Advertisement

ಡಾ.ರಾಜ್‌ಗೆ ಇಲ್ಲಿ ನಿತ್ಯ ಪೂಜೆ

11:35 AM Apr 24, 2019 | Team Udayavani |

ಕೋಲಾರ: ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್‌ಗೆ ನಗರದ ಈ ಅಭಿಮಾನಿ ಕುಟುಂಬದಲ್ಲಿ ನಿತ್ಯ ಪೂಜೆ, ನಾಮಸ್ಮರಣೆ ನಡೆಯುತ್ತದೆ. ನಗರದ ಕುರುಬರ ಪೇಟೆಯ ಕೋ.ನಾ.ಪ್ರಭಾಕರ್‌ ಕುಟುಂಬ ಕನ್ನಡಕ್ಕಾಗಿ ಕೈ ಎತ್ತಲು ಸದಾ ಸಿದ್ಧ. ಅದರಲ್ಲೂ ಡಾ.ರಾಜ್‌ಕುಮಾರ್‌ ಕುರಿತು ಈ ಕುಟುಂಬದ ಸದಸ್ಯರಿಗೆ ಅಭಿಮಾನ. 25 ವರ್ಷಗಳಿಂದಲೂ ಹುಟ್ಟುಹಬ್ಬವನ್ನು ತಪ್ಪದೇ ಆಚರಿಸುವ ಈ ಕುಟುಂಬವು 2006ರಿಂದ ಡಾ.ರಾಜ್‌ ಪುಣ್ಯ ಸ್ಮರಣೆಯನ್ನು ಕನ್ನಡಿಗರ ಜಾಗೃತಿ, ಸ್ವಾಭಿಮಾನ ಸಂಕೇತದ ದಿನವಾಗಿ ಆಚರಿಸುತ್ತದೆ.

Advertisement

ಮನೆ ರಾಜ್‌ಮಯ: ಕೋ.ನಾ.ಪ್ರಭಾಕರ ಅವರ ಮನೆ ಡಾ.ರಾಜ್‌ ಭಾವಚಿತ್ರಗಳಿಂದ ಅಲಂಕೃತವಾಗಿದೆ. ಡಾ.ರಾಜ್‌ರನ್ನು ಶ್ರೀನಿವಾಸ, ಕನಕದಾಸ, ಭಕ್ತಕುಂಬಾರ, ಭಗವಾನ್‌ ಬುದ್ಧರಾಗಿಯೂ ಭಕ್ತಿಭಾವದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರತಿನಿತ್ಯ ಕೋ.ನಾ.ಪ್ರಭಾಕರ್‌ ಮತ್ತು ಕುಟುಂಬದ ಸದಸ್ಯರು ಈ ಭಾವಚಿತ್ರಗಳಿಗೆ ದೇವರ ಜೊತೆಗೆ ಪೂಜೆ ಸಲ್ಲಿಸುತ್ತಾರೆ.

5 ದಶಕಗಳ ಕನ್ನಡ ಸೇವೆ: ಕೋ.ನಾ.ಪ್ರಭಾಕರ್‌ ಕುಟುಂಬವು ಗಡಿ ಜಿಲ್ಲೆ ಕೋಲಾರದಲ್ಲಿ ಐದು ದಶಕಗಳಿಂದಲೂ ಕನ್ನಡ ಸೇವೆ ನಡೆಸಿಕೊಂಡೇ ಬರುತ್ತಿದೆ. ಪರಭಾಷಾ ಭಿತ್ತಿಫ‌ಲಕ, ನಾಮಫ‌ಲಕಗಳ ವಿರುದ್ಧ ಆರಂಭವಾದ ಇವರ ಹೋರಾಟವು ಕನ್ನಡ ಚಳವಳಿ ರೂಪತಳೆದು, ಡಾ.ರಾಜ್‌ಅಭಿಮಾನದಲ್ಲಿ ನೆಲೆಗೊಂಡಿದೆ. ಐದು ದಶಕಗಳಲ್ಲಿ ಕೋ.ನಾ.ಪ್ರಭಾಕರ್‌ರ ಕುಟುಂಬದ ಸದಸ್ಯರು ಅನೇಕ ಕನ್ನಡ ಚಳವಳಿಗಳಲ್ಲಿ ಪಾಲ್ಗೊಂಡಿದ್ದಾರೆ. ಗೋಕಾಕ್‌ ಚಳವಳಿ ವೇಳೆ ಡಾ.ರಾಜ್‌ಕುಮಾರ್‌ರನ್ನು ಕೋಲಾರಕ್ಕೆ ಆಹ್ವಾನಿಸಿ ಜನಸ್ತೋಮದ ನಡುವೆ ಗಡಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನದ ಕಿಡಿ ಹೊತ್ತಿಸುವಲ್ಲಿ ಸಫ‌ಲವಾಗಿದ್ದಾರೆ.

