ಧಾರವಾಡ: ಇಂದಿನ ರೋಗಗ್ರಸ್ಥ ಸಮಾಜಕ್ಕೆ ಬೇಂದ್ರೆ ಕಾವ್ಯವೇ ಮದ್ದಾಗಿದೆ ಎಂದು ಹಿರಿಯ ನಾಟಕಕಾರ ಪ್ರೊ| ಕೆ.ವೈ. ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಧಾರವಾಡ ಕಟ್ಟೆಯು ಬೇಂದ್ರೆ ಜನ್ಮದಿನ ನಿಮಿತ್ತ ವರ್ಚುವಲ್ ವೇದಿಕೆಯಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬೇಂದ್ರೆ ಕಾವ್ಯದ ಹಿರಿಮೆ, ಭಾಷೆ ಮತ್ತು ಅವರ ಕಾವ್ಯ ಶಕ್ತಿಯ ಕುರಿತು ಮಾತನಾಡಿದರು.
“ಹಬ್ಬಿರುವ ಇರುಳಗತ್ತಲಿನಲ್ಲಿ ಹಕ್ಕಿ ನರಳಿದ ಹಾಗೆ ಒಂದು ನಿಟ್ಟುಸಿರು’ ಗಾಂಧಿ ಸಾವು ಎಂಥ ಘೋರ ಹತ್ಯೆ ಎನ್ನುವುದನ್ನು ಬೇಂದ್ರೆ ಕವಿ ಮನಸ್ಸು ಇಂಥದ್ದೊಂದು ಅದ್ಭುತ ರೂಪಕವನ್ನು ಬಳಸಿ ನೋವಿನಿಂದ ಅಭಿವ್ಯಕ್ತವಾಗುತ್ತದೆ. ಹೇಳುವವನ ಅಹಂಕಾರವನ್ನು ತಗ್ಗಿಸುವ ಮತ್ತು ಅವನಿಗೆ ಹೇಳಿದ್ದರ ಆಚೆಗೂ ಇನ್ನೂ ಹೇಳಬೇಕಾದ್ದು ಇದೆ ಎಂದು ತೋರುವ ಶಕ್ತಿ ಬೇಂದ್ರೆ ಕಾವ್ಯಕ್ಕಿದೆ. ಎಂದೂ ಮುಗಿಯದ ಅಮೃತದ ಸಾಗರದಂತೆ ಬೇಂದ್ರೆ ಕಾವ್ಯವಿದೆ ಎಂದರು.
ಬೇಂದ್ರೆ ಕಾವ್ಯವನ್ನು ಮತ್ತೆ ಮತ್ತೆ ಓದುತ್ತ ಅದನ್ನು ನಮ್ಮದಾಗಿಸಿಕೊಳ್ಳವ ಹವಣಿಕೆಯಲ್ಲಿರುವ ದೊಡ್ಡ ಪಡೆ ಇವತ್ತಿಗೂ ನಮ್ಮ ನಡುವೆ ಇರುವುದು ಬೇಂದ್ರೆ ಕಾವ್ಯದ ಜೀವಂತಿಕೆಯ ಮುಖ್ಯವಾದ ಲಕ್ಷಣವಾಗಿದೆ. ದಶಕಗಳಿಂದಲೂ ಕನ್ನಡ ಕಾವ್ಯ ಲೋಕವನ್ನು ಪ್ರಭಾವಿಸಿದ ಬೇಂದ್ರೆ ಕನ್ನಡ ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಬೇಂದ್ರೆ ಕಾವ್ಯದ ಕುರಿತು ಮಾತನಾಡುವ ಮಾತುಗಳಲ್ಲಿ ತಾನು “ಇದಮಿತ್ತಂ’ ಎಂದು ಈ ಕವಿತೆಯ ಅರ್ಥ ಇದೇ ಎಂದು ಹೇಳುವ ಭಾಷ್ಯವನ್ನು ಇನ್ನೂ ಕನ್ನಡ ವಿಮರ್ಶೆ ತೋರಿಸಿಲ್ಲ ಎನ್ನುವದು ಒಪ್ಪಿತ ಸಂಗತಿಯಾಗಿದೆ. ಬೇಂದ್ರೆ ಭಾಷೆಯನ್ನು ಪಡೆದ ಭಾಷೆ, ಅದೊಂದು ಭಾಗ್ಯಶಾಲಿಯಾದ ಭಾಷೆಯಾಗಿದೆ ಎಂದು ಹೇಳಿದರು.
