Advertisement

ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ

04:55 PM Jun 19, 2021 | Team Udayavani |

ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ನಿಯಮಾವಳಿ ಉಲ್ಲಂಘಿಸಿ 20 ಸಾವಿರ ಕೋಟಿ ರೂ. ಕಾಮಗಾರಿ ಟೆಂಡರ್ ಕರೆಯಲಾಗಿದೆ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದು, ಈ ಬಗ್ಗೆ ಮೌನ ವಹಿಸುವ ಮೂಲಕ ಮುಖ್ಯಮಂತ್ರಿಗಳು ಈ ಆರೋಪ ನಿಜ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹಗರಣದ ತನಿಖೆಗೆ ಸರಕಾರ ಜಂಟಿ ಸದನ ಸಮಿತಿ ರಚಿಸಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

Advertisement

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರು ಹೇಳುವ ಪಕ್ಷದಲ್ಲಿ ರಾಮಾಯಣ, ಮಹಾಭಾರತ ಎಲ್ಲವೂ ನಡೆಯುತ್ತಿದೆ. ಬಿಜೆಪಿಯ ಯುದ್ಧಕಾಂಡ, ಜನಸಾಮಾನ್ಯರ ಕರ್ಮಕಾಂಡ. ಇದು ಮುಗಿಯದ ನರಕ ಯಾತನೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ನಾನು ಸದನದಲ್ಲಿ ಈ ಬಗ್ಗೆ ಭವಿಷ್ಯ ಹೇಳಿದ್ದೆ. ಈ ಸಮಯದಲ್ಲಿ ಬಿಜೆಪಿಯವರಿಗೆ ಹೆಚ್ಚು ಮಾತನಾಡಲು ನಾವು ಅವಕಾಶ ಕೊಡಬೇಕು. ರಾಜ್ಯಕ್ಕೆ ಅವರೇ ಸಂದೇಶ ನೀಡುತ್ತಿದ್ದಾರೆ. ಅವರು ಆಡಳಿತ ಪಕ್ಷದ ಜನರ ಪ್ರತಿನಿಧಿಗಳು. ಅವರಿಗೆ ನಮಗಿಂತ ಹೆಚ್ಚಿನ ಸತ್ಯ ಗೊತ್ತಿರುತ್ತದೆ. ವಿಶ್ವನಾಥ್ ಅವರು ನೀರಾವರಿ ಇಲಾಖೆ ಅವ್ಯವಹಾರದ ಬಗ್ಗೆ ಮಾಡಿರುವ ಆರೋಪ ಸಂಬಂಧ ನನಗೂ ಮಾಹಿತಿ ಇದೆ. 10 ಕೋಟಿ ರೂ. ಕಾಮಗಾರಿಗೆ 20 ಕೋಟಿ ರೂ. ಅಂದಾಜು ವೆಚ್ಚ ಸಿದ್ಧವಾಗಿದೆ. ಈ ಸರ್ಕಾರ ಬಂದ ಮೇಲೆ ಆರ್ಥಿಕ ಸಮಸ್ಯೆ ಇದ್ದರೂ, ನೀರಾವರಿ ಇಲಾಖೆಯಲ್ಲಿ ಹೇಗೆ ನಿಯಮಗಳ ಉಲ್ಲಂಘನೆ ಮಾಡಿ ಕಾಮಗಾರಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂಬುದೂ ತಿಳಿದಿದೆ ಎಂದರು.

ಇದನ್ನೂ ಓದಿ:ರಾಜೀನಾಮೆ ನೀಡದೆ ಬಿಜೆಪಿಗೆ ಸೇರಿರುವ 10 ಶಾಸಕರನ್ನ ಪಕ್ಷಕ್ಕೆ ಸೇರಿಸಲ್ಲ : ಗುಂಡೂರಾವ್

