ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮೂರು ದಿನಗಳಿಂದ ಒಂಟಿ ಸಲಗವು ಆಗಾಗ ಕಾಣಿಸಿಕೊಳ್ಳುತ್ತ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.
ರವಿವಾರ ರಾತ್ರಿ ಒಂದನೇ ತಿರುವಿನ ಸಮೀಪ ಕಂಡುಬಂದಿತ್ತು. ಸೋಮವಾರ ರಾತ್ರಿ ಎರಡು ಹಾಗೂ ಮೂರನೇ ತಿರುವಿನ ಬಳಿ ವಾಹನ ಸವಾರರು ಕಾಡಾನೆಯನ್ನು ಕಂಡಿದ್ದಾರೆ.
ಮಂಗಳವಾರ ಬೆಳಗ್ಗೆ 2ನೇ ತಿರುವಿನ ಬಳಿ ರಸ್ತೆ ಮಧ್ಯೆ ನಿಂತು ಈಚಲು ಮರದ ಎಲೆ ತಿನ್ನುತ್ತಿತ್ತು.ಈ ಹಿಂದೆಯೂ ಎರಡು ಮೂರು ಬಾರಿ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ಕಂಡು ಬಂದಿತ್ತು. ಈ ವರೆಗೆ ವಾಹನ ಸವಾರರಿಗೆ ಹಾನಿ ಮಾಡದೇ ಇದ್ದರೂ ಅಪಾಯದ ಭೀತಿ ಇದ್ದದ್ದೇ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಕಾಡಾನೆ ನಿರಂತರ ಕಂಡು ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಕಾಡಾನೆಯನ್ನು ಕಂಡಾಗ ಜನ ಬೊಬ್ಬೆ ಹೊಡೆಯುವುದು, ಅಟ್ಟುವ ಪ್ರಯತ್ನ ಮಾಡಿದಾಗ ಆನೆ ರೊಚ್ಚಿಗೆದ್ದು ಜೀವ ಹಾನಿಯಾದಲ್ಲಿ ಯಾರು ಹೊಣೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.