ಮುಂಬಯಿ: ದಹಿಸರ್ ಪೂರ್ವದ ಶೈಲೇಂದ್ರ ನಗರದ ಹ್ಯಾಪಿ ಹೋಂ ಸೊಸೈಟಿಯ ಶ್ರೀ ನವದುರ್ಗಾ ಅಯ್ಯಪ್ಪ ಸೇವಾ ಸಂಘದ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಪೂರ್ವಭಾವಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಪಲ್ಲಕಿ ಉತ್ಸವದ ಶೋಭಾಯಾತ್ರೆಯು ಡಿ. 8 ರಂದು ಸಂಜೆ ನಡೆಯಿತು.
ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ,ಪುಟಾಣಿಗಳ ದೀಪಾರಾಧನೆ, ಚೆಂಡೆ-ಕೊಂಬು ಗಳ ನಿನಾದ, ಅಯ್ಯಪ್ಪ ವ್ರತಧಾರಿಗಳ ಕುಣಿ ಭಜನೆ, ಶರಣು ಘೋಷಣೆಗಳೊಂದಿಗೆ ಬೊರಿವಲಿ ಪ್ರಭಾತ್ ನಗರ ಅಂಬೆ ಮಾತಾ ಮಂದಿರದಿಂದ ಶೋಭಾಯಾತ್ರೆಯು ಪ್ರಾರಂಭ ಗೊಂಡು ವಿವಿಧ ಪೂಜಾರಾಧನೆಯೊಂದಿಗೆ ಶಿಬಿರದ ಸನ್ನಿಯನ್ನು ತಲುಪಿತು.
ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಗುರುಸ್ವಾಮಿ ಬೆಳಗಾವಿ, ಅಧ್ಯಕ್ಷ ಸುಧಾಕರ ಎನ್. ಶೆಟ್ಟಿ ಬಿಯಾಳ ಮಂದಾರ್ತಿ, ಕಾರ್ಯದರ್ಶಿ ಮೋಹನ್ ರೈ ಗುರುಸ್ವಾಮಿ ಉಪ್ಪಳ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಕುಂಬ್ಳೆ, ಸಮಿತಿಯ ವ್ರತಧಾರಿ ಅಯ್ಯಪ್ಪ ಸ್ವಾಮಿಗಳು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದು ಸಹಕರಿಸಿದರು.
ಅಧ್ಯಕ್ಷ ಸುಧಾಕರ ಎನ್. ಶೆಟ್ಟಿ ಬಿಯಾಳ ಮಂದಾರ್ತಿ ಅವರು ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ಗುರುಸ್ವಾಮಿಗಳಾದ ವಿಶ್ವನಾಥ ಅಯ್ಯರ್, ಕಣ್ಣನ್ ನಾಯರ್, ಗಣೇಶ್ ಘಾಟ್‌ಕೋಪರ್ ಅವರ ದಿವ್ಯಹಸ್ತದಿಂದ ನೆರವೇರಲಿದೆ ಎಂದು ತಿಳಿಸಿ, ಭಕ್ತಾಭಿಮಾನಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿ ಶುಭ ಹಾರೈಸಿದರು.
ಶೃಂಗರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ವಿರಾಜಮಾನಗೊಂಡ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಪೂಜೆ ಸಲ್ಲಿಸಿದ ಬಳಿಕ ದೀಪಾರಾಧನೆ, ಪಡಿಪೂಜೆ, ಭಜನೆ ಇನ್ನಿತರ ಪೂಜಾ ಕೈಂಕರ್ಯಗಳು ಜರಗಿತು. ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅಯ್ಯಪ್ಪ ಸ್ವಾಮಿಗಳು, ತುಳು-ಕನ್ನಡಿಗರು, ಕನ್ನಡೇತರರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.