Advertisement

ಸ್ಮಶಾನದಲ್ಲಿ ವೈಕುಂಠಕೆ ದಾರಿ!

10:15 AM Mar 04, 2020 | Lakshmi GovindaRaj |

ಇತ್ತೀಚೆಗಷ್ಟೆ ಸೆಟ್ಟೇರಿದ್ದ “ದಾರಿ ಯಾವುದಯ್ಯ ವೈಕುಂಠಕೆ..’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರದ ಬಹುಭಾಗ ಸ್ಮಶಾನದಲ್ಲಿಯೇ ನಡೆಯುವುದರಿಂದ, ಅದಕ್ಕಾಗಿ ರಾಮನಗರದ ಸಮೀಪದ ಸ್ಮಶಾನವನ್ನು ಆಯ್ಕೆ ಮಾಡಿಕೊಂಡ ಚಿತ್ರತಂಡ, ಅಲ್ಲಿ ಸುಮಾರು 13 ದಿನಗಳ ಕಾಲ ಚಿತ್ರೀಕರಣ ನಡೆಸಿದೆ.

Advertisement

ಶೀಘ್ರದಲ್ಲಿಯೇ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. “ಶ್ರೀಬಸವೇಶ್ವರ ಕ್ರಿಯೇಷನ್ಸ್‌’ ಲಾಂಛನದಲ್ಲಿ ಶರಣಪ್ಪ ಎಂ. ಕೊಟಗಿ ನಿರ್ಮಿಸುತ್ತಿರುವ “ದಾರಿ ಯಾವುದಯ್ಯ ವೈಕುಂಠಕ್ಕೆ..’ ಚಿತ್ರದಲ್ಲಿ ವರ್ಧನ್‌ ತೀರ್ಥಹಳ್ಳಿ, “ತಿಥಿ” ಖ್ಯಾತಿಯ ಪೂಜಾ, ಬಾಲ ರಾಜವಾಡಿ, ಶಿಬಾ, ಅರುಣ್‌ ಮೂರ್ತಿ, ಸ್ಪಂದನಾ, ಪ್ರಶಾಂತ್‌ ರಾವ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಈ ಹಿಂದೆ “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರವನ್ನು ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಮನುಷ್ಯತ್ವ ಇಲ್ಲದೇ ಬರೀ ಹಣ ಅಂತ ಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ.

ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ಹೇಗಿರುತ್ತದೆ ಎನ್ನುವ ಕಥಾ ಹಂದರ ಈ ಚಿತ್ರದಲ್ಲಿದೆ. ಚಿತ್ರದ ಕಥಾಹಂದರ ಮತ್ತು ಚಿತ್ರದ ಬಹುಭಾಗವನ್ನು ಸ್ಮಶಾಣದಲ್ಲಿ ಚಿತ್ರೀಕರಿಸುತ್ತಿರುವುದರ ಬಗ್ಗೆ ಮಾತನಾಡುವ ನಿರ್ದೇಶಕ ಸಿದ್ಧು, “ಚಿತ್ರದ ಕಥಾಹಂದರವೇ ಹೀಗಿರುವುದರಿಂದ, ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಸ್ಮಶಾನದಲ್ಲಿ ನಡೆಸುತ್ತಿದ್ದೇವೆ.

ಚಿತ್ರೀಕರಣ ನಡೆಯುವ ವೇಳೆ ಕೆಲವು ವಿಚಿತ್ರ ಘಟನೆಗಳು ಅನುಭವಕ್ಕೆ ಬಂದಿದ್ದು, ಇಡೀ ಚಿತ್ರತಂಡ ದೇವರ ಬಳಿ ಮಂತ್ರಿಸಿದ ನಿಂಬೆಹಣ್ಣು ಇಟ್ಟುಕೊಂಡು ಚಿತ್ರೀಕರಣ ನಡೆಸಿದ್ದೇವೆ’ ಎನ್ನುತ್ತಾರೆ. ಚಿತ್ರಕ್ಕೆ ನಿತಿನ್‌ ಛಾಯಾಗ್ರಹಣ ಹಾಗೂ ರಾಜೀವ್‌ ಸಂಕಲನವಿದ್ದು, ಇದೇ ವರ್ಷದ ಕೊನೆಗೆ “ದಾರಿ ಯಾವುದಯ್ಯ ವೈಕುಂಠಕೆ..’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next