Advertisement
ನಮ್ಮನ್ನು ಓದಿಸಲು ತುಂಬಾ ಕಷ್ಟಪಟ್ಟಿದ್ದ ನಮ್ಮ ಅಪ್ಪ-ಅಮ್ಮನನ್ನು ನಮ್ಮಿಂದ ಕಿತ್ತುಕೊಂಡು ಬಿಟ್ಟರು, ಮುಂದೆ ನಮಗ್ಯಾರು ದಿಕ್ಕು ಎಂದು ಘಟನೆಯಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿರುವ ಪ್ರಿಯಾ, ಅಳಲು ತೋಡಿಕೊಂಡು ಕಣ್ಣೀರಾದಳು.
Related Articles
Advertisement
ಅಪ್ಪ-ಅಮ್ಮ ಬಂದಿದ್ದರು: ಕೇರಳದಲ್ಲಿ ಸರಿಯಾಗಿ ಕೂಲಿ ಕೆಲಸ ಸಿಗದ್ದರಿಂದ ಸಾಲ ತೀರಿಸಲು ಕಷ್ಟವಾಗುತ್ತಿದೆ ಎಂದು ಕೃಷ್ಣನಾಯ್ಕ -ಮೈಲಿಭಾಯಿ ದಂಪತಿ ತಮಿಳುನಾಡಿನ ತಿರುಪೂರ್‌ಗೆ ತೆರಳಿ ಅಲ್ಲಿನ ಬಟ್ಟೆ ಕಾರ್ಖಾನೆಗಳಲ್ಲಿ ಕೂಲಿ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಗುರುವಾರ ಕೇರಳದಿಂದ ಮನೆಗೆ ಬಂದಿದ್ದರು. ಅಪ್ಪ-ಅಮ್ಮ ಮನೆಗೆ ಬಂದಿದ್ದರಿಂದ ಮಕ್ಕಳೂ ಸಹ ಕಾಲೇಜಿಗೆ ರಜೆ ಹಾಕಿ ಮನೆಗೆ ಹೋಗಿದ್ದರು.
ಶುಕ್ರವಾರ ಕಿಚ್‌ಗುತ್ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಷ್ಟದಿಂದ ನಮ್ಮನ್ನು ಪಾರುಮಾಡು ಎಂದು ಬೇಡಿಕೊಳ್ಳಲು ಹೋಗಿದ್ದ ದಂಪತಿ ದೇವಸ್ಥಾನದಲ್ಲಿ ನೀಡಿದ ವೆಜಿಟೇಬಲ್ ಬಾತ್ ಹಾಗೂ ಪಂಚಾಮೃತ ಸೇವಿಸಿ, ಮನೆಗೂ ತಂದಿದ್ದರು. ಮನೆಗೆ ಬಂದ ಕೆಲ ಹೊತ್ತಿನಲ್ಲಿ ಮೈಲಿಭಾಯಿಗೆ ವಾಂತಿ ಆಗಿದೆ. ಬಿಸಿಲಲ್ಲಿ ನಡೆದು ಬಂದಿದ್ದರಿಂದ ಸುಸ್ತಾಗಿ ವಾಂತಿಯಾಗಿದೆ ಎಂದು ಅಪ್ಪ, ಅಮ್ಮನನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕರೆದುಕೊಂಡು ಬಂದರು,
ಆಸ್ಪತ್ರೆಗೆ ಬರುವಷ್ಟರಲ್ಲಿ ಅಪ್ಪನಿಗೂ ವಾಂತಿಯಾಗಿದ್ದರಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇಲ್ಲಿಗೆ ಬಂದರೆ ವೆಂಟಿಲೇಟರ್ ಇಲ್ಲ ಎಂದು ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿಗೆ ಕರೆದೊಯ್ದ ಐದು ನಿಮಿಷದಲ್ಲಿ ಅಪ್ಪ ಹೋಗಿಬಿಟ್ಟರು. ಐಸಿಯುನಲ್ಲಿರಿಸಿದ್ದರಿಂದ ಮೂರು ದಿನಗಳಿಂದ ಅಮ್ಮನ ಮುಖವನ್ನೂ ನೋಡಲಾಗಿರಲಿಲ್ಲ. ಇವತ್ತು ನೋಡಿದರೆ ಅಮ್ಮನು ನಮ್ಮನ್ನು ಬಿಟ್ಟು ಹೋದರು, ಈಗ ನಮಗ್ಯಾರು ದಿಕ್ಕು ಎಂದು ಕಣ್ಣೀರಾದಳು ಪ್ರಿಯಾ.
ಅಪ್ಪ-ಅಮ್ಮನನ್ನು ಕಳೆದುಕೊಂಡು ಬರಸಿಡಿಲು ಬಡಿದಂತೆ ಕುಳಿತಿದ್ದ ಪ್ರಿಯಾಳನ್ನು ಮಹಾರಾಣಿ ಕಾಲೇಜಿನ ಆಕೆಯ ಗೆಳತಿಯರು ಸಂತೈಸುವ ಕೆಲಸ ಮಾಡಿದರು. ಘಟನೆಯಿಂದ ಅಸ್ವಸ್ಥಳಾಗಿರುವ ಪ್ರಿಯಾಳಿಗೆ ಡ್ರಿಪ್ ಹಾಕಿಕೊಂಡೇ ಆ್ಯಂಬುಲೆನ್ಸ್‌ನಲ್ಲಿ ಅಮ್ಮನ ಶವದೊಂದಿಗೆ ಕರೆದೊಯ್ಯಲಾಯಿತು.
* ಗಿರೀಶ್ ಹುಣಸೂರು