ಐದು ಎಮ್ಮೆಗಳನ್ನು ಸಾಕಿ ಹೈನುಗಾರಿಕೆಯನ್ನೇ ಪ್ರಮುಖ ವೃತ್ತಿ ಮಾಡಿಕೊಂಡ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪಾರ್ವತಿ ಪಾಟೀಲರು ನೆಮ್ಮದಿಯಿಂದ ಸುಂದರ ಬದುಕು ಸಾಗಿಸುತ್ತಿರುವುದು ನಿಜಕ್ಕೂ ಆದರ್ಶ.
ಬಸವನಬಾಗೇವಾಡಿ ಪಟ್ಟಣದ ಬಸವಜನ್ಮ ಸ್ಮಾರಕ ಹತ್ತಿರವಿರುವ ಪಾರ್ವತಿ ಪಾಟೀಲ ಕಳೆದ 10 ವರ್ಷಗಳಿಂದ ಒಂದು ಗೌಳಿಗೇರ ಹಾಗೂ 4 ಜುವಾರಿ ಎಮ್ಮೆಗಳನ್ನು ಸಾಕುತ್ತಿದ್ದಾರೆ. ತಿಂಗಳಿಗ ಇದರಿಂದ 15 ಸಾವಿರ ರೂಗಳನ್ನು ಸಂಪಾದಿಸುತ್ತಿದ್ದಾರೆ.
ಒಂದು ಎಮ್ಮೆಯು ಬೆಳಗ್ಗೆ 3ಲೀ ಹಾಗೂ ರಾತ್ರಿ 3 ಲೀಟರನಂತೆ ಹಾಲು ನೀಡುತ್ತವೆ. ಹೀಗಾಗಿ ಐದು ಎಮ್ಮೆಗಳು ನಿತ್ಯ 30 ಲೀಟರ್ ಹಾಲನ್ನು ನೀಡುತ್ತವೆ. ಪಟ್ಟಣದ ಮನೆಮನೆಗೆ ಲೀಟರಗೆ 30 ರಿಂದ 40 ರೂ. ನಂತೆ ಹಾಲು ಸರಬರಾಜು ಮಾಡುತ್ತಾರೆ.
ಎಮ್ಮೆಗಳಿಗೆ ಬೆಳಗಿನ ಜಾವ ಜೋಳದ ಕನಿಕೆ, ತೊಗರಿ ಒಟ್ಟು, ಗೋದಿ ನೆಲ್ಲು, ಅಕ್ಕಿ ನೆಲ್ಲು, ಹಿಂಡಿ, ಹತ್ತಿಕಾಳನ್ನು ಒಂದು ಪುಟ್ಟಿ ಆಹಾರವನ್ನಾಗಿ ನೀಡುತ್ತಾರೆ. ಮಳೆಗಾಲದ ಸಮಯದಲ್ಲಿ ಹಸಿ ಮೇವು ನೀಡುತ್ತಾರೆ. ನಿತ್ಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹೊರಗಡೆ ತೆರಳಿ ಮೇಯಿಸಿಕೊಂಡು ಬರುತ್ತಾರೆ. ಬೆಳಗ್ಗೆ, ರಾತ್ರಿ ಎಮ್ಮೆ ವಾಸಿಸುವ ಅಂಕಣವನ್ನು ಸ್ವಚ್ಚವಾಗಿಡುತ್ತಾರೆ.
ಇವುಗಳಿಗೆ ರೋಗ ರುಜಿನುಗಳು ಬರುವುದು ಬಹಳ ಕಡಿಮೆ. ಜ್ವರ ಬರುವುದು ಬಿಟ್ಟರೆ ಬೇರೆ ರೋಗಗಳು ಬರುವುದಿಲ್ಲ. ಮಳೆಗಾಲದ ಸಂದರ್ಭದಲ್ಲಿ ಮೇವಿನ ಕೊರತೆ ಕಾಣುತ್ತದೆ. ಈಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಯೋಜನೆಯಡಿ 35 ಸಾವಿರರೂ. ಸಾಲ ಪಡೆದುಕೊಂಡು ಮತ್ತೂಂದು ಎಮ್ಮೆ ಖರೀದಿ ಮಾಡಿರುವೆ. ಸಧ್ಯ ಇವರು ಆರು ಎಮ್ಮೆಗಳೊಂದಿಗೆ 4 ಮೇಕೆಗಳನ್ನು ಕೂಡ ಸಾಕಿದ್ದಾರೆ. ಒಂದು ಮೇಕೆ 3 ತಿಂಗಳಿಗೊಮ್ಮೆ ಒಂದು ಮರಿ ಹಾಕುತ್ತದೆ. ಹೀಗಾಗಿ ಅದರಿಂದ ಕನಿಷ್ಟ ಸಾವಿರ ರೂಗಳಿಗೊಂದರಂತೆ ಮಾರಿದರೂ ಒಂದು ವರ್ಷದಲ್ಲಿ 10ರಿಂದ 15 ಮರಿಗಳನ್ನು ಮಾರಿ ವರ್ಷಕ್ಕೆ 60 ಸಾವಿರ ರೂಗಳ ಲಾಭ ಗ್ಯಾರಂಟಿಯಾಗಿದೆ.
“ಪತಿ ನಿಂಗನಗೌಡ, ಪುತ್ರ ಶಂಕರಗೌಡ, ಪುತ್ರಿ ನಿರ್ಮಲ ಹಾಗೂ ಅಣ್ಣ ಇವರೆಲ್ಲರ ಸಹಕಾರದಿಂದ ತಿಂಗಳಿಗೆ ಹೈನುಗಾರಿಕೆಯಿಂದ 15 ಸಾವಿರ ರೂ, ಮೇಕೆಗಳ ಮರಿಗಳ ಮಾರಾಟದಿಂದ ವರ್ಷಕ್ಕೆ 60 ಸಾವಿರ ಹಾಗೂ ಎರಡುವರೆ ಎಕರೆ ಒಣಬೇಸಾಯದಿಂದ 50 ಸಾವಿರ ರೂಗಳು ಹೀಗೆ ವರ್ಷಕ್ಕೆ 3 ಲಕ್ಷ ರೂಗಳ ಆದಾಯ ನನಗೆ ಸಿಗುತ್ತದೆ’ ಖುಷಿಯಿಂದ ಹೇಳುತ್ತಾರೆಪಾರ್ವತಿ.
ಗುರುರಾಜ.ಬ.ಕನ್ನೂರ.ಆರೂಢನಂದಿಹಾಳ.