ಡಾ.ರಾಜ್‌ ಹುಟ್ಟುಹಬ್ಬ: ಕೋಲಾರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಕನ್ನಡ ಪಕ್ಷದ ಮೂಲಕ ಕನ್ನಡ ಸೇವೆ ನಡೆಸುತ್ತಿದ್ದವರಿಗೆ ಮೈಸೂರು ರಾಮೇಗೌಡರ ಅಧ್ಯಕ್ಷತೆಯಲ್ಲಿ ಡಾ.ರಾಜ್‌ಅಭಿಮಾನಿಗಳ ಸಂಘ ಆರಂಭಿಸಿದಾಗ ಕೋಲಾರದಲ್ಲೂ ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘಕ್ಕೆ ಚಾಲನೆ ನೀಡಿದ್ದರು. ಆ ನಂತರ ಸಾ.ರಾ.ಗೋವಿಂದು ಅಧ್ಯಕ್ಷರಾದ ನಂತರ ಕೋಲಾರದಲ್ಲಿಯೂ ಡಾ.ರಾಜ್‌ಅಭಿಮಾನಿ ಸಂಘದ ಚಟುವಟಿಕೆ ಚುರುಕುಗೊಳಿಸಿದರು.

25 ವರ್ಷಗಳಿಂದಲೂ ನಗರ ದೇವತೆ ಕೋಲಾರಮ್ಮ ಹಾಗೂ ಸೋಮೇಶ್ವರಸ್ವಾಮಿ ದೇಗುಲಗಳಲ್ಲಿ ಈ ಸಂಘದಿಂದ ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಅನ್ನದಾನ ನಡೆಸಲಾಗುತ್ತಿತ್ತು.

Advertisement

ಡಾ.ರಾಜ್‌ 2006ರಲ್ಲಿ ನಿಧನರಾದ ನಂತರ ಅವರ ಪುಣ್ಯ ಸ್ಮರಣೆಯನ್ನು ಗಾಂಧಿವನದಲ್ಲಿ ಕನ್ನಡಿಗರ ಜಾಗೃತಿ ಸ್ವಾಭಿಮಾನದ ಸಂಕೇತದ ದಿನವನ್ನಾಗಿ ಕೋ.ನಾ.ಪ್ರಭಾಕರ ಕುಟುಂಬದ ಸದಸ್ಯರೆಲ್ಲರೂ ಆಚರಿಸಿಕೊಂಡು ಬರುತ್ತಿದ್ದಾರೆ.

ಅಭಿಮನಿಗಳಿಗೆ ಪ್ರಶಸ್ತಿ: ಕೋ.ನಾ.ಪ್ರಭಾಕರ ಕುಟುಂಬವು ಪ್ರತಿವರ್ಷ ಡಾ.ರಾಜ್‌ ಹುಟ್ಟುಹಬ್ಬದಂದು ಜಿಲ್ಲೆಯ ಡಾ.ರಾಜ್‌ ಅಭಿಮಾನಿಯನ್ನು ಗುರುತಿಸಿ ಅಭಿಮಾನಿ ಕನ್ನಡಿಗ ಪ್ರಶಸ್ತಿ ಹೆಸರಿನಲ್ಲಿ ಸನ್ಮಾನಿಸಲಾಗುತ್ತದೆ. ಈವರೆಗೂ ಡಾ.ರಾಜ್‌ಕುಮಾರ್‌ ಅಭಿಮಾನಿಗಳಾದ ಕುರುಬರಪೇಟೆ ಕೃಷ್ಣಪ್ಪ, ಸುಲೇಮಾನ್‌ ಖಾನ್‌, ಮಾಲೂರು ಸಿದ್ದಪ್ಪ, ಕೆಜಿಎಫ್ನ ಪ್ರಕಾಶ್‌, ಗಜೇಂದ್ರರಾವ್‌ ಮತ್ತು ಮ.ಕೃ.ಪದ್ಮನಾಭ್‌ರಾವ್‌ ಪ್ರಶಸ್ತಿ ಸ್ಪೀಕರಿಸಿದ್ದಾರೆ. ಈ ಬಾರಿಯ ಪ್ರಶಸ್ತಿಗೆ ಹಿಂದೆ ಡಾ.ರಾಜ್‌ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದ ಸೊ.ನ.ಅಶ್ವತ್ಥಪ್ಪ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಮ.ನ.ರಾಮಮೂರ್ತಿ ಸ್ಮರಣೆಯಲ್ಲಿ ಕನ್ನಡದ ಕಟ್ಟಾಳು ಪ್ರಶಸ್ತಿಯನ್ನು ಒಬ್ಬ ಕನ್ನಡ ಹೋರಾಟಗಾರರಿಗೆ ನೀಡಲಾಗುತ್ತಿದೆ. ಈ ಬಾರಿಯ ಪ್ರಶಸ್ತಿಗೆ ಎ.ಜಿ.ಗುರುÍಾಂತ ಪ್ಪರನ್ನು ಆಯ್ಕೆ ಮಾಡಲಾಗಿದೆ.

ಅನ್ನದಾನ – ನೇತ್ರದಾನ: ಡಾ.ರಾಜ್‌ರ ಹುಟ್ಟು ಹಬ್ಬ ಮತ್ತು ಪುಣ್ಯ ಸ್ಮರಣೆಯ ದಿನ ಅವರಿಗೆ ಪ್ರಿಯವಾದ ಟೊಮೆಟೋ ಬಾತ್‌ ವಿತರಿಸಲಾಗುತ್ತದೆ. ನೇತ್ರದಾನಕ್ಕೂ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕೋ.ನಾ.ಪ್ರಭಾಕರ ಅವರ ಪತ್ನಿ, ಪುತ್ರ, ಪುತ್ರಿ, ಗೆಳೆಯ ನಾ.ಮಂಜುನಾಥ್‌, ಡಾ.ರಾಜ್‌ ಕೈಂಕರ್ಯದಲ್ಲಿ ಕೈಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next