ಅವರೊಬ್ಬ ದೊಡ್ಡ ಅಧಿಕಾರಿ. ಕೆಲಸದ ಸಲುವಾಗಿ ಆಗಾಗ್ಗೆ ಊರಿಂದೂರಿಗೆ ಹೋಗಬೇಕಾಗುತ್ತದೆ. ಅವರು ಎಲ್ಲಿಗೇ ಹೋದರೂ, ಅವರ ಜೊತೆಗೇ ಪ್ರಯಾಣ ಮಾಡುತ್ತಿತ್ತು ಆ ಹಳೆಯದಾದ, ಮಾಸಿದ ಕೌದಿ (ಹೊದಿಕೆ). ಹೊದೆಯಲು ಬೇಕಾದಷ್ಟು ಹೊಸ ರಜಾಯಿಗಳಿದ್ದರೂ, ಅವರಿಗೆ ಆ ಕೌದಿಯೇ ಬೇಕು. ಅದನ್ನು ಗಮನಿಸಿದ ಅವರ ಸಹೋದ್ಯೋಗಿ ತಡೆಯಲಾರದೆ, ಕೇಳಿಯೇ ಬಿಟ್ಟರು – “ಯಾಕೆ ಹೊಸ ಶಾಲು ಕೊಳ್ಳಬಾರದೆ?’ ಅಂತ! ಆಗ ಆ ಮೇಲಧಿಕಾರಿ, “ಶಾಲಿನ ಶಕಲಾತಿಗಿಂತ ತಾಯಿಯ ಕಕಲಾತಿ
( ಕಕ್ಕುಲತೆ) ಹೆಚ್ಚು. ಇದು ನಮ್ಮವ್ವ ಕೈಯಾರೆ ಹೊಲೆದ ಕೌದಿ, ಇದನ್ನು ಹೊದ್ದರೆ ಅವ್ವನ ಮಡಿಲಲ್ಲಿ ಮಲಗಿದ ಅನುಭವ’ ಎಂದರು.
ಹೌದು, ತಂದೆ ತಾಯಿಯರ ಪ್ರೀತಿಯೇ ಹಾಗೆ.
ನಾನಾಗ 4 ಅಥವಾ 5ನೇ ತರಗತಿಯಲ್ಲಿದ್ದೆ. ಒಂದು ದಿನ ಅಪ್ಪ ನನ್ನನ್ನು ಕರೆದು, ಒಂದು ಪಾಕೀಟನ್ನು ನನ್ನ ಕೈಯಲ್ಲಿಟ್ಟು “ಇದು ನಿನಗೆ’ ಎಂದರು. ತೆರೆದು ನೋಡಿದೆ. ಕೆನೆ ಬಣ್ಣದ ಮೆತ್ತನೆಯ ತುಪ್ಪಳದ ಕಂಬಳಿ ಬೆಚ್ಚಗೆ ಮಲಗಿತ್ತು. ಖುಷಿಯಿಂದ ಎದೆಗವುಚಿ ಓಡಿದೆ. ಅಂದಿನಿಂದ ಅದು ನನ್ನ ಜೊತೆಯಾಯಿತು. ಮಳೆಗಾಲ, ಚಳಿಗಾಲ ಕೊನೆಗೆ ಬೇಸಿಗೆ ಬಂದರೂ ಆ ಹೊದಿಕೆ ಬೇಕೇ ಬೇಕು. ಅದಿಲ್ಲದೇ ನಿದ್ದೆಯೇ ಬರುತ್ತಿರಲಿಲ್ಲ. ಹಾಗೇ ವರುಷಗಳು ಉರುಳಿದವು, ಹೊದ್ದು ಹೊದ್ದು ಕಂಬಳಿ ತೆಳ್ಳಗಾದ್ರೂ ಅದನ್ನು ಬಿಡಲು ಮನಸ್ಸಿಲ್ಲ. ಮದುವೆಯ ನಂತರವೂ ನನ್ನ ಜೊತೆಯೇ ಬಂತು. ಅದಕ್ಕಾಗಿ ಎಲ್ಲರೂ ಅಣಕಿಸುವವರೇ! ಅದಾದರೂ ಎಷ್ಟು ವರ್ಷ ಬಂದೀತು? ಎಲ್ಲರ ಈಷ್ಯೆìಗೆ ಗುರಿಯಾದ ನನ್ನ ಕಂಬಳಿ, ಮೊದಲ ಮಗ ಹುಟ್ಟಿದಾಗ ಸಣ್ಣಗೆ ಪಿಸಿಯತೊಡಗಿತು! ಆದರೆ, ಅದನ್ನು ಎಸೆಯಲು ಮನಸ್ಸಿಲ್ಲ. ಆಗ ಅದನ್ನು ಎರಡು ಭಾಗ ಮಾಡಿ ಮೇಲೆ ಹೊಸ ಬಟ್ಟೆ ಹಚ್ಚಿ, ಹೊಲಿದೇ ಬಿಟ್ಟೆ ಎರಡು ಕೌದಿ ಹೋಲುವ ಹೊದಿಕೆಗಳನ್ನು!
