Advertisement

ಉಪ ಚುನಾವಣ ಅಖಾಡಕ್ಕೆ ಡಿ.ಕೆ. ಶಿವಕುಮಾರ್‌

10:19 AM Nov 21, 2019 | mahesh |

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಉಪ ಚುನಾವಣೆಯಲ್ಲಿ ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ತಾವು ಪಕ್ಷದಲ್ಲಿ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳಲು ನಿರ್ಧರಿಸಿದ್ದಾರೆ.

Advertisement

ಮಂಗಳವಾರ ಎರಡೂ ಕ್ಷೇತ್ರಗಳ ಉಸ್ತುವಾರಿ ಗಳಾದ ಕೃಷ್ಣ ಬೈರೇಗೌಡ ಮತ್ತು ಶಿವಶಂಕರ ರೆಡ್ಡಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚುನಾವಣ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ಚುನಾವಣೆಗೂ ಮೊದಲೇ ಘೋಷಣೆ ಮಾಡಿದ್ದ ಡಿ.ಕೆ.ಶಿವಕುಮಾರ್‌ ಈಗ ಅಧಿಕೃತವಾಗಿ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ.

ಪ್ರತ್ಯೇಕವಾಗಿ ಪ್ರಚಾರ
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದ ಅಧಿಕೃತ ಉಸ್ತುವಾರಿ ವಹಿಸಿಕೊಳ್ಳದೇ ತಟಸ್ಥರಾಗಿ ಉಳಿದುಕೊಂಡಿದ್ದು, ಸ್ಥಳೀಯ ನಾಯಕರ ಬೇಡಿಕೆ ಆಧಾರದಲ್ಲಿ ಆಯಾ ಕ್ಷೇತ್ರಗಳಿಗೆ ಪ್ರಚಾರಕ್ಕೆ ತೆರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದ ಅನಂತರ ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕ ಎಂದು ಪರೋಕ್ಷವಾಗಿ ಬಿಂಬಿಸಲಾಗುತ್ತಿದ್ದು, ಸಿದ್ದರಾಮಯ್ಯ ವಿರೋಧಿ ಬಣದ ನಾಯಕರು ಮತ್ತು ಕಾರ್ಯಕರ್ತರು ಡಿ.ಕೆ.ಶಿವಕುಮಾರ್‌ ಜತೆಗೆ ಗುರುತಿಸಿಕೊಳ್ಳುತ್ತಿದ್ದು, ಅದೇ ಕಾರಣಕ್ಕೆ ಡಿ..ಕೆ. ಶಿವಕುಮಾರ್‌ ಪಕ್ಷದ ಸಭೆಗಳಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೇ ಖುದ್ದಾಗಿ ಕರೆ ಮಾಡದ ಹೊರತು ಸಭೆಗೆ ಹಾಜರಾಗುತ್ತಿಲ್ಲ ಎನ್ನಲಾಗುತ್ತಿದೆ.

ಇಬ್ಬರು ನಾಯಕರ ಜತೆಗಿನ ಮಾತುಕತೆಯ ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ದ್ರೋಹ ಮಾಡಿದರೆ ಅದು ತಾಯಿಗೆ ದ್ರೋಹ ಮಾಡಿದಂತೆ. ತಾಯಿಗೆ ದ್ರೋಹ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಜನರ ಬಳಿ ಮತ ಪಡೆದು ಅವರಿಗೆ ಮೋಸ ಮಾಡಿದ್ದಾರೆ. ಅವರನ್ನು ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪ್ರಚಾರ ಕೈಗೊಳ್ಳುವ ಕುರಿತು ಪಕ್ಷ ನಿರ್ಧರಿಸುತ್ತದೆ ಎಂದು ಹೇಳುವ ಮೂಲಕ ಡಿಕೆಶಿ ಪ್ರತ್ಯೇಕವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next