ಶ್ರೀರಂಗಪಟ್ಟಣ: ಕಳೆದ ಒಂದೂವರೆ ತಿಂಗಳಿಂದ ಕೆಆರ್‌ಎಸ್ ಜಲಾಶಯದಲ್ಲಿ ಗರಿಷ್ಠ ಮಟ್ಟವನ್ನೇ ಕಾಯ್ದು ಕೊಳ್ಳಲಾಗಿದ್ದು, ಹೆಚ್ಚಿನ ನೀರನ್ನು ನದಿ ಮೂಲಕ ಹೊರ ಬಿಡಲಾಗಿದೆ.
ಕೊಡಗು ಸೇರಿದಂತೆ ಇತರೆ ಕರಾವಳಿ ಪ್ರದೇಶಗಳಲ್ಲಿ ಕಳೆದ 2 ತಿಂಗಳಿಂದ ಉತ್ತಮ ಮಳೆ ಆಗುತ್ತಿದ್ದು ಜಲಾಶಯಕ್ಕೆ 2 ಲಕ್ಷ ಕ್ಯೂಸೆಕ್ ನೀರು ಬಂದು ಒಂದೇ ವಾರದಲ್ಲಿ ಅಣೆಕಟ್ಟೆ ಭರ್ತಿಯಾಗಿದ್ದು ಇತಿಹಾಸ. ಅಲ್ಲಿಂದ ಇಲ್ಲಿಯವರೆಗೆ ಅಣೆಕಟ್ಟೆಯಲ್ಲಿ ಗರಿಷ್ಠ ಮಟ್ಟದ ನೀರನ್ನೇ ಕಾಪಾಡಿಕೊಳ್ಳಲಾಗಿದೆ.
ಪ್ರಸ್ತುತ 8 ಸಾವಿರ ಕ್ಯೂಸೆಕ್ ಒಳ ಹರಿವು ಅಣೆಕಟ್ಟೆಗೆ ಬರುತ್ತಿರುವುದರಿಂದ ಅದೇ ನೀರನ್ನು ಅಣೆಕಟ್ಟೆಯಿಂದ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಗರಿಷ್ಠ ಮಟ್ಟ 124.80 ಅಡಿ ನೀರನ್ನು ಈಗಾಗಲೇ ಸಂಗ್ರಹಿಸಲಾಗಿದ್ದು ಇನ್ನು ಹೆಚ್ಚಿನ ನೀರನ್ನು ಪ್ರತಿದಿನ ಬಂದ ನೀರನ್ನು ಹೊರ ಬಿಡಲಾಗುತ್ತಿದೆ.
ನೀರು ಹೊರಕ್ಕೆ: ಪ್ರಸ್ತುತ ಜಲಾಶಯದ ಮಟ್ಟ 124-80 ಅಡಿ ನೀರು ಇದ್ದು, ಗರಿಷ್ಠ ಮಟ್ಟವೂ 124.80. ಅಡಿ ಇದೆ. ಜಲಾಶಯಕ್ಕೆ 8908 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 49.452 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ 8699 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ.ಮುಂಗಾರು ಮಳೆ ಈ ಬಾರಿ ಕಳೆದ 3ತಿಂಗಳಿಂದ ಬಿರುಸಾಗಿ ಬಿದ್ದು ಈ ಭಾಗ ದಲ್ಲಿನ ರೈತರಿಗೆ ಉತ್ತಮ ಬೆಳೆ ತೆಗೆಯಲು ಅನುಕೂಲ ಮಾಡಿಕೊಟ್ಟಿದೆ. ದಸರಾ ವೇಳೆಯಲ್ಲೂ ಮಳೆ ಆರ್ಭಟ ಇನ್ನು ನಿಲ್ಲದೆ ಪ್ರತಿ ದಿನ ಮೈಸೂರು, ಶ್ರೀರಂಗ ಪಟ್ಟಣ ಭಾಗದಲ್ಲಿ ಮಳೆಯಾಗುತ್ತಿದೆ.
ದಸರಾ ಆರಂಭಕ್ಕೆ ಸಿದ್ಧತೆ: ಈಗಾಗಲೇ ದಸರಾ ವೀಕ್ಷಣೆ ಮಾಡಲು ಬರುವ ಪ್ರವಾಸಿಗರಿಗೆ ಮಳೆಯಿಂದ ಕಿರಿಕಿರಿ ಉಂಟಾಗುತ್ತಿದ್ದರೂ ಲೆಕ್ಕಿಸದೆ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕೆಆರ್‌ಎಸ್ ಜಲಾಶಯಕ್ಕೆ ಆಗಮಿಸುತ್ತಿದೆ. ಕೆಆರ್ ಎಸ್ ಜಲಾಶಯ ಇನ್ನು ಗರಿಷ್ಠ ಮಟ್ಟ ತುಂಬಿ ತುಳುಕುತ್ತಿದ್ದು ಇದನ್ನು ವೀಕ್ಷಣೆ ಮಾಡಲು ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಪ್ರವಾಸಿಗರಿಗೂ ತಂಪಾದ ಮಳೆ ವಾತಾವರಣ ದಲ್ಲಿ ವೀಕ್ಷಣೆ ಮಾಡಲು ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗುವುದು. ಈ ಕುರಿತು ಸರ್ಕಾರ ಒಂದು ಕೋಟಿ ರೂ. ಹೆಚ್ಚಿನ ಹಣ ಬಿಡುಗಡೆ ಮಾಡಿದೆ. ಜಲಾಶಯ ವೈಭವದಿಂದ ಕಾಣುವಂತೆ ಎಲ್ಲಾ ಉದ್ಯಾನವನ ಸೇರಿದಂತೆ ಕಾರಂಜಿಗಳಿಗೆ ವಿಶೇಷ ವಿದ್ಯುತ್ ದೀಪ ಅಳವಡಿಸಿ ಧ್ವನಿವರ್ಧಕದ ಬೆಳಕಿನಿಂದ ಕೂಡಿದ ಜಲಾಶಯ ಇನ್ನು ಮುಂದೆ ರಂಜಿಸಲಿದೆ.