ಆ ಕಂಬಳಿಯ ಮೇಲೇಕಷ್ಟು ವ್ಯಾಮೋಹ? ಅಪ್ಪ ಯಾವಾಗ್ಲೂ ಶಿಸ್ತಿನ, ಗತ್ತಿನ ಆಸಾಮಿ. ನಮ್ಮನ್ನು ಎತ್ತಿ, ಮು¨ªಾಡಿ ಪ್ರೀತಿ ತೋರಿಸುತ್ತಿದ್ದಿಲ್ಲ. ಆದರೆ ಎಂದೂ ಗದರಿದವರಲ್ಲ.ಪ್ರೀತಿಯಿಂದ ತಲೆ ಮೇಲೆ ಕೈಯಾಡಿಸುತ್ತಿದ್ದರಷ್ಟೇ. ಅದು ಅಪ್ಪ ನನಗಾಗಿ ತಂದ ಪ್ರೀತಿಯ ಉಡುಗೊರೆ! ಅಪ್ಪ ಅದರಲ್ಲಿ, ಮಗಳಿಗೆಂದು ತುಂಬಿ ಕೊಟ್ಟ, ಪ್ರೀತಿ, ಮಮತೆ, ಕಕ್ಕುಲತೆ ಬೆರೆತ ಹದವಾದ ಬೆಚ್ಚನೆಯ ಅಪ್ಪುಗೆ ಇತ್ತು. ಅದಕ್ಕೇ ಅದನ್ನು ಬಿಟ್ಟಿರಲು ಆಗಲಿಲ್ಲ!
ಜೀವನೋತ್ಸಾಹದಿಂದ ತುಂಬಿದ್ದು, ನೂರನೇ ವರ್ಷದಲ್ಲಿ ಅಪ್ಪ ನನ್ನನ್ನು ಬಿಟ್ಟು ಹೋದಾಗ, ನಾನು ಚಿಪ್ಪಿನೊಳಗೆ ಹುದುಗಿ ಹೋದೆ. ಮತ್ತೆ ನನ್ನನ್ನು ಹೊರ ತಂದಿದ್ದು ಕೌದಿಯ ರೂಪ ಪಡೆದಿದ್ದ ಅದೇ ತುಪ್ಪಳದ ಕಂಬಳಿ! ಚಿಕ್ಕ ಮಗ, ನಾನು ಹೊಲಿದ ಕೌದಿಯನ್ನು ಇನ್ನೂ ಹೊದೆಯುತ್ತಾನೆ. ಆ ಕೌದಿಯ ರೂಪ ಪಡೆದ, ನನ್ನಪ್ಪ ಕೊಟ್ಟ ಕಂಬಳಿ ನೋಡಿದಾಗಲೊಮ್ಮೆ ಅಜಾನುಬಾಹು ಅಪ್ಪ ನನ್ನ ಕಣ್ಣೆದುರು ಬರುತ್ತಾನೆ. ಅದನ್ನು ಎದೆಗವುಚಿ ಹಿಡಿದಾಗ ಅಪ್ಪ ತಲೆ ಮೇಲೆ ಕೈಯಾಡಿಸಿದಂತಾಗುತ್ತದೆ!
-ಜಯಶ್ರೀ ಕಜ್ಜರಿ