Advertisement

ಬಾಳೆ ಬಗಸಿ ಬಿಟ್ಟ್  ಕಾಯೂದಾಗೇತ್ರೀ

04:16 PM Oct 13, 2018 | Team Udayavani |

ರಾಮದುರ್ಗ: ಮನ್ಯಾನ್‌ ಕೆಲಸ್‌ ಬಿಟ್‌ ಉತಾರ್‌ ಸಲುವಾಗಿ ಕಾದ್‌ ನಿಂದ್ರುದಾಗೇತ್ರಿ.. ಹೊತ್ತ್ ಏರಿದ್‌ ಕೂಡಲೆ ಬಂದ್‌ ನಿಂತಾಗ ಮಾತ್ರ ಉತಾರ ಸಿಗತಾವ್ರಿ. ಅದೇನ್‌ ನೆಟ್ಟ್ ಅಂತರಿ ಅದ ಹೋತಂದ್ರ್ ಉತಾರ್‌ ಸಿಗಂಗಿಲ್ರೀ.ಬಾಳೆ ಬಗಸಿ ಬಿಟ್ಟ್ ಸಂಜಿತನಕಾ ನಿಂತ ಹೊತ್‌ ಕಳೆಯೋದಾಗೈತ್ರೀ.

Advertisement

ಇದು ತಾಲೂಕಿನಲ್ಲಿ ಪಹಣಿ ಪತ್ರ ಪಡೆಯಲು ಬರುವ ರೈತರ ಗೋಳು. ರಾಜ್ಯ ಸರಕಾರದ ಸಾಲ ಮನ್ನಾ ವಿಚಾರವಾಗಿ ಸಾಲಗಾರರ ವಿವಿಧ ದಾಖಲಾತಿ ಕೇಳಿದ ಹಿನ್ನೆಲೆಯಲ್ಲಿ ಸಾಲ ಪಡೆದ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಬೇಕಾದ ಪಹಣಿ ಪಡೆಯಲು ರೈತರು ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಸರದಿಯಲ್ಲಿ ನಿಂತು ಪಡೆಯಬೇಕಾದ ಪರಸ್ಥಿತಿ ಇದೆ. 

ದೂರದ ಊರಿನಿಂದ ಬರುವ ಗ್ರಾಮಸ್ಥರು ಕೆಲಸ ಕಾರ್ಯ ಬಿಟ್ಟು ದಿನವಿಡೀ ಕಾಯುವ ಸ್ಥಿತಿ ಒಂದೆಡೆಯಾದರೆ. ತಾಂತ್ರಿಕ ಸಮಸ್ಯೆಗಳೇನಾದರೂ ಎದುರಾದರೆ ಉತಾರ ಇಲ್ಲದೇ ಊರಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎನ್ನುವುದು ಪಹಣಿ ಪತ್ರಕ್ಕಾಗಿ ಕಾದು ನಿಂತ ಅಸಹಾಯಕ ವೃದ್ಧರ ದೂರು.

ಬೆಳೆ ವಿಮೆ, ಸಾಲ ಪಡೆಯಲು ಸೇರಿದಂತೆ ಇನ್ನಿತರ ಸೌಲಭ್ಯಕ್ಕಾಗಿ ಪಹಣಿ ಪತ್ರ ಅವಶ್ಯಕ. ಒಂದು ಪಹಣಿ ಪತ್ರ ಪಡೆಯಲು ದಿನವಿಡಿ ಕೆಲಸ ಬಿಟ್ಟು ಹೋಬಳಿ ಅಥವಾ ತಾಲೂಕು ಕಚೇರಿಗೆ ಬರಬೇಕಾದ ಪರಸ್ಥಿತಿ ಇದೆ. ಖಾಸಗಿ ಕಂಪ್ಯೂಟರ್‌ ಕೇಂದ್ರಗಳಲ್ಲಿ ಪಡೆಯಲು ಅವಕಾಶವಿದ್ದರೂ ಅಲ್ಲಿ 20-30 ರೂ. ಶುಲ್ಕ ಪಡೆಯುತ್ತಾರೆ. ಹೀಗಾಗಿ ಅನಿವಾರ್ಯವಾಗಿ ತಾಲೂಕು ಕಚೇರಿಯಲ್ಲಿಯೇ ಪಡೆಯಬೇಕಾಗಿದೆ ಎನ್ನುವುದು ಸಾಕಷ್ಟು ರೈತರ ಅಳಲು.

