Advertisement
“ಜಟ್ಟೆಪ್ಪ ವಡ್ಡರ್’ (ಹೆಸರು ಬದಲಿಸಲಾಗಿದೆ)ಈಗ್ಗೆ ಸುಮಾರು ಹತ್ತು ವರ್ಷಗಳ ಹಿಂದೆ, ಒಂದು ದಿನ ಬಾಗಲಕೋಟೆ ಜಿಲ್ಲೆಯ ಬೇಸಗೆಯ ಸುಡುಬಿಸಿಲನ ಮಧ್ಯಾಹ್ನ ನನ್ನ ಚೇಂಬರ್ ಬಾಗಿಲಲ್ಲಿ ನಿಂತು ನಮ್ಮ ಆಸ್ಪತ್ರೆಯ ಹುಡುಗ ಕೂಗುತ್ತಿದ್ದ. ಆಸ್ಪತ್ರೆಯ ನಿರೀಕ್ಷಣಾ ಕಕ್ಷೆಯಲ್ಲಿ ಕುಳಿತ ರೋಗಿಗಳು ಒಂದೇ ಕೂಗಿಗೆ ಓಗೊಡುವುದೇ ಇಲ್ಲ. ತಮ್ಮ ತಮ್ಮಲ್ಲೇ ದೊಡ್ಡ ದನಿಯಲ್ಲಿ ಮಾತಾಡುತ್ತಲೋ, ಒಬ್ಬರಿನ್ನೊಬ್ಬರ ಕಷ್ಟ ಸುಖ ಕೇಳುತ್ತಲೋ, ಕುಳಿತುಬಿಟ್ಟಿರುತ್ತಾರೆ. ತಮ್ಮ ರೋಗಗಳಿಗೆ ಪರಿಹಾರದ ಜೊತೆಗೆ, ಬೇರೆ ಹಳ್ಳಿಗಳ “ಕಥೆ’ ಕೇಳುವ ಸೌಭಾಗ್ಯ. ಅಲ್ಲದೆ ನಮ್ಮಂಥ ಆಸ್ಪತ್ರೆಗಳಲ್ಲಿ ಶಾಂತತೆಯಿಂದ ಕುಳಿತು ತಮ್ಮ ಸರತಿ ಬಂದಾಗ ಒಳ ಬಂದು ತೋರಿಸಿಕೊಳ್ಳುವವರು ಕಡಿಮೆ. ಏನಿದ್ದರೂ ಅವಸರ, ಧಾವಂತ. ಜೊತೆಗೇ ಗೌಜು ಗದ್ದಲ. ಶಿಸ್ತಿನ ಕೊರತೆ ಎದ್ದು ಕಾಣುತ್ತದೆ. ಇಂತಹದರಲ್ಲಿ ದಿನಾಲೂ ಬರುವ ನೂರಾರು ರೋಗಿಗಳನ್ನು ನೋಡಿ, ಪರೀಕ್ಷಿಸಿ, ಅವರ ಕಷ್ಟ ಸುಖಗಳನ್ನು ವಿಚಾರಿಸಿ, ಅವರ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಿ ಔಷಧಿಗಳನ್ನು ಬರೆದುಕೊಟ್ಟು ಅವರನ್ನು ಸಮಾಧಾನಿಸುವುದರಲ್ಲಿ ಸಾಕಾಗುತ್ತದೆ. ಕಷ್ಟ ಸುಖಗಳನ್ನು ವಿಚಾರಿಸದೆ ಬರೀ ರೋಗ ಪರೀಕ್ಷಿಸಿ ಔಷಧಿ ಬರೆದು ಕೊಟ್ಟರೆ, “ಡಾಕ್ಟರ್ ಈಗ ಮೊದಲಿನ ಹಾಂಗ ಇಲ್ಲ ಬಿಡಪ.. ನಿಷ್ಕಾಳಜಿ ಮಾಡತಾನ..’ ಅನ್ನುವ ಮಾತುಗಳನ್ನು ತೇಲಿಬಿಡುತ್ತಾರೆ.
