ಬೆಂಗಳೂರು: ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ , ಡಿ.ಕೆ.ಶಿವಕುಮಾರ್ ಏನು ಪೊಲೀಸ್ ಠಾಣೆಗಳನ್ನು ಹಸುರೀಕರಣ ಮಾಡುತ್ತಾರಾ? ಏನು ಪಾಕಿಸ್ತಾನ ಮಾಡುತ್ತಾರಾ? ಅವೆಲ್ಲ ನಡೆಯುದಿಲ್ಲ. ಕೇಸರಿಕರಣ ಈ ದೇಶದ, ಧರ್ಮದ ಸಂಕೇತ ಇದೆ. ಕೇಸರಿ ಹಾಕಿಕೊಂಡರೆ ತಪ್ಪೇನಿದೆ. ಕೇಸರಿಕರಣ ವಿರೋಧ ಮಾಡುವವರ ಆಯುಷ್ಯ ಬಹಳ ದಿನ ಹೋಗುವುದಿಲ್ಲ ಎಂದು ಕಿಡಿ ಕಾರಿದರು.
ಕೆಲ ಗ್ಯಾರಂಟಿಗಳಿಂದ ಏನೋ ಒಂದು ಅಚಾನಕ್ ಆರಿಸಿ ಬಂದಿದ್ದಾರೆ. ಗ್ಯಾರಂಟಿ ಮುಗಿದ ಬಳಿಕ ಮತ್ತೆ ಕೇಸರಿಯೆ ಬರುವುದು. 2024 ರಲ್ಲಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ. ಈ ದೇಶ ಹಿಂದುತ್ವ ಆಗುವುದೇ. ಇಂತಹ ನೂರು ಡಿ.ಕೆ.ಶಿವಕುಮಾರ್ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂದರು.
“ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ? ನಮ್ಮ ಸರಕಾರದಲ್ಲಿ ಇದಕ್ಕೆ ಅವಕಾಶ ಇಲ್ಲ. ದಕ್ಷಿಣ ಕನ್ನಡ, ವಿಜಯಪುರ, ಬಾಗಲಕೋಟೆ ಯಲ್ಲಿ ನೀವು ಹೇಗೆ ಕೇಸರಿ ಬಟ್ಟೆ ಧರಿಸಿ ಇಲಾಖೆಗೆ ಅವಮಾನ ಮಾಡಿದ್ದೀರಿ ಎಂಬುದು ಗೊತ್ತಿದೆ. ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪೊಲೀಸ್ ಅಧಿಕಾರಿಗಳನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದರು.