ಇವತ್ತಿಗೂ ಅಪ್ಪಅಂದ್ರೆ ಭಯವಿದೆ. ಅದರ ಜೊತೆಗೆ ಬೆಟ್ಟದಷ್ಟು ಪ್ರೀತಿ ಕೂಡ ಇದೆ. ಅವರ ಜೊತೆ ಮನಬಿಚ್ಚಿ ಮಾತಾಡದಿದ್ರೆ ಏನಂತೆ? ನಾನೇನು ಅಂತ ಖಂಡಿತ ಅಪ್ಪಆರ್ಥ ಮಾಡ್ಕೊಂಡಿರುತ್ತಾನೆ.
ಅಪ್ಪ… ಪ್ರತಿ ಹೆಣ್ಣಿನ ಮೊದಲ ಪ್ರೀತಿ. ಅದ್ಯಾಕೋ ಗೊತ್ತಿಲ್ಲ, ಅಪ್ಪ ಅಂದ್ರೆ ಮಗಳಿಗೆ ವಿಶೇಷ ಪ್ರೀತಿ. ನಂಗೂ ಕೂಡ… ಹೇಳಿಕೊಳ್ಳೋಕೆ ಆಗದೆ ಇರೋ ಪ್ರೀತಿ ಕಾಳಜಿ ನನ್ನಪ್ಪನ ಮೇಲೆ. ನಾ ಚಿಕ್ಕವಳಿದ್ದಾಗ ಅಪ್ಪ ಅಂದ್ರೆ superman ಥರಾ ಅನಿಸ್ತಿದ್ದ… ಅವನ ಕೈ ಹಿಡಿದು ನಡೆಯುವಾಗ ಬೀಳುವ ಭಯವಿರಲಿಲ್ಲ. ಅವನು ಜೊತೆ ಇದ್ದಾಗ ಯಾರಿಗೂ ನಾನು ಹೆದರುತ್ತಿರಲಿಲ್ಲ. ಹೆಗಲ ಮೇಲೆ ಕುಳಿತು ಸಾಗುತ್ತಿದ್ದರೆ ಸಾವಿರ ಕುತೂಹಲಗಳನ್ನು ಕಣ್ಣರಳಿಸಿ ನೋಡ್ತಿದ್ದೆ. ಮೊದಲ ಅಕ್ಷರವನ್ನು ಅಪ್ಪನೇ ಕೈ ಹಿಡಿದು ಬರೆಸಿದ್ದ. ಮತ್ತೆಂದೂ ಬರೆಯುವಾಗ ತಪ್ಪಲಿಲ್ಲ. ಮೊದಲ ಹೆಜ್ಜೆಗಳನ್ನು ಬೆರಳು ಹಿಡಿದು ನಡೆಸಿದ್ದ. ಮತ್ತೆಂದೂ ನಡೆಯುವಾಗ ಬೀಳುವ ಭಯವಿರಲಿಲ್ಲ. ರಾತ್ರಿ ಮಲಗುವಾಗ ಬಣ್ಣ ಬಣ್ಣದ ಕಥೆ ಹೇಳುತ್ತಿದ್ದ ಅಪ್ಪನನ್ನೆದುರು ಪುಟ್ಟ ಕಲ್ಪನಾಲೋಕವನ್ನೇ ಕಟ್ಟಿಕೊಟ್ಟಿದ್ದ. ತುಂಬಾ ಆಶ್ಚರ್ಯ ಆಗುತ್ತಿತ್ತು ಅಪ್ಪನಿಗೆ ಎಷ್ಟೆಲ್ಲ ವಿಷಯಗಳು ಗೊತ್ತಲ್ವಾ ಅಂತ. ನಿಜಕ್ಕೂ ಅಪ್ಪನನ್ನ ಪಾಲಿನ ಹೀರೋ ಆಗಿದ್ದ.
