Advertisement

ನಿತ್ಯ 115 ಟನ್‌ ತ್ಯಾಜ್ಯೋತ್ಪತ್ತಿ !

03:11 PM Dec 08, 2018 | |

ಕೊಪ್ಪಳ: ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಜನಸಾಂದ್ರತೆ ಹೆಚ್ಚಾದಂತೆಲ್ಲ ತ್ಯಾಜ್ಯೋತ್ಪತ್ತಿಯೂ ಮಿತಿ ಮೀರಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿನ 9 ನಗರ, ಪಟ್ಟಣ ಪ್ರದೇಶಗಳಲ್ಲಿ ಪ್ರತಿನಿತ್ಯ 115 ಟನ್‌ನಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿಗೆ ನರಳಾಡುವಂತಾಗಿದೆ. ಅಲ್ಲದೇ ಈ ಕಸವನ್ನು ವಿಲೇವಾರಿ ಮಾಡುವುದು ಕಷ್ಟವಾಗುತ್ತಿದೆ. ತ್ಯಾಜ್ಯ ನಿಯಂತ್ರಣಕ್ಕೆ ಇನ್ನೂ ಜಾಗೃತಿ ಕೊರತೆ ಇದೆ.

Advertisement

ಹೌದು.. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಿತಿ ಮೀರಿ ಸಂಗ್ರಹವಾಗುತ್ತಿರುವ ತ್ಯಾಜ್ಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದರಂತೆ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲೂ ಇತ್ತೀಚಿನ ದಿನದಲ್ಲಿ ತ್ಯಾಜ್ಯ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಕಸವು ನಗರದ ಸೌಂದರ್ಯವನ್ನೇ ಹಾಳು ಮಾಡಿ ಹಲವು ರೋಗಗಕ್ಕೂ ಕಾರಣವಾಗಿದೆ. ಯಾವುದೇ ಹಬ್ಬ, ಹರಿದಿನ ಬಂದರೂ ಹೂವು, ಕಾಯಿ, ತರಕಾರಿ, ಬಾಳೆ ಸೇರಿದಂತೆ ಇತರೆ ಗಿಡಗಂಟೆಗಳೂ ಕಸವಾಗಿ ಮಾರ್ಪಾಡಾಗುತ್ತವೆ. ಹೀಗಾಗಿ ತ್ಯಾಜ್ಯೋತ್ಪತ್ತಿಯ ಹೆಚ್ಚಾಗಿದೆ.

ನಿತ್ಯ 115 ಟನ್‌ ಉತ್ಪತ್ತಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯೋತ್ಪತ್ತಿಯ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದ್ದು, ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ 75,673 ಜನಸಂಖ್ಯೆಗೆ ಪ್ರತಿದಿನಕ್ಕೆ 35 ಟನ್‌ ತ್ಯಾಜ್ಯವು ಉತ್ಪತ್ತಿಯಾಗುತ್ತಿದೆ. ಇದರಲ್ಲಿ 33 ಟನ್‌ನಷ್ಟು ಸಂಗ್ರಹ ಮಾಡಲಾಗುತ್ತಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ 1,14,642 ಜನಸಂಖ್ಯೆಗೆ ಪ್ರತಿ ದಿನಕ್ಕೆ 45 ಟನ್‌ ಉತ್ಪತ್ತಿಯಾಗುತ್ತಿದ್ದರೆ, 40 ಟನ್‌ನಷ್ಟು ಸಂಗ್ರಹ ಮಾಡಲಾಗುತ್ತಿದೆ. ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ 24,878 ಜನಸಂಖ್ಯೆಗೆ 9 ಟನ್‌ ಉತ್ಪತ್ತಿಯಾಗುತ್ತಿದ್ದರೆ, 6 ಟನ್‌ ಸಂಗ್ರಹ ಮಾಡಲಾಗುತ್ತಿದೆ. ಯಲಬುರ್ಗಾ ಪಟ್ಟಣದಲ್ಲಿ 14,814 ಜನಸಂಖ್ಯೆಗೆ 5 ಟನ್‌ ಪೈಕಿ, 4 ಟನ್‌ ಸಂಗ್ರಹಿಸಲಾಗುತ್ತಿದೆ. 18,988 ಜನಸಂಖ್ಯೆ ಇರುವ ಭಾಗ್ಯನಗರದಲ್ಲಿ 10 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇನ್ನೂ ಕನಕಗಿರಿಯಲ್ಲಿ 29,991 ಜನಸಂಖ್ಯೆಗೆ 5 ಟನ್‌, ಕುಕನೂರು ವ್ಯಾಪ್ತಿಯಲ್ಲಿ 18,033 ಜನಸಂಖ್ಯೆಯಿದೆ. ಅಲ್ಲಿಯೂ ಕಸ ಹೆಚ್ಚಾಗಿದೆ. ಇನ್ನೂ ತಾವರಗೇರಾ ಪಪಂ ವ್ಯಾಪ್ತಿಯಲ್ಲಿ 17,510 ಜನಸಂಖ್ಯೆಗೆ 5.5 ಟನ್‌ ಕಸ ಉತ್ಪತ್ತಿಯಾಗುತ್ತಿದ್ದರೆ, 0.6 ಟನ್‌ ಕಸ ಸಂಗ್ರಹ ಮಾಡಲಾಗುತ್ತಿದೆ. ಒಟ್ಟಾರೆ ಜಿಲ್ಲಾದ್ಯಂತ ಪ್ರತಿ ದಿನಕ್ಕೆ 115 ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದರೆ, ವರ್ಷಕ್ಕೆ 41,610 ಮೆಟ್ರಿಕ್‌ ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ತ್ಯಾಜ್ಯ ಪರಿವರ್ತನೆಗೆ ಈಗಷ್ಟೆ ಯತ್ನ: ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಮಿತಿ ಮೀರಿದ ತ್ಯಾಜ್ಯ ಉತ್ಪತ್ತಿಯಿಂದಾಗಿ ತ್ಯಾಜ್ಯ ಸಂಗ್ರಹಣಾ ಘಟಕಗಳು ಭರ್ತಿಯಾಗಿವೆ. ಉಳಿದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವ ಪ್ರಸಂಗ ನಡೆಯುತ್ತಿದ್ದು, ಸರ್ಕಾರ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ಬೇರ್ಪಡಿಸಿ ಪುನರ್‌ ಸಾವಯವ ಗೊಬ್ಬರ ಮಾಡುವ ಪ್ರಕ್ರಿಯೆ ನಡೆಸುತ್ತಿಲ್ಲ. ಕೊಪ್ಪಳದಲ್ಲಿ ಈಗ ಪ್ರಯತ್ನ ನಡೆದಿದೆ.

