Advertisement

ಯುದ್ಧದಿಂದ ಇಡೀ ಜಗತ್ತಿಗೆ ಹಾನಿ: ಡಾ|ಹೆಗ್ಗಡೆ

09:22 PM Mar 03, 2022 | Team Udayavani |

ಚಿತ್ರದುರ್ಗ: ರಷ್ಯಾ-ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ನಮ್ಮ ದೇಶದ ಮಕ್ಕಳು ಅಲ್ಲಿ ಸಿಲುಕಿದ್ದಾರೆ. ಯುದ್ಧದಿಂದ ಇಂಧನ ದರ ಏರಿಕೆಯಾಗಬಹುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಗುರುವಾರ ಮಂತ್ರಾಲಯಕ್ಕೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈ ಹಿಂದೆ ವಿಶ್ವಶಾಂತಿ ನಮ್ಮ ಊರಿನದಲ್ಲ ಎನ್ನುತ್ತಿದ್ದೆವು. ಆದರೆ ಈಗ ಬೆಂಕಿಯ ಬಿಸಿ ನಮ್ಮ ಬಳಿಗೇ ಬಂದಿದೆ. ಬೆಂಕಿಯ ಕಿಡಿ ಆರದಂತೆ ನೋಡಿಕೊಳ್ಳಬೇಕು. ಏಕೆಂದರೆ ಈಗಾಗಲೇ ಬಿಸಿ ತಟ್ಟಿದೆ ಎಂದರು.

ರಷ್ಯಾ ಯುದ್ಧ ಮಾಡಿದರೆ ನಮಗೇನು ಸಂಬಂಧ ಎನ್ನುವ ಭಾವನೆ ಇತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದೇಶದಲ್ಲಿ ಯುದ್ಧ, ಹಾನಿ ಇನ್ನಿತರ ಚಟುವಟಿಕೆ ನಡೆದರೂ ನಮಗೂ ಅದು ತಟ್ಟುತ್ತದೆ. ಯುದ್ಧ ಉಕ್ರೇನ್‌ನಲ್ಲಲ್ಲ. ಪಕ್ಕದ ಮನೆಯಲ್ಲೇ ನಡೆಯುತ್ತಿದೆ. ತತ್‌ಕ್ಷಣ ಅಲ್ಲಿ ಸಿಲುಕಿರುವ ಮಕ್ಕಳನ್ನು ಕರೆತರುವ ಪ್ರಯತ್ನ ಬಿಟ್ಟು ಬೇರೆ ಆಯ್ಕೆ ಇಲ್ಲ. ಕೇಂದ್ರ ಸರಕಾರ, ಪ್ರಧಾನಿಗಳು ಅಲ್ಲಿರುವ ಮಕ್ಕಳನ್ನು ಕರೆತರಲು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಯುದ್ಧ ಘೋಷಣೆಯಾದ ತಕ್ಷಣ ಹೊರಗೆ ಬಂದಿದ್ದರೆ ಚೆನ್ನಾಗಿತ್ತು. ಎಲ್ಲರೂ ಯುದ್ಧ ಆಗಲಿಕ್ಕಿಲ್ಲ ಎಂಬ ವಿಶ್ವಾಸದಿಂದ ಮುಂದೂಡಿಕೊಂಡು ಬಂದಿದ್ದು, ಅಪಾಯದ ಸ್ಥಿತಿಗೆ ತಂದಿಟ್ಟಿದೆ. ಸುತ್ತಮುತ್ತಲಿನ ರಾಷ್ಟ್ರಗಳಿಗೆ ಇದು ಹರಡಿದರೆ ಕಷ್ಟ. ಸುತ್ತಲಿನ ದೇಶಗಳು ಕೂಡ ಎಚ್ಚರಿಕೆ ವಹಿಸಬೇಕು. ರಷ್ಯಾದ ಉದ್ದೇಶ ಏನು, ಯಾವ ರೀತಿ ಸಾರ್ವಭೌಮತ್ವಕ್ಕೆ ಯತ್ನಿಸುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದಿನ ಯುಎಸ್‌ಎಸ್‌ಆರ್‌ ಆಗಬೇಕು ಎನ್ನುವ ನಿಲುವು ಅವರದ್ದಾಗಿರಬಹುದು. ಯುದ್ಧ ವಿಸ್ತಾರ ಆದರೆ ಭಾರತೀಯರು, ಅಲ್ಲಿನ ವಿದ್ಯಾರ್ಥಿಗಳಿಗೂ ಸಮಸ್ಯೆ ಆಗುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರೇ ನಿರ್ಣಾಯಕರಾಗಿದ್ದು ಬಹಳ ದೊಡ್ಡ ಪಾತ್ರ ವಹಿಸಿದ್ದರು. ಯೌವನದಲ್ಲಿ ಆಸಕ್ತಿ ಬಂದೇ ಬರುತ್ತದೆ. ಯುವಕರನ್ನು ಬಳಸಿಕೊಳ್ಳಬಾರದು ಎನ್ನುವುದು ಸರಿ. ಆದರೆ ಯುವಕರು ಆಸಕ್ತಿ ವಹಿಸಬಾರದು ಎನ್ನುವುದು ಸರಿಯಲ್ಲ. ಆಸಕ್ತಿ ವಹಿಸದಿದ್ದಾಗ ಎಲ್ಲವೂ ಶಾಂತಿ ಮಾರ್ಗದಿಂದ ಆಗುತ್ತದೆ ಎನ್ನಲು ಆಗಲ್ಲ. ವಿದ್ಯಾರ್ಥಿಗಳು ಯಾವುದಕ್ಕೂ ಆಸಕ್ತಿ ವಹಿಸುವುದಿಲ್ಲ ಎನ್ನುವ ದೂರು ಇದೆ. ಅವರ ಭವಿಷ್ಯ, ಓದು, ಉದ್ಯೋಗ ಸೇರಿದಂತೆ ಬಹಳಷ್ಟು ಸ್ವಾರ್ಥಿಗಳಾಗುತ್ತಿದ್ದಾರೆ ಎನ್ನುವ ಅಪವಾದ ಕೂಡ ಇದೆ. ಹೀಗಾಗಿ ವಿದ್ಯಾರ್ಥಿಗಳು ದುರ್ಬಳಕೆ ಆಗಬಾರದು. ಸದ್ಬಳಕೆ ಆಗಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next