ಕಟಪಾಡಿ: ಮೊದಲು ಉಪಕಸುಬಾಗಿದ್ದ ಹೈನುಗಾರಿಕೆಯು ಇದೀಗ ಹೈನೋದ್ಯಮವಾಗಿ ಬೆಳೆದು ನಿಂತಿದೆ. ಗ್ರಾಮೀಣ ಭಾಗದ ಹೈನುಗಾರರ ಆರ್ಥಿಕ ಸಬಲತೆಗೆ ಕಾರಣವಾಗಿದೆ. ಆ ನಿಟ್ಟಿನಲ್ಲಿ ಮರ್ಣೆ -ಕನರಾಡಿ ಹೈನುಗಾರರಿಗೆ ಮತ್ತು ಈ ಭಾಗದ ಶ್ರೇಯೋಭಿವೃದ್ಧಿಗೆ ಸಂಘದ ನೂತನ ಕಟ್ಟಡ, ಸಾಂದ್ರ ಹಾಲು ಶೀತಲೀಕರಣ ಘಟಕ ದೊಡ್ಡ ಕೊಡುಗೆಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮರ್ಣೆ -ಕನರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ, ಸಾಂದ್ರ ಹಾಲು ಶೀತಲೀಕರಣ ಘಟಕದ ಉದ್ಘಾಟನೆಯ ಸಮಾರಂಭದಲ್ಲಿ ಬಿ.ಎಂ.ಸಿ. ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಕಟ್ಟಡವನ್ನು ಉದ್ಘಾಟಿಸಿದ ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಮಾತನಾಡಿದರು.
ಸಂಘದ ಅಧ್ಯಕ್ಷ ಕರುಣಾಕರ ಕರ್ಕೇರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಫಿಲಿಪ್ ಫೆರ್ನಾಂಡೀಸ್ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಶುಭ ಹಾರೈಸಿದರು.
ಸಮಾರಂಭದಲ್ಲಿ ಸ್ಥಳದಾನಿ, ದಾನಿಗಳ ಸಹಿತ ಸಂಘದ ಪ್ರಮುಖರು, ಸಿಬಂದಿಯವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಡಿ.ಗೋಪಾಲಕೃಷ್ಣ ಕಾಮತ್, ವ್ಯವಸ್ಥಾಪಕ ನಿರ್ದೇಶಕ ಡಾ| ಜಿ.ವಿ. ಹೆಗ್ಡೆ, ಉಪವ್ಯವಸ್ಥಾಪಕ (ಬಿಎಂಸಿ ಎಂಜಿನಿಯರ್) ಎ.ಉಪೇಂದ್ರ, ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ವಿಲ್ಸನ್ ರೋಡ್ರಿಗಸ್, ತಾಲೂಕು ಪಂಚಾಯತ್ ಸದಸ್ಯೆ ಸಂಧ್ಯಾ ಶೆಟ್ಟಿ, ಮಣಿಪಾಲ ಡೇರಿ ಉಪವ್ಯವಸ್ಥಾಪಕ ಡಾ|ಅನಿಲ್ ಕುಮಾರ್ ಶೆಟ್ಟಿ, ಸಂಘದ ಉಪಾಧ್ಯಕ್ಷ ಚಾರ್ಲ್ಸ್ ಡಿ’ಸೋಜ, ಸಂಘದ ಆಡಳಿತ ಮಂಡಳಿ, ಕಟ್ಟಡ ರಚನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಪಿ. ಕೇಶವಮೂರ್ತಿ ಬೆಲ್ಪತ್ರೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಆನಂದ ವರದಿ ನೀಡಿದರು. ಪದ್ಮನಾಭ ಹೆಗ್ಡೆ ವಂದಿಸಿದರು. ವಿಸ್ತರಣಾಧಿಕಾರಿ ಯಶವಂತ್ ನಿರೂಪಿಸಿದರು.
ಶೀತಲೀಕರಣ ಘಟಕ
ಹಾಲಿನ ತಾಜಾತನ ಉಳಿಸಲು, ಗುಣಮಟ್ಟವನ್ನು, ಪೋಷಕಾಂಶವನ್ನು ಕಾಪಾಡುವ ಮೂಲಕ ಹಾಲಿನ ಜೀವಿತಾವಧಿಯನ್ನು ಗರಿಷ್ಠಾವಧಿ ಉಳಿಸಿಕೊಳ್ಳಲು ಈ ಶೀತಲೀಕರಣ ಘಟಕ ಸಹಕಾರಿಯಾಗಲಿದೆ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು ಅವರು ಹೇಳಿದರು.