ಮತ್ತೂಮ್ಮೆ ಜೋರಾಗಿ ಕರೆದಾಗ, ಸುಮಾರು ಅರವತ್ತೈದು ವಯಸ್ಸಿನ ವ್ಯಕ್ತಿಯೊಬ್ಬ ಒಳಬಂದ. ನೋಡಿದರೆ, ಎಲ್ಲೋ ನೋಡಿದ ನೆನಪು. ಹೌದು, ಅವನು ನಮ್ಮೂರಿನವನೇ. ಅಂದರೆ ಸುಮಾರು ಎಂಬತ್ತು ಕಿಲೋಮೀಟರ್ ದೂರದಿಂದ ಬಂದಿದ್ದ. ನಾನು ಅವನನ್ನು ನೋಡದೆ ಅದಾಗಲೇ ಇಪ್ಪತೈದು ವರ್ಷಗಳಾದ್ದರಿಂದ ಬೇಗನೆ ಗುರುತು ಸಿಗಲಿಲ್ಲ. ಒಂದಿಷ್ಟು ಸಮಯದ ಮೇಲೆ ಗುರುತು ಸಿಕ್ಕಿ, ಅವನ ಮನೆ, ಮಕ್ಕಳು ಇತ್ಯಾದಿಗಳ ಬಗ್ಗೆ ವಿಚಾರಿಸಿ, ಪರೀಕ್ಷಿಸಲು ಪ್ರಾರಂಭಿಸಿದೆ. ಅಂತಹ ಗಂಭೀರ ಕಾಯಿಲೆ ಗಳಿರದಿದ್ದರೂ ವಯಸ್ಸಿಗನುಸಾರ ಕಾಡುವ ಕೆಮ್ಮು, ಉಬ್ಬಸ ಇತ್ಯಾದಿಗಳಿದ್ದವು. ಅವನ ರಕ್ತ, ಮೂತ್ರ ಇತ್ಯಾದಿಗಳನ್ನು ಪರೀಕ್ಷೆ ಮಾಡಿಸಿ, ಎಕ್ಸ್‌ರೇ ತೆಗೆಯಿಸಿ, ಒಂದು ರೀತಿಯ ಸಂಪೂರ್ಣ ಚೆಕ್‌ಅಪ್‌ಗ್ಳನ್ನೂ ಮುಗಿಸಿದೆ. ಎಲ್ಲ ಮುಗಿಸಿ ಅವನಿಗೆ ಅವಶ್ಯವಿದ್ದ ಔಷಧಿಗಳನ್ನು ನಮ್ಮ ಮೆಡಿಕಲ್‌ಶಾಪ್‌ನಿಂದಲೇ ಕೊಡಿಸಿದೆ. ಎಲ್ಲ ಸೇರಿ ಸುಮಾರು ಎರಡು ಸಾವಿರ ರೂಪಾಯಿಗಳಾದವು. ಅವನು ಹಣ ಕೊಡಲು ಬಂದಾಗ, ನಾನು “ಬೇಡ’ ಎಂದೆ. ಅವನಿಗೆ ಅಚ್ಚರಿ.”ಯಾಕ್ರೀ ಸಾಹೇಬ್ರ, ಬಿಲ್ ಯಾಕ ಬ್ಯಾಡ ಅಂತೀರಿ? ಔಷಧ ಏನ್ ನಿಮ್ಮ ಹೊಲದಾಗ ಬೆಳಿತಾವೆನ್ರಿ?’ ಅಂದ.”ಇಲ್ಲ, ಜೆಟ್ಟೆಪ್ಪ, ನೀ ನಮಗ ಮೊದಲ ಮಾಡಿದ ಉಪಕಾರಕ್ಕ, ನಾ ಬಿಡ್ತಿರೋ ಈ ಬಿಲ್ ಭಾಳ ಏನೂ ಅಲ್ಲ..’ ಅಂದೆ.”ನನಗ ನೆನಪ ಇಲ್ಲರೀ, ಸಾಹೇಬ್ರ. ನಿಮಗ ನಾ ಯಾವಾಗ ಉಪಕಾರ ಮಾಡೀನ್ರೀ?’ ಅಂದ, ಹಳ್ಳಿಯ ಜನರ ಅದೇ ಮುಗ್ಧತೆಯಿಂದ.