ಪ್ಲಾಸ್ಟಿಕ್‌ನದ್ದೇ ಹಾವಳಿ: ಪ್ಲಾಸ್ಟಿಕ್‌ ಬಳಕೆಗೆ ಸರ್ಕಾರ ಸಂಪೂರ್ಣ ನಿಷೇಧ ಹೇರಿದ್ದರೂ ಜಿಲ್ಲಾದ್ಯಂತ ಬ್ಯಾನ್‌ ಆಗಿಲ್ಲ. ಎಲ್ಲ ಮಾರುಕಟ್ಟೆ, ತರಕಾರಿ ವಹಿವಾಟು ಹೂವು-ಹಣ್ಣಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಡೆದಿದೆ. ಅ ಧಿಕಾರಿಗಳು ಬೆರಳೆಣಿಕೆಯಷ್ಟು ದಾಳಿ ಮಾಡಿ ಲೆಕ್ಕಕ್ಕೆ ದಾಖಲೆ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ಲಾಸ್ಟಿಕ್‌ನಿಂದಾಗಿ ನಗರದ ಸೌಂದರ್ಯವೇ ಹಾಳಾಗುತ್ತಿದೆ. ಪ್ಲಾಸ್ಟಿಕ್‌ ಪುನರ್‌ ಬಳಕೆಗೆ ಬರಲ್ಲ. ಉಳಿದ ತ್ಯಾಜ್ಯವನ್ನು ಪುನರ್‌ ಬಳಕೆ ಮಾಡಿ ಸಾವಯವ ಗೊಬ್ಬರ ಮಾಡುವ ಪ್ರಯತ್ನ ಈಗಷ್ಟೆ ನಡೆಯುತ್ತಿವೆ.

Advertisement

ಒಟ್ಟಿನಲ್ಲಿ ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ತ್ಯಾಜ್ಯ ಇಷ್ಟೊಂದು ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮುಂದೆ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಸಂಬಂ ಧಿಸಿದವರು ಈಗಲಾದರೂ ಎಚ್ಚೆತ್ತು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ಇಲ್ಲಿ ಜಾಣ ಕುರುಡುತನ ಪ್ರದರ್ಶನ ಮಾಡಿದರೆ ನಗರಗಳೆಲ್ಲ ಗಬ್ಬೆದ್ದು ನಾರುವ ಹಂತಕ್ಕೆ ಬಂದು ತಲುಪಲಿವೆ.

ಜಿಲ್ಲಾದ್ಯಂತ ತ್ಯಾಜ್ಯ ಉತ್ಪತ್ತಿಯ ಪ್ರಮಾಣ ಹೆಚ್ಚಿದೆ. ನಮ್ಮಲ್ಲಿ ಕಸ ಸಂಗ್ರಹಣೆ ನಡೆದಿದೆ. ಎಲ್ಲೆಡೆ ಸಂಗ್ರಹವಾದ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಈ ಹಿಂದೆ ನಡೆದಿತ್ತು ಆದರೂ ಕೆಲವೊಂದು ಕಾರಣದಿಂದ ಅದು ನಡೆದಿಲ್ಲ. ಪ್ರಸ್ತುತ 4 ತಾಲೂಕಿನಲ್ಲಿ ಯಂತ್ರಗಳ ಖರೀದಿಗೆ ಟೆಂಡರ್‌ ಆರಂಭಿಸಿದ್ದೇವೆ. ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಎಲ್ಲಡೆಯೂ ಜಾಗೃತಿ ಮೂಡಿಸುತ್ತಿದ್ದೇವೆ.
ವಿಜಯಕುಮಾರ ಮೆಕ್ಕಳಕಿ,
ನಗರಾಭಿವೃದ್ಧಿ ಯೋಜನಾ ನಿರ್ದೇಶಕ
ಕೊಪ್ಪಳ

ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next