Advertisement

ಜಲಮಂಡಳಿಯಿಂದ ನಿತ್ಯ ಸಮಸ್ಯೆ

06:31 AM Feb 13, 2019 | |

ಬೆಂಗಳೂರು: ವಾರಕ್ಕೊಮ್ಮೆ ನೀರು ಬರುತ್ತಿದೆ, ತ್ಯಾಜ್ಯ ನೀರನ್ನು ನೇರವಾಗಿ ಕೆರೆಗಳಿಗೆ ಬಿಡಲಾಗುತ್ತಿದೆ. ಜಟ್ಟಿಂಗ್‌ ಮಿಷನ್‌ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಟ್ಯಾಂಕರ್‌ ಆವಳಿ ಹೆಚ್ಚಾಗಿದೆ. ಬಡವರಿಗೆ ಅನಗತ್ಯ “ಸ್ವಾಧೀನಾನುಭವ ಪತ್ರ’ ಕೇಳಿ ದಂಡ ಹಾಕಲಾಗುತ್ತಿದೆ. ಒಳಚರಂಡಿ ನೀರು ನೇರ ರಾಜಕಾಲುವೆಗೆ ಹರಿಯುತ್ತಿದೆ. ಮಳೆ ಬಂದರೆ ಮ್ಯಾನ್‌ ಹೋಲ್‌ಗ‌ಳು ಕಾರಂಜಿಗಳಾಗುತ್ತವೆ ಆ ತ್ಯಾಜ್ಯನೀರು ಮನೆಗಳಿಗೆ ನುಗ್ಗುತ್ತದೆ…..

Advertisement

 ಹೀಗೆ ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಬೆಂಗಳೂರು ಜಲಮಂಡಳಿಯಿಂದಾಗುತ್ತಿರುವ ನೂರಾರು ಸಮಸ್ಯೆಗಳನ್ನು ಮಂಗಳವಾರ ಬಿಬಿಎಂಪಿಯಲ್ಲಿ ನಡೆದ ವಿಶೇಷ ಕೌನ್ಸಿಲ್‌ ಸಭೆಯಲ್ಲಿ ತೆರೆದಿಟ್ಟರು. 

ನಗರದಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ಸಮಸ್ಯೆಗಳ ಕುರಿತು ಚರ್ಚಿಸಲು ಬೆಂಗಳೂರು ಜಲಮಂಡಳಿ ಅಧ್ಯಕ್ಷರೊಂದಿಗೆ ನಡೆದ ವಿಶೇಷ ಕೌನ್ಸಿಲ್‌ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ನೀರು ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಗಳ ವಿರುದ್ಧ ದೂರಿದರು ಹಾಗೂ ಪ್ರಸ್ತುತ ನಡೆಯುತ್ತಿರುವ ಯೋಜನೆಗಳ ಕಾಮಗಾರಿ ವಿವಿರ ಕೇಳಿದರು.

ಪಾಲಿಕೆ ತೆಕ್ಕೆಗೆ ಜಲಮಂಡಳಿ: ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಕೆರೆಗಳಿಗೆ ತ್ಯಾಜ್ಯ ನೀರು ಹರಿಸಿ ಬೆಂಗಳೂರು ಜಲಮಂಡಳಿ ಮಾಡಿದ ತಪ್ಪಿಗೆ ಹಸಿರು ನ್ಯಾಯಾಧೀಕರಣ ಬಿಬಿಎಂಪಿಗೆ ಛೀಮಾರಿ ಹಾಕಿ, ದಂಡ ವಿಧಿಸಿದ್ದು, ಬಿಬಿಎಂಪಿ ಸದಸ್ಯರಲ್ಲ ದೇಶದ ಮುಂದೆ ತಲೆತಗ್ಗಿಸಿ ನಿಲ್ಲಬೇಕಾಯಿತು.

ಜತೆಗೆ ಜನಸಾಮಾನ್ಯರಿಗೆ ಸೂಕ್ತ ಸಮಯಕ್ಕೆ ನೀರು ಒದಗಿಸದೇ ಸಮಸ್ಯೆ ಉಂಟುಮಾಡಿ ನಮ್ಮನ್ನು ಆಯ್ಕೆ ಮಾಡಿದ ಮತದಾರರಿಂದ ನಿತ್ಯ ಬಾಯಿಗೆ ಬಂದಂತೆ ಬೈಗುಳ ಕೇಳು ಸ್ಥಿತಿ ತಂದಿಟ್ಟಿದೆ. ಹೀಗಾಗಿ, ಮುಂಬೈ, ಕೊಲ್ಕತ್ತಾ ಸೇರಿದಂತೆ ಇತರೆ ಮಹಾನಗರಗಳಂತೆ 243-ಡಬ್ಲೂಶಡ್ನೂಲ್ 12ರ ಪ್ರಕಾರ ಜಲಮಂಡಳಿಯನ್ನು ಬಿಬಿಎಂಪಿ ತೆಕ್ಕೆಗೆ ಪಡೆಯಬೇಕು. ಈ ಕುರಿತು ಮೇಯರ್‌ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