Related Articles
Advertisement
ನನ್ನ ವೈದ್ಯಕೀಯ ಕಲಿಕೆಯ ಮೊದಲ ಮೂರು ವರ್ಷಗಳನ್ನು ಕಷ್ಟಪಟ್ಟು ಹೇಗೋ ನಿಭಾಯಿಸಿದ ಅಪ್ಪನಿಗೆ ನಾನು ಕೊನೆಯ ವರ್ಷ ಬರುವುದರೊಳಗೆ ಸಾಲ ಹೆಚ್ಚಾಗಿಬಿಟ್ಟಿತ್ತು. ಅಲ್ಲದೆ ಎರಡು ವರ್ಷ ಭೀಕರ ಬರಗಾಲ ಬೇರೆ. ಹೀಗಿರುವಾಗ, ನನ್ನ ಖರ್ಚಿಗೆಂದು ನೂರು ರೂಪಾಯಿ ಕಳಿಸಲು ನಾನು ಪತ್ರ ಬರೆದಿದ್ದೆ. ಈಗಿನವರಿಗೆ ವಿಚಿತ್ರ ಎನಿಸಬಹುದು, ಆಗ ನನ್ನ ತಿಂಗಳ ಖರ್ಚಿಗೆ ಬೇಕಾಗುತ್ತಿದ್ದದ್ದು ಬರೀ ಒಂದು ನೂರು ರೂಪಾಯಿ ಮಾತ್ರ. ಆಗಿನ ದಿನಗಳಲ್ಲಿ ನನ್ನ ತಿಂಗಳ ಮೆಸ್ ಬಿಲ್ 80 ರೂಪಾಯಿಗಳು. ಉಳಿದ ಇಪ್ಪತ್ತು ರೂಪಾಯಿಗಳಲ್ಲಿ ನನ್ನ ಇನ್ನುಳಿದ ಖರ್ಚು ನಿಭಾಯಿಸುತ್ತಿದ್ದೆ.
ಪುಸ್ತಕ ಹಾಗೂ ಫೀಸ್ ಎಲ್ಲ ನನ್ನ ಸ್ಕಾಲರ್‌ಷಿಪ್‌ನಲ್ಲಿ ಸಾಂಗವಾಗುತ್ತಿತ್ತು. ಅಪ್ಪ ಊರೆಲ್ಲ ಕೇಳಿದರೂ ಅಂದು ನೂರು ರೂಪಾಯಿ ದೊರಕಲಿಲ್ಲವಂತೆ. ಅದೇ ಕೊರಗಿನಲ್ಲಿ ಮನೆಗೆ ಬರುತ್ತಿರುವಾಗ, ದಾರಿಯಲ್ಲಿ ಈ ವಡ್ಡರ ಜಟ್ಟೆಪ್ಪನ ಭೆಟ್ಟಿ. ಆ ದಿನಗಳಲ್ಲಿ ಅವನು ಹಳ್ಳಿ ಮನೆಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈ. ಆತ ಚಾಣ-ಸುತ್ತಿಗೆ ಹಿಡಿದು ಕಟೆಯತೊಡಗಿದನೆಂದರೆ ದಿನಕ್ಕೆ ಎಂಟತ್ತು ಮೂಲೆಗಲ್ಲುಗಳನ್ನು ಸಲೀಸಾಗಿ ಕಟೆಯಬಲ್ಲವನಾಗಿದ್ದ. ಕಷ್ಟ ಪಟ್ಟು ದುಡಿದು ಚೆಂದದ ದೃಢವಾದ ಕಟೆದ ಕಲ್ಲಿನ ಮನೆಗಳನ್ನು ಎಬ್ಬಿಸಿ ನಿಲ್ಲಿಸಿಬಿಡುತ್ತಿದ್ದ. ಜೊತೆಗೆ ಒಂದಿಷ್ಟು ದುಡ್ಡನ್ನೂ ಮಾಡಿದ್ದ. ಅಲ್ಲದೇ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಅವನ ಸ್ವಭಾವವೇ ಆಗಿತ್ತು.
“ಯಾಕ್ರೀ ಸಾವಾRರ್ರ, ಮಾರಿ(ಮುಖ) ಸಣ್ಣದ ಮಾಡೀರಿ..?’ ಅಂತ ಕೇಳಿದಾಗ, ನಮ್ಮಪ್ಪ ಇದ್ದ ವಿಷಯ ಹೇಳಿ¨ªಾನೆ.
