Advertisement

ಸಂಕಷ್ಟ ದಲ್ಲಿರುವವರ ಸಮಸ್ಯೆ ಆಲಿಸಿದ ಡಿಕೆಶಿ

06:09 PM Jun 01, 2021 | Team Udayavani |

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ನಗರದ ವಿವಿಧೆಡೆ ಸಂಚರಿಸಿ ಕೋವಿಡ್‌ ಕರ್ಫ್ಯೂ ಪರಿಣಾಮ ಸಂಕಷ್ಟಕ್ಕೊಳಗಾಗಿರುವ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿದರು. ಸರಕಾರದ ಸೌಲಭ್ಯ, ಕೋವಿಡ್‌ ಪ್ಯಾಕೇಜ್‌ ಕುರಿತು ಮಾಹಿತಿ ಪಡೆದರು.

Advertisement

ಬೆಳಗ್ಗೆ ಧಾರವಾಡದಿಂದ ನಗರಕ್ಕೆ ಆಗಮಿಸಿ ನವನಗರದ ಅಲೆಮಾರಿ ಜನಾಂಗದವರ ಗುಡಿಸಲುಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕೋವಿಡ್‌ ಸಂದರ್ಭದಲ್ಲಿ ದುಡಿಮೆ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ದಾನಿಗಳು ನೀಡುತ್ತಿರುವ ಆಹಾರ ಧಾನ್ಯಗಳಿಂದ ಜೀವನ ನಡೆಯುತ್ತಿದೆ. ಸರಕಾರದಿಂದ ಯಾವುದೇ ನೆರವು ದೊರೆತಿಲ್ಲ. ಏನಾದರು ಕೇಳಿದರೆ ನಿಮ್ಮ ದಾಖಲೆಗಳು ಇಲ್ಲ. ಹೀಗಾಗಿ ಯಾವುದೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಇವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡ ಡಿಕೆಶಿ, ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿ ನೀಡುವ ಆಹಾರ ಧಾನ್ಯ ಕಿಟ್‌ ವಿತರಿಸಿ ಆರೋಗ್ಯ ಹಾಗೂ ಧೈರ್ಯದಿಂದ ಇರುವಂತೆ ಹೇಳಿದರು. ನಂತರ ಅಮರಗೋಳದಲ್ಲಿರುವ ಕೆಸಿಸಿ ಬ್ಯಾಂಕ್‌ ಚೇರ¾ನ್‌ ಬಾಪುಗೌಡ ಪಾಟೀಲ ಅವರ ನಿವಾಸಕ್ಕೆ ತೆರಳಿದರು. ಅಲ್ಲಿ ಆಟೋರಿಕ್ಷಾ ಚಾಲಕರು, ದಿನಗೂಲಿ ನೌಕರು, ಸವಿತಾ ಸಮಾಜದ ಪ್ರಮುಖರೊಂದಿಗೆ ಮಾತನಾಡಿದರು. ಕಳೆದ ವರ್ಷದ ಪ್ಯಾಕೇಜ್‌ ಹಂಚಿಕೆ ಕುರಿತು ಮಾಹಿತಿ ಪಡೆದುಕೊಂಡರು. ವಿವಿಧ ಕಾರಣಗಳನ್ನು ಹೇಳಿ ಪರಿಹಾರ ನೀಡಿಲ್ಲ. ಆಟೋರಿಕ್ಷಾಗಳು ಸಂಚರಿಸುವಂತಿಲ್ಲ. ಇದರಿಂದ ಜೀವನ ನಡೆಸಲು ತುಂಬ ಕಷ್ಟವಾಗಿದೆ. ಹೇಗಾದರೂ ಮಾಡಿ ಸರಕಾರದಿಂದ ನಮಗೆ ಪರಿಹಾರ ಕೊಡಿಸಿ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ನಂತರ ಆಟೋರಿಕ್ಷಾ ಚಾಲಕರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆಗೆ ಮಾಡಿದರು. ಉಣಕಲ್ಲ ದುರ್ಗದ ಓಣಿಯಲ್ಲಿರುವ ಉದ್ಯಮಿ ವೀರೇಶ ಉಂಡಿ ಅವರ ನಿವಾಸದ ಬಳಿ ಅಂಗನವಾಡಿ, ಆಶಾ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರು, ಸರಕಾರ ನಮ್ಮಿಂದ ಸರ್ವೇ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದೆ. ಆದರೆ ಈ ಕೆಲಸಕ್ಕೆ ಒಂದಿಷ್ಟು ಗೌರವಧನ ನೀಡಿಲ್ಲ ಎಂದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಉದ್ಯಮಿ ವೀರೇಶ ಉಂಡಿ ತಲಾ 2 ಸಾವಿರ ರೂ. ವಿತರಣೆ ಮಾಡಿದರು. ರೈತಾಪಿ ಕೆಲಸಕ್ಕೆ, ಅಂಗಡಿ, ಎಪಿಎಂಸಿ ಹೋಗುವ ರೈತರ ವಾಹನಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ ಎಂದು ಉಣಕಲ್ಲನ ಕೆಲ ರೈತರು ಡಿ.ಕೆ. ಶಿವಕುಮಾರ ಗಮನಕ್ಕೆ ತಂದರು. ನಂತರ ಉಪಹಾರ ಮುಗಿಸಿಕೊಂಡು ನೂಲ್ವಿ ಗ್ರಾಮದತ್ತ ತೆರಳಿದರು. ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅಲ್ತಾಫ್‌ ಹಳ್ಳೂರು, ಅನೀಲಕುಮಾರ ಪಾಟೀಲ, ನಾಗರಾಜ ಛಬ್ಬಿ, ನಾಗರಾಜ ಗೌರಿ, ರಜತ ಉಳ್ಳಾಗಡ್ಡಿಮಠ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next