Advertisement

ಯಾವಾಗ ಬರುತ್ತೆ ಕಾವೇರಿ ನೀರು: ಆಡಳಿತ ಪಕ್ಷದ ನಾಯಕ ವಾಜೀದ್‌ ಮಾತನಾಡಿ, 2001ರಲ್ಲಿ ಬೆಂಗಳೂರಿನ ಜನಸಂಖ್ಯೆ 65 ಲಕ್ಷ ಇತ್ತು. ಸದ್ಯ 2019ರಲ್ಲಿ 1.30 ಕೋಟಿ ತಲುಪಿದೆ. 2001ರಲ್ಲಿ ನಗರಕ್ಕೆ 1400 ಎಂಎಲ್‌ಡಿ ನೀರು ಸರಬರಾಜು ಆಗುತ್ತಿತ್ತು.

ಈವರೆಗೂ ಇಷ್ಟೇ ಪ್ರಮಾಣದ ನೀರು ಸರಬರಾಜು ಆಗುತ್ತಿದ್ದು, ಜನಸಂಖ್ಯೆ ಮಾತ್ರ ಏರಿಕೆ ಆಗುತ್ತಿದೆ. ಒಬ್ಬರಿಗೆ ದಿನಕ್ಕೆ 130 ಲೀ. ನೀರು, ಒಂದು ಕುಟುಂಬಕ್ಕೆ ಒಂದು ತಿಂಗಳಿಗೆ 15 ಸಾವಿರ ಲೀ. ನೀರು ಅವಶ್ಯವಿದ್ದು, ಈ ಮಟ್ಟದಲ್ಲಿ ನಗರದ ಕೇಂದ್ರ ಭಾಗದ ಜನರಿಗೇ ನೀರು ಒದಗಿಸುತ್ತಿಲ್ಲ, ಇನ್ನು 110 ಹಳ್ಳಿಗಳಿಗೆ ಯಾವಾಗ ಕಾವೇರಿ ನೀರು ಒದಗಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಮೇಯರ್‌ ಪದ್ಮಾವತಿ ಮಾತನಾಡಿ, ಜಲಮಂಡಳಿ ಕೆಳಹಂತದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೆರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ನಗರದಾದ್ಯಂತ ಟ್ಯಾಂಕರ್‌ ಆವಳಿ ಹೆಚ್ಚಾಗಿದೆ. ಈ ಕುರಿತು ಜಲಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಿಬಿಎಂಪಿ ಕೌನ್ಸಿಲ್‌ ಬೆಂಬಲ ಇರುತ್ತೆ ಎಂದರು.

ಬಿಬಿಎಂಪಿ ಸದಸ್ಯರಿಗೆ ಕಿಮ್ಮತ್ತಿಲ್ಲ: ವಾರ್ಡ್‌ ಮಟ್ಟದಲ್ಲಿ ಯಾವುದೇ ಸಮಸ್ಯೆಗಳ ಕುರಿತು ಜಲಮಂಡಳಿ ಅಧಿಕಾರಿಗಳು ಸ್ಥಳೀಯ ಬಿಬಿಎಂಪಿ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ. ರಿಪೇರಿ ಕೆಲಸಗಳು, ಜಟ್ಟಿಂಗ್‌ ಮಷಿನ್‌ ಒದಗಿಸುವ ಕುರಿತು ಕೇಳಿದರೆ ಸೂಕ್ತ ಸ್ಪಂದಿಸುವುದಿಲ್ಲ.

ಅಲ್ಲದೇ ಯಾವುದೇ ಹೊಸ ಕೆಲಸಗಳ ಕುರಿತು ಪ್ರಸ್ತಾಪಿಸಿದರೆ ಅನುದಾನ ಕೊರತೆ ಎನ್ನುತ್ತಾರೆ. ಕಳೆದ 3 ವರ್ಷದಿಂದ ಮನವಿ ಸಲ್ಲಿಸಿದರೂ, ವಾರ್ಡ್‌ನಲ್ಲಿನ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಿಲ್ಲ ಎಂದು ಮಾಜಿ ಮೇಯರ್‌ ಮಂಜುನಾಥ ರೆಡ್ಡಿ,  ಸದಸ್ಯ ವೆಂಕಟೇಶ್‌, ನೇತ್ರಾ ನಾರಾಯಣ, ಕಟ್ಟೆ ಸತ್ಯನಾರಾಯಣ ಆರೋಪಿಸಿದರು.

ಇವುಗಳ ಜತೆಗೆ ಚಿಕ್ಕ ವಿಸ್ತೀರ್ಣದ ಮನೆಗಳಿಗೆ ಒಸಿ (ಸ್ವಾಧೀನಾನುಭವ ಪತ್ರ) ನೀಡಿಲ್ಲ ಎಂದು ದಂಡ ಹಾಕುತ್ತಿದ್ದಾರೆ. ಆ ನಿಯಮವನ್ನು ಮೊದಲು ತಿದ್ದುಪಡಿ ಮಾಡಬೇಕು ಎಂದು ಒಮ್ಮತದಿಂದ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next