ತಹಶೀಲ್ದಾರ್‌ ಕಚೇರಿಯಲ್ಲಿ ಪಹಣಿ ಪತ್ರ ನೀಡುವ ಸಿಬ್ಬಂದಿ ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯ ನಿರ್ವಹಿಸಿದರೂ ಪಹಣಿ ಪತ್ರ ಪಡೆಯುವ ರೈತರ ಸಂಖ್ಯೆ ಮಾತ್ರ ಕಡಿಮೆ ಯಾಗುತ್ತಿಲ್ಲ. ಈ ಕಾರಣದಿಂದಾಗಿ ಗ್ರಾಪಂ ಮಟ್ಟದಲ್ಲಿ ಪಹಣಿ ನೀಡಲು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳದಿರುವ ಕಾರಣ ರೈತರು ತೊಂದರೆ ಪಡಬೇಕಾಗಿದೆ ಎನ್ನುವುದು ಕಂದಾಯ ಇಲಾಖೆಯ ಅಧಿಕಾರಿಗಳ ಅಸಮಾಧಾನ.

Advertisement

ಸರಕಾರದವರು ಯಾವುದೇ ಯೋಜನೆ ತಂದರೂ ಅದಕ್ಕೆ ನೂರೆಂಟು ಮಾಹಿತಿ ಕೇಳುತ್ತಾರೆ. ಅವುಗಳನ್ನು ಪಡೆಯಬೇಕಾದರೆ ವಾರಗಟ್ಟಲೇ ಅಲೆದಾಡಬೇಕು. ಅಗತ್ಯ ದಾಖಲೆಗಳನ್ನು ಗ್ರಾಪಂ ಮಟ್ಟದಲ್ಲಿ ನೀಡುವ ವ್ಯವಸ್ಥೆಯಾದರೆ ಒಂದು ದಿನದಲ್ಲಿ ಕೆಲಸ ಮುಗಿಯುತ್ತದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು ಅದನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಹಾಗೂ ಸರಕಾರ ಮುಂದಾಗದೆ ಇರುವುದು ಬೇಸರ ತರಿಸಿದೆ ಎಂದು ತಾಲೂಕಿನ ದಾಡಿಬಾಂವಿ ಗ್ರಾಮದ ರೈತ ಹನಮಂತ ಜೋಗೆಲ್ಲಪ್ಪನವರ ಬೇಸರ ವ್ಯಕ್ತಪಡಿಸುತ್ತಾರೆ.

ಸರಕಾರದ ಒಂದು ಯೋಜನೆಯ ಸೌಲಭ್ಯ ಪಡೆಯಬೇಕಾದರೆ ರೈತರು ಅಗತ್ಯ ದಾಖಲೆಗಳನ್ನು ನೀಡಬೇಕು. ಆ ದಾಖಲೆಗಳನ್ನು ಪಡೆಯಲು ಒಂದು ವಾರ ಕೆಲಸ ಬಿಟ್ಟು ಅಲೆಯಬೇಕು. ಒಟ್ಟಾರೆ ಲೆಕ್ಕ ಹಾಕಿದರೆ ಸೌಲಭ್ಯದಿಂದ ಸಿಗುವ ಅರ್ಧದಷ್ಟು ಹಣವನ್ನು ಖರ್ಚು ಮಾಡುವ ಪರಸ್ಥಿತಿ ಇದೆ. ರೈತರ ಅಲೆದಾಟ ತಪ್ಪಬೇಕೆಂದರೆ ಗ್ರಾಪಂ ಮಟ್ಟದಲ್ಲಿಯೇ ಎಲ್ಲವೂ ದೊರೆಯುಂತಾಗಬೇಕು.
. ಜಗದೀಶ ದೇವರಡ್ಡಿ, ತಾಲೂಕಾಧ್ಯಕ್ಷರು,
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ.

ರೈತರಿಗಾಗುವ ತೊಂದರೆಯನ್ನು ಅರಿತು ಈಗಾಗಲೇ ಗ್ರಾಮ ಪಂಚಾಯ್ತಿಯಲ್ಲಿ ಪಹಣಿ ಪತ್ರಗಳನ್ನು ನೀಡುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ನೀಡಿದ್ದರೂ ಸ್ಪಂದಿಸಿಲ್ಲ. ಎಲ್ಲರೂ ತಾಲೂಕು ಕೇಂದ್ರದಲ್ಲಿ ಪಡೆಯಲು ಆಗಮಿಸುವ ಹಿನ್ನಲೆಯಲ್ಲಿ ಸಮಸ್ಯೆ ಎದುರಾಗಿದೆ. ಸಮಸ್ಯೆ ಕುರಿತು ಮೇಲಧಿ ಕಾರಿಗಳ ಗಮನಕ್ಕೆ ತಂದು ಪರಿಹರಿಸುವ ವ್ಯವಸ್ಥೆ ಮಾಡಲಾಗುವುದು.
.ಆರ್‌.ವಿ. ಕಟ್ಟಿ, ತಹಶೀಲ್ದಾರರು, ರಾಮದುರ್ಗ

„ಈರನಗೌಡ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next