ತಾನು ಸ್ವತಃ “ಕೂಲಿ’ಯವನಾದ ಜಟ್ಟೆಪ್ಪ ದೊಡ್ಡ ಮನಸ್ಸು ಮಾಡಿ, “ತಗೊಳಿ, ನೂರ್ ರೂಪಾಯಿ ಏನ್ ದೊಡ್ಡದು..’ ಎಂದು, ತನ್ನ ಅಂಗಿಯ ಒಳಜೇಬಿನಿಂದ ನೂರು ರೂಪಾಯಿ ತೆಗೆದು ನಮ್ಮಪ್ಪನ ಕೈಯಲ್ಲಿಟ್ಟಿದ್ದಾನೆ. ಅಪ್ಪನ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಂದೂ ತನ್ನ ಮಗನಿಗೆ ಇಲ್ಲ ಅಂದಿರದ ಅಪ್ಪನಿಗೆ ಈಗಲೂ”ಇಲ್ಲ’ ಅನ್ನದಂತೆ ಮಾಡಿದ ಈ ಆಪತಾºಂಧವನಿಗೆ ಕೃತಜ್ಞತೆ ತಿಳಿಸುತ್ತ, “ನಿನ್ನ ಉಪಕಾರ ಭಾಳ ಆಯ್ತು’ ಅಂದರೆ, “ಇರ್ಲಿ ಬಿಡ್ರೀ ಸಾವಕಾರ್ರ, ನಿಮ್ಮ ಮಗ ಡಾಕ್ಟರಾಗಿ ಬಂದ ಮ್ಯಾಲ ಒಂದ್ ಗುಳಿಗಿ ಕೊಟ್ರ ಸಾಕ್ರಿ, ಎಲ್ಲಾ ತೀರತೈತ್ರಿ..’ ಅನ್ನುವ ವಿಶಾಲ ಹೃದಯದ ಮಾತಾಡಿದ್ದ.
ಅಂದು ಮನಿಯಾರ್ಡರ್ ಫಾರ್ಮ್ನಲ್ಲಿ ನಡೆದ ವಿಷಯವನ್ನು ಅಪ್ಪ ಬರೆದು ನನಗೆ ತಿಳಿಸಿದಾಗ ಜಟ್ಟೆಪ್ಪನ ಬಗೆಗೆ ನನ್ನ ಮನದ ಮೂಲೆಯಲ್ಲೊಂದು ಗೌರವದ, ಕೃತಜ್ಞತೆಯ ಸ್ಥಾನ ಭದ್ರವಾಗಿ ಕುಳಿತುಬಿಟ್ಟಿತ್ತು. ಇಂಥ ವಿಷಯಗಳನ್ನೆಲ್ಲ ಅಪ್ಪ ಪತ್ರ ಮುಖೇನ ಅಥವಾ ಮುಖತಃ ನನಗೆ ಆಗಾಗ್ಗೆ ತಿಳಿಸುತ್ತಿದ್ದ. ಬಹುಶಃ ಅವುಗಳನ್ನು ನೆನಪಿಟ್ಟು ಸಮಯ ಬಂದಾಗ ಅವರ ಋಣ ತೀರಿಸಲೆಂದೇ ಸೂಚ್ಯವಾಗಿ ಅಪ್ಪ ನನಗೆ ಇದನ್ನೆಲ್ಲಾ ತಿಳಿಸುತ್ತಿದ್ದನೇನೋ ಅನಿಸುತ್ತದೆ. ಅದಕ್ಕೆಂದೇ ಅಂದು ದುಡ್ಡು ಕೊಟ್ಟ ವ್ಯಕ್ತಿ ಇಂದು ನನ್ನೆದುರಿಗೆ ನಿಂತಾಗ ಅದೆಲ್ಲ ಮರುಕಳಿಸಿ ಅವನಿಗೆ ಕೃತಜ್ಞತೆ ಸಲ್ಲಿಸಲು ಸರಿಯಾದ ಅವಕಾಶ ಅನಾಯಾಸವಾಗಿ ನನ್ನ ಬಾಗಿಲಿಗೇ ಬಂದುಬಿಟ್ಟಿತ್ತು.
ಇದೆಲ್ಲವನ್ನೂ ಅವನಿಗೆ ನೆನಪಿಸಿ, ಆ ಕಾರಣಕ್ಕಾಗಿ ನಿನ್ನಿಂದ ನಾನು ಬಿಲ್ ಪಡೆಯುವುದಿಲ್ಲ, ಅಂದಾಗ, “ಅದೇನ್ ದೊಡ್ಡ ಮಾತು, ಸಾಹೇಬ್ರ. ಅವತ್ತ ನನ್ನ ಹತ್ತೇಕ್ ರೊಕ್ಕ ಇದುÌ. ನಿಮ್ಮ ತಂದಿಯವರೂ ನಮಗ ರಗಡ ಸರ್ತಿ ರೊಕ್ಕ ಕೊಟ್ಟಿದ್ರು. ಅದೂ ಅಲ್ಲದ ಆ ನೂರ್ ರೂಪಾಯಿನ, ಮುಂದ ಒಂದೇ ತಿಂಗಳಿಗೆ ನಿಮ್ಮ ತಂದಿಯವರು ನನಗೆ ತಿರಗಿ ಕೊಟ್ಟಾರ್ರೀ…’ ಅಂದ.
