Advertisement

ಆಪರೇಷನ್‌ ಕಮಲಕ್ಕೆ ಡಿಕೆಶಿ ತಿರುಗೇಟು 

06:00 AM Dec 05, 2018 | Team Udayavani |

ಬೆಂಗಳೂರು: ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ? ಜಿಂದಾಲ್‌ನಲ್ಲಿ ಏನು ನಡೆಯಿತು, ಬ್ರಿಗೇಡ್‌ ಟವರ್‌ನಲ್ಲಿ ಯಾರು, ಯಾರನ್ನು ಭೇಟಿ ಮಾಡಿದ್ದರು ಎಂಬುದು ಗೊತ್ತಿಲ್ಲವೇ? ಆಪರೇಷನ್‌ ಕಮಲ ಕಾರ್ಯಾಚರಣೆ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪರೋಕ್ಷವಾಗಿ ಬಿಜೆಪಿಯವರನ್ನು ಟೀಕಿಸಿದ್ದು ಹೀಗೆ. ಸದಾಶಿವನಗರದ ತಮ್ಮ ಮನೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದ ಸೂತ್ರ
ಹಿಡಿಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಶಾಸಕರನ್ನು ಖರೀದಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು 
ಅಸ್ಥಿರಗೊಳಿಸಿ, ಬಿಜೆಪಿ ಸರ್ಕಾರ ರಚನೆ ಮಾಡುವ ಪ್ರಯತ್ನ ಎಲ್ಲವೂ ಗೊತ್ತಿದೆ. ದೂರವಾಣಿ ಸಂಭಾಷಣೆ ನಡೆಸಿದವರು ಯಾರು ಎಂಬುದು ತಿಳಿದಿದೆ ಎಂದು ಹೇಳಿದರು.

Advertisement

ಸೋಮವಾರ ರಾತ್ರಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಜಿಂದಾಲ್‌ ಚಿಕಿತ್ಸಾ ಕೇಂದ್ರದಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಡಾ.ಸುಧಾಕರ್‌ ಅವರನ್ನು ಭೇಟಿಯಾಗಿದ್ದಾರೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ, ಬೆಕ್ಕು ಕಣ್ಣು ಮುಚ್ಚಿ ಕೊಂಡು ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ. ಜಿಂದಾಲ್‌ ನಲ್ಲಿ ಏನು ನಡೆಯಿತು. ಯಾರ ಮೇಲೆ ಯಾರು ಒತ್ತಡ ಹೇರಿದರು ಎನ್ನುವುದು ಗೊತ್ತು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. 

ಆಡಿಯೋ ವಿಚಾರವೊಂದರಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ. ಸುಜಿತ್‌ ನನ್ನ ಆಪ್ತ ಸಹಾಯಕ(ಪಿಎ) ಅಲ್ಲ. ಅವರು ಶ್ರೀರಾಮುಲು
ಆಪ್ತ ಸಹಾಯಕ. ನಾವೂ ಸರ್ಕಾರ ನಡೆಸುತ್ತಿದ್ದೇವೆ. ನಮಗೂ ಎಲ್ಲವೂ ತಿಳಿಯುತ್ತದೆ. ಶಾಸಕ ಡಾ.ಸಿ. ಎಸ್‌.ಅಶ್ವಥ್‌ ನಾರಾಯಣ ಅವರು ಬ್ರಿಗೇಡ್‌ ಟವರ್‌ನಲ್ಲಿ ಯಾರನ್ನು ಭೇಟಿ ಮಾಡಿದ್ದರು, ಜನಾರ್ದನ ರೆಡ್ಡಿ ಜಿಂದಾಲ್‌ ಆಸ್ಪತ್ರೆಯಲ್ಲಿ ಸುಧಾಕರ್‌ ಅವರನ್ನು ಏಕೆ ಭೇಟಿ ಮಾಡಿದ್ದರು ಎಂಬುದನ್ನೂ ಬಹಿರಂಗ ಪಡಿಸಲಿ. ಇನ್ನು ನೂರು ಜನರನ್ನು ಭೇಟಿ ಮಾಡಲಿ. ನೂರಾರು ಕೋಟಿ ರೂ.ನೀಡಲಿ. ಆದರೆ, ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು. ಬಿಜೆಪಿ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಶಾಸಕ ಸಿ.ಟಿ.ರವಿಗೆ ಬಿಜೆಪಿಯ ಇನ್ನೊಂದು ಕ್ಯಾಂಪನ್‌ಲ್ಲಿ ಏನಾಗುತ್ತಿದೆ ಎಂಬುದೆಲ್ಲವೂ ಗೊತ್ತಿದೆ.
ಏನಾಗಬೇಕೋ ಎಲ್ಲವೂ ಆಗುತ್ತದೆ. ಎಲ್ಲದಕ್ಕೂ ಕಾಲ ಕೂಡಿ ಬರಲೇಬೇಕು. ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಅವರಿಗೆ ಬೇಕಾದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಟ್ವೀಟ್‌ ಮೂಲಕ ಪ್ರತಿಕ್ರಿಯೆ: ಜನಾರ್ದನ ರೆಡ್ಡಿ ಭೇಟಿ ವಿಚಾರವಾಗಿ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಸುಧಾಕರ್‌, ನಾನು ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿದ್ದೆ, ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂಬುದು ಶುದ್ಧ ಸುಳ್ಳು. ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಜಿಂದಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಮಾಧ್ಯಮಗಳು ಬಿತ್ತರಿಸುತ್ತಿರುವ ಈ ಸುದ್ದಿಯನ್ನು
ನೋಡಿ ನನಗೆ ನಗು ಬರುತ್ತಿದೆ. ನಾನು ಕಾಂಗ್ರೆಸ್‌ ಪಕ್ಷದ ಕಟ್ಟಾಳು, ಪಕ್ಷದ ವಿರುದಟಛಿ ಪಿತೂರಿ ಮಾಡುವವರ ಜತೆ ಎಂದಿಗೂ ಕೈಜೋಡಿಸುವುದಿಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಂಪಿ ಉತ್ಸವ ಸುಮ್ಮನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅಗತ್ಯ ಪೂರ್ವಸಿದ್ಧತೆ ಬೇಕು. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಇದನ್ನು ವಿವಾದ ಮಾಡು ವುದು ಬೇಕಾಗಿಲ್ಲ. 

● ಡಿ.ಕೆ.ಶಿವಕುಮಾರ್‌, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next