ವರ್ತಮಾನದಲ್ಲಿ ನಾವು ಅನುಭವಿಸುತ್ತಿರುವ ಹಿಂಸೆ, ಅಪೇಕ್ಷೆ, ವಿರಸ, ದ್ವೇಷಗಳಿಂದ ನಮ್ಮ ನಡುವೆ ಸೃಷ್ಟಿ ಆಗುತ್ತಿರುವ “ಹೇಟ್ರೆಡ್ ಲೋಕವನ್ನು’ ದಾಟಲು ಕಣ್ಣಿನಲ್ಲಿ ಕಣ್ಣಿರಬೇಕು. ಕ್ಷೀರಸಾಗರದ ನಕಾಶೆಯನ್ನು ಬರೆಯಲು ಸಹ ಕಣ್ಣಲ್ಲಿ ಕಣ್ಣಿರಬೇಕು. ಇಂಥ ಸಾಮರ್ಥ್ಯವೇ ನಿಜವಾದ ಕಾವ್ಯ ಸಾಮರ್ಥ್ಯ. ಅದನ್ನು ಬೇಂದ್ರೆ ತಮ್ಮ ಕಾವ್ಯದಲ್ಲಿ ಅನುಸಂಧಾನಗೊಳಿಸಿದ್ದಾರೆ. ಕಾಲಲ್ಲಿ ಕಣ್ಣಿದ್ದವರು ಹೊಸ ಹಾದಿಯಲ್ಲಿ ನಡೆಯಬಲ್ಲರು. ಅಲ್ಲಿ ಹೊಸದೊಂದು ಅನುಭವ ಲೋಕ ಸೃಷ್ಟಿಯಾಗುತ್ತದೆ. ಇದರಲ್ಲಿ ಬೇಂದ್ರೆಯವರಿಗೆ ಗಾಢವಾದ ನಂಬಿಕೆ ಇತ್ತು ಎಂದರು.
ಧಾರವಾಡ ಕಟ್ಟೆ ಅಧ್ಯಕ್ಷ ಪ್ರೊ| ಬಸವರಾಜ ಡೋಣೂರ ಮಾತನಾಡಿ, ನಮ್ಮ ತಿಳಿವಳಿಕೆ ಮತ್ತು ಊಹೆಗೆ ನಿಲುಕದ ಅನೇಕ ವಿಸ್ಮಯಕಾರಿ ಸಂಗತಿಗಳು ಬೇಂದ್ರೆ ಕಾವ್ಯದ ಒಡಲಲ್ಲಿ ಹುದುಗಿವೆ. ಅಂಥದ್ದೊಂದು ಶಕ್ತಿ ಜನ್ಮಜಾತವೇ ಬೇಂದ್ರೆಯವರಲ್ಲಿ ಇತ್ತು. ಕಣ್ಣಿಗೆ ಕಂಡದ್ದನ್ನು ಹೇಳುವವನು ಸಾಮಾನ್ಯ ಕವಿಯಾದರೆ, ಬುದ್ಧಿ ಹಾಗೂ ಭಾವಕ್ಕೆ ನಿಲುಕದ್ದನ್ನೂ ಹೇಳುವವನೇ ಯುಗದ ಕವಿಯಾಗಲು ಸಾಧ್ಯ. ಅಂಥ ಕವಿಗಳಲ್ಲಿ ಬೇಂದ್ರೆ ಪ್ರಮುಖರು ಎಂದು ಹೇಳಿದರು.
ಲೇಖಕರಾದ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ, ಪ್ರೊ| ಮಲ್ಲಿಕಾರ್ಜುನ ಮೇಟಿ, ಪ್ರೊ| ವಿಕ್ರಮ ವಿಸಾಜಿ, ಡಾ| ಆಶಾ ರಬ್, ಡಾ| ಇಂದಿರಾ ಪಾಟೀಲ, ಪುಟ್ಟು ಕುಲಕರ್ಣಿ, ವಸಂತಕುಮಾರ, ವಾಣಿ ಎಸ್., ಸ್ಮಿತಾ ಶೆಟ್ಟರ, ಗೀತಾ ಉಲ್ಲಾಸ, ಡಾ| ರಂಗಸ್ವಾಮಿ ಇನ್ನಿತರರಿದ್ದರು. ಡಾ| ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ವಿಜಯಲಕ್ಷ್ಮೀ ದಾನರಡ್ಡಿ, ಶಿವರಾಜ ಸಣಮನಿ ತಾಂತ್ರಿಕ ನೆರವು ನೀಡಿದರು.