ನಾ ಅಂದೆ:”ಹಂಗಲ್ಲ, ಜಟ್ಟೆಪ್ಪ. ಅವತ್ತಿನ ದಿನ ನೀ ಕೊಟ್ಟಿರಲಿಲ್ಲಂದ್ರ ನಮ್ಮಪ್ಪಗ ಭಾಳ ಕಷ್ಟ ಆಗ್ತಿತ್ತು. ಅದನ್ನ ನೀ ತಪ್ಪಿಸಿದೆಯಲ್ಲ, ಅದು ಮುಖ್ಯ.. ಆ ಕಷ್ಟ ತಪ್ಪಿಸಿದ ನಿನಗ ಏನ್ ಕೊಟ್ರೂ ಕಡಿಮೀನ..’
“ಸಾಹೇಬ್ರ, ಎಷ್ಟ ನೆನಪ ಇಟ್ಟಿàರಿ? ಇಪ್ಪತ್ತೈದ ವರ್ಷದ ಹಿಂದ ಮಾಡಿದ ಒಂದ ಸಣ್ಣ ಉಪಕಾರನ ಇನ್ನ ನೆನಪ ಇಟ್ಟಿàರಿ? ಇಂಥ ಗುಣ ಈಗಿನ ಕಾಲದ ಮಂದೀಗೆ ಎಲ್ಲೆದರೀ? ನಿಮಗ ಮುಂದ ಭಾಳ ಛಲೋ ಆಗತೈತ್ರಿ..’ ಎಂದು ನನ್ನನ್ನು ಹೊಗಳಲು ಶುರು ಮಾಡಿದಾಗ ನನಗೂ ಸ್ವಲ್ಪ ಮುಜುಗರವೇ.
ಅಂದು ಅವನು ನೂರು ರೂಪಾಯಿ ಕೊಟ್ಟಾಗ “ನೂರು’ ಆತನಿಗೆ ದೊಡ್ಡದಾಗಿರಲಿಲ್ಲ, ಆದರೆ ಅದು ನಿಭಾಯಿಸಿದ ಕೆಲಸ ದೊಡ್ಡದಾಗಿತ್ತು. ಇಂದು ಕೂಡ “ಎರಡು ಸಾವಿರ’ ನನಗೆ ಖಂಡಿತ ದೊಡ್ಡದಲ್ಲ, ಆದರೆ ಕೃತಜ್ಞತೆಯನ್ನು ತೋರಿಸಲು ಬಳಕೆಯಾದ ಸಂದರ್ಭ ದೊಡ್ಡದಿತ್ತು. ಅನೇಕ ನಿಮಿಷಗಳವರೆಗೆ ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಾ ಇದ್ದುಬಿಟ್ಟೆವು. ನನ್ನ ಕೈಗಳಲ್ಲಿ ಆತನ ಕೈಗಳು. ನನ್ನ ಕಣ್ಣುಗಳಲ್ಲಿ ಕೃತಜ್ಞತೆ, ಆತನ ಕಣ್ಣುಗಳಲ್ಲಿ ಮೆಚ್ಚುಗೆ, ಗೌರವ. ಇಬ್ಬರ ಕಣ್ಣಲ್ಲೂ ವಿವರಿಸಲಾಗದ ಇನ್ನೂ ಯಾವುದೋ ಒಂದು ಭಾವದ ನೀರಿನ ತೆಳುಪೊರೆ. ಅನೇಕ ದಿನಗಳಿಂದ ಬಾಕಿ ಇದ್ದ ಎಂಥದೋ ಭಾರವನ್ನು ಕೆಳಗಿಳಿಸಿದ ಭಾವ ನನ್ನಲ್ಲಿತ್ತು.
ಈ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ? ಅಥವಾ ಅಕಸ್ಮಾತ್ ಅವನು ಎದುರು ಬಂದು ನಿಂತಾಗ ಹಳೆಯದೆಲ್ಲಾ ಮರುಕಳಿಸಿ ಹೀಗಾಯಿತೇ? ಗೊತ್ತಾಗಲಿಲ್ಲ.ಅಲ್ಲಿ ಮಾತು ಮೌನವಾಗಿತ್ತು…ಮೌನಕ್ಕೊಂದು ಮೌಲ್ಯವಿತ್ತು!
– ಶಿವಾನಂದ ಕುಬಸದ