ಕ್ಷೇತ್ರಗಳಿಗಿನ್ನೂ ನಮ್ಮ ನಾಯಕರು ಕಾಲಿಟ್ಟಿಲ್ಲ. ಈಗ ಏನಿದ್ದರೂ ಅವರ ಹಿಂಬಾಲಕರ ಪಾದಯಾತ್ರೆ. ಅದಾದ ಮೇಲೆ ನಾಯಕರು ಮೆಲ್ಲಗೆ ನಾನಾ ಸಬೂಬುಗಳ ಹಾರ ಹಾಕ್ಕೊಂಡು ಬರ್ತಾರೆ. ಇತ್ತೀಚೆಗೆ ಆಭಿಮಾನಿಗಳು ಎನ್ನುವ ಹಿಂಬಾಲಕರು ತಮ್ಮ ನಾಯಕರಿಗೆ ಏನೆಲ್ಲಾ ಹಾರಗಳನ್ನು ಹಾಕತೊಡಗಿ ದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಹಿಂದೆ ಮಲ್ಲಿಗೆ ಹಾರ, ಸುಗಂಧರಾಜ ಹೂವಿನ ಹಾರ, ಗುಲಾಬಿ ಹಾರ… ಹೀಗೆ ಒಂದು ಹಂತದಲ್ಲಿ ಹೂವಿನ ಕಾಲ ಮುಗಿದು ಹಣ್ಣುಗಳು ಬಂದವು. ಈಗ ಹಣ್ಣು, ಸಂಬಾರ ಪದಾರ್ಥಗಳ ಕಾಲ ನಡೆಯುತ್ತಿದೆ.
ಹೀಗೆ ಒಂದಿಷ್ಟು ಅಭಿಮಾನಿಗಳು ಎನ್ನೋ ಹಿಂಬಾಲಕರು ತಮ್ಮ “ದೇವರ” ಕೃಪೆ ಪಡೆಯಲು ಹೆಣೆಯುವ ತಂತ್ರವಿದು. ಯಾವಾಗಲೂ ಹೂವಿನ ಹಾರ ಹಾಕುವುದು ಇದ್ದದ್ದೇ. ಸ್ವಲ್ಪ ಚೇಂಜ್ ಇರಬೇಕು. ಆಗಲೇ ಜನಾನೂ ಜೈ ಎನ್ನೋದು, ಶಹಭಾಷ್ ಅಂತ ಮೆಚ್ಚುಗೆ ಸೂಚಿ ಸೋದು. ಅದಕ್ಕಿಂತ ಹೆಚ್ಚಾಗಿ ಈ ಮೀಡಿಯಾದಲ್ಲಿ ಸುದ್ದಿ ಯಾಗೋದು ಅಂಥ ಹುಡುಕಿದ್ದು ಈ ಹೊಸ ಮಾದರಿಯ ಹಾರಗಳನ್ನ.
ಬುದ್ಧಿವಂತನೊಬ್ಬ ಮೂಸಂಬಿ ಬಣ್ಣ ಚೆಂದ. ನಮ್ಮ ನಾಯಕರಿಗೆ ಚೆನ್ನಾಗಿ ಒಪ್ಪುತ್ತೆ ಅಂತ ಮೂಸಂಬಿ ಹಾರ ಹಾಕಿದ. ಜತೆಗೆ 250 ಮೂಸಂಬಿ ಐತೆ ಸಾರ್ ಇದರಲ್ಲಿ ಎಂದೂ ಹೇಳಿದ.
ಅಪೋಶಿಸನ್ ಪಾರ್ಟಿಯವನೇ ಮೂಸಂಬಿ ಹಾಕೌನೆ. ನಾವು ಸುಮ್ಮನೆ ಇರೋಕಾಗುತ್ತಾ ಎಂದು ಯೋಚಿಸಿದವ ರಿಂದಲೇ ಈ ಸೇಬಿನ ಹಾರ, ಏಲಕ್ಕಿ ಹಾರ ಬಂದದ್ದು. ಇತ್ತೀಚೆಗಷ್ಟೇ ಯಾವುದೋ ಊರಲ್ಲಿ ಏಲಕ್ಕಿ ಹಾರ ಹಾಕಿದ್ರಲ್ಲ, ಸೇಬಿನ ಹಾರ ಸಹಾ.
ಹಣ್ಣುಗಳು ಮುಗಿದ ಮೇಲೆ ತರಕಾರಿ ಗಳ ಭಾಗ್ಯ. ಅಲ್ಲ, ಸುಮ್ಮನೆ ಕಲ್ಪನೆ. ಈ ತೊಂಡೆಕಾಯಿ, ಸೀಮೆ ಬದನೆಕಾಯಿ, ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ ಹಾರಗಳು ಪರವಾಗಿಲ್ಲ. ಚೇಂಜ್ ಇರಬೇಕು, ವಿರೋಧಿ ಪಾರ್ಟಿಗಳು ಹಾಕಿದ್ದು ರಿಪೀಟ್ ಮಾಡಬಾರದು ಅಂತ ಬೂದು ಕುಂಬಳಕಾಯಿ, ಚೀನಿ ಕಾಯಿ, ಹೀರೇಕಾಯಿ, ಸೋರೆಕಾಯಿ ಹಾರ ಹಿಡ್ಕೊಂಡು ಬಂದರೆ ನಮ್ಮ ನಾಯಕರ ಮುಖ ಕೆಂಪು ಮೆಣಸಿನಕಾಯಿ ಆಗುತ್ತಾ ನೋಡಬೇಕು!