Advertisement

ಕೂಟದಿಂದ ಹೊರಬಿದ್ದ  ದಬಾಂಗ್‌ ಡೆಲ್ಲಿ

11:23 AM Oct 04, 2017 | Team Udayavani |

ಚೆನ್ನೈ: ಮಂಗಳವಾರದ ಪ್ರೊ ಕಬಡ್ಡಿ ಹಣಾಹಣಿಯಲ್ಲಿ “ಎ’ ವಲಯದ ಅಗ್ರಸ್ಥಾನಿ ಮತ್ತು ಕೊನೆಯ ಸ್ಥಾನಿ ತಂಡಗಳ ನಡುವಿನ ಸಮರದಲ್ಲಿ ನಿರೀಕ್ಷೆಯಂತೆ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವು 20 ಅಂಕಗಳ ಭಾರೀ ಅಂತರದಿಂದ ದಬಾಂಗ್‌ ಡೆಲ್ಲಿ ತಂಡವನ್ನು ಸೋಲಿಸಿ ವಿಜೃಂಭಿಸಿದೆ.

Advertisement

ಆರಂಭದಿಂದ ಕೊನೆಯ ತನ ಕವೂ ಅಮೋಘ ಆಟವಾಡಿದ ಗುಜರಾತ್‌ ಪಡೆ ಡೆಲ್ಲಿಯನ್ನು 44-22 ಅಂಕಗಳಿಂದ ಉರುಳಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಫ‌ಲಿತಾಂಶದಿಂದ ಗುಜರಾತ್‌ ತಾನಾಡಿದ 18 ಪಂದ್ಯಗಳಿಂದ 11ನೇ ಗೆಲುವು ಸಾಧಿಸಿ 67 ಅಂಕಗಳೊಂದಿಗೆ ಎ ವಲಯದಲ್ಲಿ ಅಗ್ರಸ್ಥಾನವನ್ನು ಗಟ್ಟಿ ಗೊಳಿಸಿತಲ್ಲದೇ ಸೂಪರ್‌ ಪ್ಲೇ ಆಫ್ ತೇರ್ಗಡೆಯನ್ನು ಬಹುತೇಕ ಖಚಿತ ಗೊಳಿಸಿತು.

ಗುಜರಾತ್‌ ಅಬ್ಬರಕ್ಕೆ ಯಾವುದೇ ರೀತಿಯಲ್ಲಿ ಸಾಟಿಯಾಗದ ದಬಾಂಗ್‌ ಡೆಲ್ಲಿ ಸತತ 9ನೇ ಸೋಲು ಕಂಡು ಕೂಟದಿಂದ ಹೊರಬಿತ್ತು. ನೀರಸ ಪ್ರದರ್ಶನ ನೀಡಿದ ಡೆಲ್ಲಿ ತಂಡ 3 ಬಾರಿ ಆಲೌಟಾಗಿ ಸಂಪೂರ್ಣ ಶರಣಾಗತಿ ಸಾರಿತು. ಡೆಲ್ಲಿ ತಂಡ ತವರಿನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತಿತ್ತು.

ಗುಜರಾತ್‌ನ ಸಚಿನ್‌ ಮತ್ತು ಚಂದ್ರನ್‌ ರಂಜಿತ್‌ ರೈಡಿಂಗ್‌ ಮೂಲಕ ಗಮನ ಸೆಳೆದರು. ಸಚಿನ್‌ ಗ‌ರಿಷ್ಠ 11 ಅಂಕ ಗಳಿಸಿದರೆ, ಚಂದ್ರನ್‌ ರಂಜಿತ್‌ 9 ಅಂಕ ಪಡೆದರು. ಟ್ಯಾಕಲ್‌ನಲ್ಲಿ ಸುನಿಲ್‌ ಕುಮಾರ್‌ 6 ಅಂಕ ಪಡೆದರು. ಗುಜರಾತ್‌ ಚೆನ್ನೈ ಚರಣದಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಭೇರಿ ಬಾರಿಸಿತು. ಅದು ಮೊದಲ ಪಂದ್ಯದಲ್ಲಿ ಬಿ ವಲಯದ ಅಗ್ರಸ್ಥಾನಿ ಪಾಟ್ನಾ ಪೈರೇಟ್ಸ್‌ ತಂಡವನ್ನು 30-29 ಅಂಕಗಳಿಂದ ಮಣಿಸಿತ್ತು.

