ಬೆಂಗಳೂರು: ನಾನು ಡಿ ಕೆ ಶಿವಕುಮಾರ್ ಅವರನ್ನು ದೆಹಲಿಯ ಆಸ್ಪತ್ರೆಯಲ್ಲಿ ಭೆಟಿ ಮಾಡಿದ್ದೆ. ಇ.ಡಿಯವರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಯಾವ ತಪ್ಪೂ ಮಾಡಿಲ್ಲ. ಅಕೌಂಟ್ ಮಾಡುವಾಗ ಕೆಲವು ತಪ್ಪಾಗಿದೆ. ಇದರ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ಕಾನೂನಿನಡಿ ಹೊರ ಬರುತ್ತೇನೆ ಎಂದು ಡಿಕೆಶಿ ಅವರು ನನ್ನ ಬಳಿ ಹೇಳಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪರಮೇಶ್ವರ್ , ದೆಹಲಿಗೆ ಹೋದ ಮೇಲೆ ಹೈಕಮಾಂಡ್ ಭೇಟಿಯಾಗುವುದು ಸಹಜ. ಹೀಗಾಗಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದೆ. ರಾಜ್ಯ ರಾಜಕಾರಣದ ಬಗ್ಗೆ ಚರ್ಚೆಯಾಯ್ತು. ಸೋನಿಯಾ ಗಾಂಧಿಯವರ ಜೊತೆ ಚರ್ಚೆ ನಡೆಯಿತು. ಡಿಕೆಶಿ ಬಗ್ಗೆ ಸೋನಿಯಾ ಕೂಡ ನೋವು ಹೊರಹಾಕಿದ್ದರು. ನಾವು ಅವರ ಬೆಂಬಲಕ್ಕೆ ಇರಬೇಕು ಅಂತ ಹೇಳಿದ್ದರು ಎಂದರು.
ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಮತ್ತು ನನ್ನ ನಡುವೆ ಶತ್ರುತ್ವವಿಲ್ಲ. ನಾವಿಬ್ಬರೂ ಚೆನ್ನಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗುತ್ತದೆ. ಹೀಗಾಗಿ ಕೆಲವೊಂದು ಷಡ್ಯಂತ್ರ ನಡೆದಿದೆ ಎಂದರು.
ನಾನು ಎಂಟು ವರ್ಷ ಅಧ್ಯಕ್ಷನಾಗಿದ್ದೆ. ಆಗಿನಿಂದಲೂ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರ ಸಂಪುಟದಲ್ಲಿಯೂ ಕೆಲಸ ಮಾಡಿದ್ದೇವೆ. ಕೆಲವೊಂದು ಅಭಿಪ್ರಾಯ ಬೇರೆ ಬೇರೆ ಇರಬಹುದು. ನನ್ನ ಕೆಲವು ಅಭಿಪ್ರಾಯ ಅವರು ಕೇಳದಿರಬಹುದು . ಅವರ ಕೆಲವು ಅಭಿಪ್ರಾಯ ನಾನು ಕೇಳದಿರಬಹುದು. ಆದರೆ ಇಬ್ಬರೂ ಎಲ್ಲೂ ಭಿನ್ನವಾಗಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಬಿಪ್ರಾಯವಿಲ್ಲ ಎಂದರು.
ಮೂಲ ಕಾಂಗ್ರೆಸಿಗ ಮತ್ತು ವಲಸೆ ಕಾಂಗ್ರೆಸಿಗರೆಂಬ ಬೇಧವಿಲ್ಲ. ಹಾಗಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅವರು ಪ್ರತಿಪಕ್ಷ ನಾಯಕರೂ ಆಗುತ್ತಿರಲಿಲ್ಲ. ಮೂಲ ಕಾಂಗ್ರೆಸ್ಸಿಗರು ಹೋರಾಟವನ್ನೇ ಮಾಡುತ್ತಿದ್ದರು. ಅದರೆ ಅಂತಹ ಭಿನ್ನಾಬಿಪ್ರಾಯವಿಲ್ಲ ನಾವೆಲ್ಲ ಒಟ್ಟಿಗೆ ಸೇರಿ ಪಕ್ಷ ಕಟ್ಟಬೇಕು. ಎಲ್ಲರೂ ಸೇರಿಯೇ ಮತ್ತೆ ಅಧಿಕಾರಕ್ಕೆ ಬರಬೇಕು. ಸಾಮೂಹಿಕ ನಾಯಕತ್ವದಿಂದ ಮಾತ್ರ ಎಲ್ಲವೂ ಸಾಧ್ಯ. ಇದನ್ನೇ ಸೋನಿಯಾ ಗಾಂಧಿ ಬಳಿ ಕೂಡ ಚರ್ಚಿಸಿದ್ದೇನೆ ಮಾಜಿ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.