಡೈಸಿಯ ಮೃತದೇಹದ ಮುಂದೆ ಅದರ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮರುಗುತ್ತಿದ್ದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಜತೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಡೈಸಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ, “ಡೈಸಿ’ ಜಿಲ್ಲಾ ಪೊಲೀಸ್
ಶ್ವಾನದಳದಲ್ಲಿ ಅಚುಮೆಚ್ಚಿನದಾಗಿತ್ತು. ಅದಕ್ಕೆ ಕ್ಯಾನ್ಸರ್ ಕಾಣಿಸಿಕೊಂಡಿದ್ದರಿಂದ 1 ವರ್ಷದಿಂದ ಆರೈಕೆ ಮಾಡಲಾಗುತ್ತಿತ್ತು. ಕಳೆದ 3 ತಿಂಗಳಿಂದ ಕಾಯಿಲೆ ಉಲ್ಬಣಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎಂದರು.
ಬಸವನಹಳ್ಳಿ ಠಾಣೆ ಪಿಎಸ್‌ಐ ನಂದಿನಿ ಶೆಟ್ಟಿ, ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಕೆ.ಎನ್.ರಮ್ಯಾ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.