ನಾನು ಬೆಳೆದಂತೆ ಅದೇಕೋ ನಮ್ಮ ನಡುವೆ ಅಂತರ ಹೆಚ್ಚುತ್ತಾ ಹೋಯ್ತು.ಅಪ್ಪನ ಮಾತು ಒರಟು ಅನ್ನಿಸ್ತಿತ್ತು. ನಮ್ಮ ನಡುವೆ ಮಾತು ಕಡಿಮೆಯಾಗಿತ್ತು. ಇತ್ತೀಚಿಗೆ ಅಪ್ಪ ಬದಲಾಗಿದ್ದಾನೆ ಅನ್ಸೋಕೆ ಶುರುವಾಗಿತ್ತು. ಪ್ರತಿ ಮಾತಿಗೂ ಅವನ ಮೇಲೆ ರೇಗುತ್ತಿದ್ದೆ. ಅಪ್ಪನಿಗಿಂತ ಜಾಸ್ತಿ ನಂಗೆ ಗೊತ್ತು ಅಂದೊRಂಡೆ. ಮಾತಿನ ಕೊರತೆ ನಮ್ಮ ನಡುವೆ ಇಷ್ಟೊಂದು ಕಂದಕ ಮಾಡಿರಬಹುದು. ಬರುಬರುತ್ತಾ ಅಪ್ಪನಿಗಿಂತ ಜಾಸ್ತಿ ಅಮ್ಮನಿಗೆ ಹತ್ತಿರವಾಗತೊಡಗಿದ್ದೆ. ಅಪ್ಪನ ಬಳಿ ಏನೇ ಹೇಳ ಬೇಕೆಂದಿದ್ದರೂ ಅಮ್ಮನ ಮೂಲಕವೇ ಅಪ್ಪನಿಗೆ ತಿಳಿಸುತ್ತಿದ್ದೆ. ಅಮ್ಮ ನಮ್ಮ ನಡುವಿನ ಮಧ್ಯವರ್ತಿಯಾಗಿದ್ದಳು. ಹಿಂದೊಮ್ಮೆ ಹೀರೋ ಆಗಿದ್ದ ಅಪ್ಪ ಇವತ್ತು ನನ್ನ ಕಣ್ಣಿಗೆ ಗದರುವ ಅಪ್ಪನಾಗಿ ಕಂಡಿದ್ದ.
ಅಪ್ಪ ಯಾವತ್ತೂ ಓದುವ ವಿಷಯದಲ್ಲಿ ನನ್ನನ್ನು ಒತ್ತಾಯಿಸಲಿಲ್ಲ. ಯಾಕೆ ಕಡಿಮೆ ಮಾರ್ಕ್ಸ್ ಬಂತು ಅಂತನೂ ಕೇಳುತ್ತಿರಲಿಲ್ಲ. ಜಾಸ್ತಿ ಮಾರ್ಕ್ಸ್ ಬಂದ್ರೆ ಹೊಗಳುತ್ತಲೂ ಇರಲಿಲ್ಲ! ನನ್ನ ಓದುವ ಅಸೆ, ಕನಸು ಎಲ್ಲವನ್ನೂ ಅಮ್ಮನ ಬಳಿ ಹೇಳಿಕೊಳ್ಳುತ್ತಿದ್ದೆ. ಒಂದು ದಿನವೂ ಅಪ್ಪನ ಬಳಿ ನನ್ನ ಮುಂದಿನ ಭವಿಷ್ಯದ ಬಗ್ಗೆ ಮಾತಾಡಲಿಲ್ಲ. ಅಪ್ಪನಿಗೆ ನನ್ನ ಬಗ್ಗೆ ಅದೆಷ್ಟು ನಿರೀಕ್ಷೆ ಇದೆಯೋ ಗೊತ್ತಿಲ್ಲ. ಆಗ ಅಪ್ಪಎಂದರೆ ನನ್ನ ಮನಸಲ್ಲಿದ್ದದ್ದು ಭಯ. ಅಪ್ಪ ಬದಲಾಗಿದ್ದಾನೆ ಅಂತ ಅದೆಷ್ಟೋ ಸಲ ನಾನು ಒಬ್ಬಳೇ ಅತ್ತಿದ್ದಿದೆ. ಆದರೆ ನಾನು ಬದಲಾಗಿದ್ದು ಮಾತ್ರ ನಂಗೆ ಗೊತ್ತೇ ಆಗಲಿಲ್ಲ. ಒಮ್ಮೊಮ್ಮೆ ಅಪ್ಪ ನಾನು ಕೇಳಿದ್ದನ್ನು ಕೊಡಿಸಲಿಲ್ಲ ಅಂತ ಸಿಟ್ಟಾಗುತ್ತಿದ್ದೆ. ಕೊಡಿಸಲು ತಡವಾದರೂ ಅಪ್ಪಯಾವತ್ತೂ ಕೇಳಿದ್ದನ್ನು ಕೊಡಿಸದೆ ಇರುತ್ತಿರಲಿಲ್ಲ. ಅವನು ಹಳೆಯ ಬಟ್ಟೆ ಹಾಕಿದರೂ ನಂಗೆ ಮಾತ್ರ ಹೊಸ ಬಟ್ಟೆ ಕೇಳಿದಾಗೆಲ್ಲ ಕೊಡಿಸುತ್ತಿದ್ದ.
