ಮಂಗಳೂರು: ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ (ಮೈಟ್) ಸ್ವಾಯತ್ತ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ 13ನೇ ಬ್ಯಾಚ್ ಎಂಜಿನಿಯರಿಂಗ್ ಪದವೀಧರರು, 14ನೇ ಬ್ಯಾಚ್ ಎಂಬಿಎ ಪದವೀಧರರು, ಎಂಟೆಕ್ ಪದವೀಧರರು ಮತ್ತು ಪಿಎಚ್‌ಡಿ ಪಡೆದವರ ಪದವಿ ಪ್ರದಾನ ಸಮಾರಂಭವು ಮೈಟ್ ಕ್ಯಾಂಪಸ್‌ನಲ್ಲಿ ನೆರವೇರಿತು.
ಒಟ್ಟು 11 ಪಿಎಚ್‌ಡಿ ಪಡೆದವರು, 515 ಎಂಜಿನಿಯರಿಂಗ್ ಪದವೀಧರರು, 100 ಮ್ಯಾನೇಜ್‌ಮೆಂಟ್ ಪದವೀಧರರು ಮತ್ತು 2 ಎಂಟೆಕ್ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ನೀಡಲಾಯಿತು.
ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ| ಬಿ. ರವಿ ಅವರು ಪದವಿ ಪ್ರದಾನ ಮಾಡಿ ಮಾತನಾಡಿ, ನಾವು ಕೃತಕಬುದ್ಧಿಮತ್ತೆ ಹೆಚ್ಚುತ್ತಿರುವ ಈ ಕಾಲದಲ್ಲಿ ಆಜ್ಞಾತ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತಿರುವ ಕಾರಣ ಹೊಸ ಪದವೀಧರರು ಪ್ರತಿದಿನ ಹೊಸದನ್ನು ಕಲಿಯುವ ಅನಿವಾರ್ಯತೆಯಲ್ಲಿದ್ದಾರೆ, ಅಲ್ಲದೆ ಜೀವನವನ್ನು ಪ್ರತಿನಿತ್ಯ ಆಸಕ್ತಿದಾಯಕವಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದವಿ ಪ್ರಮಾಣಪತ್ರಗಳನ್ನು ನೀಡುವುದರ ಜತೆಗೆ, ಸಂಸ್ಥೆಯ ವಿಶ್ವವಿದ್ಯಾನಿಲಯ ರ್‍ಯಾಂಕ್ ಹೊಂದಿರುವ ರಾಹುಲ್ ಸುಧಾಕರ್ (ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ 7ನೇ ರ್‍ಯಾಂಕ್ ), ಶ್ರೀಪ್ರಿಯಾ (ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ 7ನೇ ರ್‍ಯಾಂಕ್), ಜಿತೇಶ್ (ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ 8ನೇ ರ್‍ಯಾಂಕ್), ಧ್ರುವ ಜಾಧವ್ (ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ 6ನೇ ರ್‍ಯಾಂಕ್) ಮತ್ತು ಆಚಾರ್ಯ ಶ್ರೀಯಾ ಶ್ರೀಧರ್ ( 9ನೇ ರ್‍ಯಾಂಕ್) ಅವರನ್ನು ಗೌರವಿಸಲಾಯಿತು.
ಪ್ರತಿ ಶಾಖೆಯಿಂದ ಟಾಪರ್‌ಗಳಾದ ರಾಹುಲ್ ಸುಧಾಕರ್, ಶ್ರೀಪ್ರಿಯಾ, ವಿಸ್ಮಿತಾ ಕುಪ್ಪಯ್ಯ ನಾಯಕ್(ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್), ಜಿತೇಶ್, ಮರ್ವಿನ್ ಪಿಂಟೋ – ಮೆಕ್ಯಾನಿಕಲ್ ಎಂಜಿನಿಯರಿಂಗ್, ಧ್ರುವ ಜಾಧವ್ – ಮೆಕಾಟ್ರಾನಿಕ್ಸ್ ಎಂಜಿನಿಯರಿಂಗ್ ಎಂಬಿಎ ಓದಿರುವ ಪ್ರಿಯಾಂಕಾ ಕ್ವಾಡ್ರಾಸ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ರಾಜಲಕ್ಷ್ಮಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವೀಧರರು ಸೃಜನಶೀಲತೆ ಮತ್ತು ಅನನ್ಯತೆಯನ್ನು ಹೊಂದಿರಬೇಕು, ಇತರರನ್ನು ತೆಗಳುವುದರಲ್ಲಿ ಅರ್ಥವಿಲ್ಲ, ವೈಫಲ್ಯಗಳಿಲ್ಲದೆ ಯಶಸ್ವಿಯಾಗುವುದು ಸುಲಭವಲ್ಲ, ಆದ್ದರಿಂದ ಎಲ್ಲ ಕಷ್ಟಗಳನ್ನು ಎದುರಿಸಿ, ಆ ಮೂಲಕ ಜೀವನದಲ್ಲಿ ಯಶಸ್ವಿಯಾಗಿ ಎಂದರು.
ಪ್ರಾಂಶುಪಾಲ ಡಾ| ಪ್ರಶಾಂತ್ ಸಿ. ಎಂ. ಸ್ವಾಗತಿಸಿ, ಉಪ ಪ್ರಾಂಶುಪಾಲ ಡಾ| ರಾಜಶೇಖರ್ ವಂದಿಸಿದರು. ಎಂಐಟಿಇ ಸಲಹೆಗಾರ ಪ್ರೊ| ಜಿ.ಆರ್. ರೈ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಅಧ್ಯಾಪಕರಾದ ದೀಪ್ತಿ ಶೆಟ್ಟಿ ನಿರೂಪಿಸಿದರು.