ವಿಜಯಪುರ: ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡಿದ್ದ ರಾಜಸ್ತಾನ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಲಾಕ್ ಡೌನ್ ಹಿನ್ನೆಲೆಯಲ್ಲಿ ತವರಿಗೆ ಮರಳುವಾಗ ವಿಜಯಪುರ ಜಿಲ್ಲೆಯ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಶನಿವಾರ ನಸುಕಿನಲ್ಲಿ ಮಹಾರಾಷ್ಟ್ರ ರಾಜ್ಯದ ಗಡಿ ಪ್ರದೇಶಕ್ಕೆ ಮುನ್ನ ರಾಜ್ಯದ ಧೂಳಖೇಡ ಚಕಪೋಸ್ಟ್ ನಲ್ಲಿ ಕ್ಯಾಂಟರ್, ಲಾರಿಗಳನ್ನು ಪರಿಶೀಲಿಸಿದಾಗ ಮಾನವ ಸಾಗಾಣಿಕೆ ಕಂಡುಬಂದಿದೆ.
ಲಾಕ್ ಡೌನ್ ಬಳಿಕ ಕೂಲಿ ಕೆಲಸ ಇಲ್ಲವಾಗಿ ಸಂಕಷ್ಟಕ್ಕೆ ಸಿಲುಕಿರುವ ತಾವು ಹೊರಗೂ ತಿರುಗುವಂತಿಲ್ಲ, ಕುಟುಂಬ ನಿರ್ವಹಣೆಗೆ ಆಹಾರ ಧಾನ್ಯದ ಕೊರತೆಯೂ ಎದುರಾಗಿತ್ತು. ಯಾರೂ ತಮ್ಮ ನೆರವಿಗೆ ಬಾರದ ಕಾರಣ ತಾವು ಅನಿವಾರ್ಯವಾಗಿ ತವರಿಗೆ ಮರಳಲು ಮುಂದಾಗಿದ್ದಾಗಿ ಗಡಿಯಲ್ಲಿ ತಡೆಯಲಾಗಿರುವ ಅನ್ಯ ರಾಜ್ಯಗಳ ಕಾರ್ಮಿಕರು ಸಮಸ್ಯೆ ಹೇಳಿಕೊಂಡಿದ್ದಾರೆ.
ಗಡಿಯಲ್ಲಿ ತಡೆಯಲಾದ ಈ ಎಲ್ಲ ಕಾರ್ಮಿಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಬಳಿಕ ಅನ್ಯ ರಾಜ್ಯಗಳ ಸುಮಾರು 1500 ಜನ ಈ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಕಾರ್ಮಿಕರಿಗೆ ಧೂಳಖೇಡ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪುನರ್ವಸತಿ ಕಲ್ಪಿಸಿ ಅಗತ್ಯ ಇರುವ ಎಲ್ಲ ಮುನ್ನೆಚ್ಚರಿಕೆ ಕೈಗೊಳಗಳುವ ಜೊತೆಗೆ ಊಟ, ಉಪಹಾರ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.