ಆರಂಭದಿಂದಲೇ ಭರ್ಜರಿ ಆಟ
ಗುಜರಾತ್‌ ತಂಡ ಆರಂಭದಲ್ಲಿಯೇ ಭರ್ಜರಿ ಆಟವಾಡಿತು. ಸಚಿನ್‌ ಮತ್ತು ಚಂದ್ರನ್‌ ರಂಜಿತ್‌ ರೈಡ್‌ನ‌ಲ್ಲಿ ಅಮೋಘವಾಗಿ ಆಡಿದ್ದರಿಂದ ಗುಜ ರಾತ್‌ನ ಅಂಕ ತ್ವರಿತ ಗತಿಯಲ್ಲಿ ಏರ ತೊಡಗಿತು. ಮೊದಲ ಐದು ನಿಮಿಷ ಮುಗಿದಾಗ ಗುಜರಾತ್‌ 6-1ರಿಂದ ಮುನ್ನಡೆಯಲ್ಲಿತ್ತು. ಏಳನೇ ನಿಮಿಷದಲ್ಲಿ ಡೆಲ್ಲಿ ತಂಡ ಆಲೌಟಾಯಿತು. ಆಬಳಿಕವೂ ಡೆಲ್ಲಿ ತಂಡ ನೀರಸವಾಗಿ ಆಡಿತು. ಇದೇ ವೇಳೆ ಗುಜರಾತ್‌ ತನ್ನ ಅಂಕವನ್ನು ಹೆಚ್ಚಿಸಿಕೊಳ್ಳುತ್ತ ಸಾಗಿತು. 10 ನಿಮಿಷದ ಆಟ ಮುಗಿದಾಗ ಗುಜರಾತ್‌ 14-4ರಿಂದ ಮುನ್ನಡೆಯಲ್ಲಿತ್ತು. ಮುಂದಿನ ಐದು ನಿಮಿಷಗಳಲ್ಲಿ ಗುಜರಾತ್‌ ಮತ್ತೆ 5 ಅಂಕ ಗಳಿಸಿದ್ದರೆ ಡೆಲ್ಲಿ  2 ಅಂಕ ಗಳಿಸಿತು. 16ನೇ ನಿಮಿಷದಲ್ಲಿ ಡೆಲ್ಲಿ ಮತ್ತೆ ಆಲೌಟ್‌ಗೆ ಒಳಗಾಯಿತು. ಮೊದಲ ಅವಧಿಯ ಆಟ ಮುಗಿದಾಗ ಗುಜರಾತ್‌ 27-9 ರಿಂದ ಮುನ್ನಡೆಯಲ್ಲಿತ್ತು.

Advertisement

ತಮಿಳ್‌ಗೆ ಮತ್ತೂಂದು ಸೋಲು 
ಮಂಗಳವಾರದ ದ್ವಿತೀಯ ಪಂದ್ಯ ದಲ್ಲಿ ಆತಿಥೇಯ ತಮಿಳ್‌ ತಲೈವಾಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 37-58 ಅಂತರದಿಂದ ಸೋತು ತವರಿನ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು. ಇದು ತವರಿನ ಚೆನ್ನೈಯಲ್ಲಿ ತಮಿಳ್‌ ತಲೈವಾಸ್‌ ತಂಡಕ್ಕೆ ಎದುರಾದ ಸತತ 4ನೇ ಸೋಲಾಗಿದೆ.

ಶಂಕರನಾರಾಯಣ ಪಿ.

Advertisement

Udayavani is now on Telegram. Click here to join our channel and stay updated with the latest news.

Next