Advertisement
ಸದಾಶಿವನಗರ ನಿವಾಸದ ಬಳಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ಕೋವಿಡ್ ಸಮಯದಲ್ಲಿ 1 ಕೋಟಿ ಹಣದ ವಿಚಾರವಾಗಿ ನಾನು ಲೆಕ್ಕ ಕೊಡಲಿ ಎಂದು ಮುಖ್ಯಮಂತ್ರಿಗಳು ಕೇಳಿದರಲ್ಲಾ, ಮೊದಲು ಅವರು ಸರ್ಕಾರದ ವತಿಯಿಂದ ಮಾಡಿದ ಕೆಲಸದ ಲೆಕ್ಕ ಕೊಡಲಿ. ನಾವು ಕೊವಿಡ್ ಸಮಯದಲ್ಲಿ ಮಾಡಿದ ಕೆಲಸ, ನಮ್ಮ ಕಾರ್ಯಕರ್ತರು ಹಾಗೂ ಶಾಸಕರು ಕೊಟ್ಟಿರುವ ಹಣ ಹಾಗೂ ವೆಚ್ಚದ ವಿಚಾರದಲ್ಲಿ ಸರ್ಕಾರ ತನಗೆ ಬೇಕಾದ ಅಧಿಕಾರಿಗಳಿಂದ ತನಿಖೆ ನಡೆಸಲಿ. ನಾವು ರೈತರಿಂದ ತರಕಾರಿ ಖರೀದಿ ಮಾಡಿದ್ದರಿಂದ ಹಿಡಿದು, ಆಹಾರ ಪೊಟ್ಟಣ, ಊಟ, ಆಂಬುಲೆನ್ಸ್, ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸತ್ತ ಕುಟುಂಬಕ್ಕೆ ತಲಾ 1ಲಕ್ಷ ಹಣ ನೀಡಿರುವುದವರೆಗೆ ಎಲ್ಲ ವಿಚಾರಗಳ ಬಗ್ಗೆ ನಿಮಗೆ ಬೇಕಾದ ತನಿಖೆ ಮಾಡಿಸಿ ಎಂದರು.
Related Articles
Advertisement
ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ದರೆ ಅದನ್ನು ಬಹಿರಂಗಪಡಿಸಿ. ಯಾರ ಹೆಸರಾದರೂ ಬರಲಿ. ನನ್ನ ಹೆಸರು ಬಂದರೂ ನೊಟೀಸ್ ನೀಡಿ ಬಂಧಿಸಿ ಎಂದರು.
”ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದ್ದು ಅಮೃತ್ ಪೌಲ್ ಮೇಲೆ ಒತ್ತಡ ಹಾಕಲಾಗುತ್ತಿದೆಯೇ” ಎಂಬ ಪ್ರಶ್ನೆಗೆ, ”ನಮ್ಮ ಜಿಲ್ಲೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಯ ವಿಚಾರಣೆಯನ್ನು ತಡೆದು, ನಂತರ 20-30 ದಿನ ನಂತರ ಅವನನ್ನು ಬಂಧಿಸಿದ್ದಾರೆ. ಇದು ನಮಗೆ ಬಂದಿರುವ ಮಾಹಿತಿ. ನಮಗೆ ಯಾವ ಯಾವ ಇಲಾಖೆಯಲ್ಲಿ ಏನೇನಾಗಿದೆ ಎಂದು ಗೊತ್ತಿದೆ. ಇತರೆ ಇಲಾಖೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಆ ಪ್ರಕರಣ ವಿಚಾರವಾಗಿ ತನಿಖೆ ಮಾಡಿಲ್ಲ ಯಾಕೆ? ಸರ್ಕಾರ, ರಾಜಕಾರಣಿ, ಮಂತ್ರಿಗಳು, ಹಿರಿಯ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಯಾವುದೇ ಪ್ರಕರಣ ನಡೆಯಲು ಸಾಧ್ಯವಿಲ್ಲ ” ಎಂದರು.
ನನಗೆ ಕೆಲವು ಇತಿ ಮಿತಿಗಳಿವೆ
ಸಿದ್ದರಾಮಯ್ಯ ಅವರ ಕಾರ್ಯಕ್ರಮ ವ್ಯಕ್ತಿ ಪೂಜೆ ಅಲ್ಲವೇ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ ಈ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಅನುಕೂಲಕ್ಕೆ ಬೇಕಾಗಿರುವ ಕಾರ್ಯಕ್ರಮಗಳನ್ನು ನಾವು ಚರ್ಚೆ ಮಾಡಿದರೆ ಬಿಜೆಪಿ ಅವರಿಗೆ ಹೊಟ್ಟೆ ಕಿಚ್ಚು ಯಾಕೆ? ಅವರು ಏನಾದರೂ ಹೇಳಲಿ, ಅವರು ನಮ್ಮ ಪಕ್ಷದಲ್ಲಿ ಬಿರುಕು ಮೂಡಿಸಲು ಸಾಧ್ಯವಿಲ್ಲ. ಮೊದಲು ಅವರು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ತೆಗೆದುಹಾಕಲಿ’ ಎಂದರು.
ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ವಿಚಾರವಾಗಿ ಗೊಂದಲದ ಹೇಳಿಕೆ ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, ‘ ಈ ಕುರಿತು ಯಾರನ್ನು ಪ್ರಶ್ನೆ ಮಾಡಬೇಕೋ ಅವರನ್ನು ಕೇಳಿ. ಸೋನಿಯಾ ಗಾಂಧಿ ಅವರು ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು, ನನಗೆ ಕೆಲವು ಇತಿ ಮಿತಿಗಳಿವೆ. ಎಲ್ಲರೂ ಅವರವರ ಇತಿ ಮಿತಿಯಲ್ಲಿ ಕೆಲಸ ಮಾಡಲಿದ್ದಾರೆ’ ಎಂದರು.