ಇವತ್ತಿಗೂ ಅಪ್ಪಅಂದ್ರೆ ಭಯವಿದೆ. ಅದರ ಜೊತೆಗೆ ಬೆಟ್ಟದಷ್ಟು ಪ್ರೀತಿ ಕೂಡ ಇದೆ. ಅವರ ಜೊತೆ ಮನಬಿಚ್ಚಿ ಮಾತಾಡದಿದ್ರೆ ಏನಂತೆ? ನಾನೇನು ಅಂತ ಖಂಡಿತ ಅಪ್ಪಆರ್ಥ ಮಾಡ್ಕೊಂಡಿರುತ್ತಾನೆ. ಒಮ್ಮೊಮ್ಮೆ ಬಾಲ್ಯ ತುಂಬಾ ನೆನಪಾಗುತ್ತೆ. ಜೊತೆಗೆ ನನ್ನ superman ಅಪ್ಪಕೂಡ ನೆನಪಾಗುತ್ತಾನೆ. ಮತ್ತೆ ಅವನ ಹೆಗಲೇರಿ ಕುಳಿತುಕೊಳ್ಳೋ ಮನಸ್ಸಾಗುತ್ತೆ. ಅವನ ಮಡಿಲಲ್ಲಿ ಮಲಗಿ ಕಥೆ ಕೇಳಿದ ನೆನಪಾಗುತ್ತೆ. ಅಂದಿನ ಅಪ್ಪಇವತ್ತು ಬೇಕಿತ್ತು ಅನಿಸುತ್ತೆ. ಕಳೆದುಹೋದ ಸಮಯ ನನ್ನ ಮತ್ತು ಅಪ್ಪನ ಸಂಬಂಧವನ್ನೂ ಬದಲಾಯಿಸಿಬಿಟ್ಟಿದೆ.
ಅಪ್ಪಾ… ನನಗೋಸ್ಕರ ಇಷ್ಟೆಲ್ಲ ಮಾಡಿದ ನಿಂಗೆ ನಾನೇನಾದರೂ ಹೆಮ್ಮೆಯಾಗುವಂಥ ಕೆಲಸ ಮಾಡಲೇಬೇಕು. ನನ್ನ ಮಗಳು ಅಂತ ನೀನು ಖುಷಿಯಿಂದ ಹೇಳಿಕೊಳ್ಳಬೇಕು… ನಂಗೂ ಗೊತ್ತು: ನೀನೆಷ್ಟು ಪ್ರೀತಿ ಇಟ್ಟುಕೊಂಡಿದಿಯಾ ನನ್ನ ಮೇಲೆ ಅಂತ. ನನಗೂ ಅಷ್ಟೇ ಪ್ರೀತಿ ಇದೆ ನಿನ್ನ ಮೇಲೆ. ಮತ್ತೆ ಪುಟ್ಟ ಹುಡುಗಿಯಾಗಿ ನಿನ್ನ ಕೈ ಹಿಡಿದು ನಡೆಯುವಾಸೆ ಅಪ್ಪಾ. ನೀನು ಕಥೆ ಹೇಳಬೇಕು. ಕೇಳುತ್ತಾ ನಾನು ಜಗವನ್ನೇ ಮರೆಯಬೇಕು. ಈ ಜೀವನ, ಜಂಜಾಟದ ಬದುಕಿನ ನಡುವೆ ನಿನಗೇನೋ ಹೇಳುವುದನ್ನು ಮರೆತೇಬಿಟ್ಟೆ… ಐ ಲವ್ ಯು ಅಪ್ಪಾ…
– ಅವನಿ ಭಟ್