ಈ ಎಲ್ಲ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ನಾನು ಸುಮ್ಮನಿದ್ದೆ. ಇನ್ನು ಏನೆಲ್ಲಾ ಮಾಡುತ್ತಾರೋ ಮಾಡಲಿ, ಸದನದಲ್ಲಿ ಎಲ್ಲವನ್ನೂ ಒಟ್ಟಿಗೆ ಚರ್ಚೆ ಮಾಡೋಣ ಅಂತಾ ಕಾಯುತ್ತಿದ್ದೆವು. ಈ ಮಧ್ಯದಲ್ಲಿ ವಿಶ್ವನಾಥ್ ಅವರು ರಾಜ್ಯದ ಜನರ ಮುಂದೆ ಈ ವಿಚಾರ ಬಿಚ್ಚಿಟ್ಟಿದ್ದಾರೆ. ಸಿಎಂ ಬಳಿ ಈ ಇಲಾಖೆ ಇದ್ದು, ಈ ಬಗ್ಗೆ ಅವರು ಸ್ಪಷ್ಟನೆ ನೀಡದೇ ಅಧಿಕಾರಿಗಳ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಆ ಮೂಲಕ ಪರೋಕ್ಷವಾಗಿ ಈ ಆರೋಪ ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಬೇಕು. ಬೇಕಾದರೆ ಸಮಿತಿಗೆ ನಿಮ್ಮ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರನ್ನು ಸಮಿತಿಗೆ ಸೇರಿಸಿ. ಈ ವಿಚಾರ ಚರ್ಚಿಸಲು ತಕ್ಷಣ ಅಧಿವೇಶನ ಕರೆಯಿರಿ. ಈಗ ನಿಮ್ಮ ಕುರ್ಚಿ ಬಿಗಿಯಾಗಿದೆ. ಅಧಿವೇಶನ ಕರೆಯಲು ಯಾವುದೇ ಆತಂಕವಿಲ್ಲ. ವಿಮಾನ ನಿಲ್ದಾಣದಿಂದ ಕುಮಾರಕೃಪಾವರೆಗೂ ನಿಮ್ಮ ಸಿನಿಮಾದ ದೃಶ್ಯವನ್ನು ರಾಜ್ಯದ ಜನ ಕಣ್ತುಂಬಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ದೂರವಾಣಿ ಕದ್ದಾಲಿಕೆ ದೂರಿನ ತನಿಖೆಯನ್ನು ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಸಿಬಿಐಗೆ ವಹಿಸಿದ್ದರು. ಈಗ ಅವರದೇ ಪಕ್ಷದ ಬೆಲ್ಲದ್ ಅವರು ಕದ್ದಾಲಿಕೆ ಆರೋಪ ಮಾಡಿರುವಾಗ ಯಾಕೆ ಬೆಂಗಳೂರು ಪೊಲೀಸ್ ಆಯುಕ್ತರಿಂದ ತನಿಖೆ ನಡೆಸುತ್ತಿದ್ದಾರೆ? ನಾನು ಕಮಿಷನರ್ ಅವರು ಒಳ್ಳೆಯ ಕೆಲಸ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅವರು ನಿರೀಕ್ಷೆ ಹುಸಿ ಮಾಡುತ್ತಿದ್ದಾರೆ. ಬಡ್ತಿ ಸಿಕ್ಕ ಕಾರಣ ಅನೇಕ ಕೇಸ್ ಗಳನ್ನು ಮುಚ್ಚಿಹಾಕಲು ತರಾತುರಿಯಲ್ಲಿದ್ದಾರೆ. ಮುಂದೆ ಈ ವಿಚಾರದಲ್ಲಿ ಏನು ಮಾಡಬೇಕೆಂದು ಪಕ್ಷ ತೀರ್ಮಾನಿಸಲಿದೆ ಎಂದಿದ್ದಾರೆ.

ನನ್ನ ದೂರವಾಣಿ ಕರೆ ಕದ್ದಾಲಿಕೆಯಾಗುತ್ತಿದೆ ಎಂದಾಗ ಅಶೋಕ್ ಅವರು ಇದು ಕಾಂಗ್ರೆಸ್ ಸಂಸ್ಕೃತಿ ಎಂದಿದ್ದರು. ಹಾಗಾದ್ರೆ ಬೆಲ್ಲದ್ ಅವರ ದೂರವಾಣಿ ಕರೆ ಕದ್ದಾಲಿಕೆ ಯಾರ ಸಂಸ್ಕೃತಿ? ನನ್ನ ದೂರವಾಣಿ ಕರೆ ಕದ್ದಾಲಿಕೆ ಈ ಕಾಲಕ್ಕೆ ಮುಗಿಯುವುದಿಲ್ಲ. ನನ್ನನ್ನು ಎಷ್ಟು ಸಂಸ್ಥೆಗಳು ಬೆನ್ನತ್ತಿವೆ ಎಂಬ ವಿಚಾರ ಈಗ ಬೇಡ. ಬಿಜೆಪಿಯ ಆಂತರಿಕ ಬಿಕ್ಕಟ್ಟನ್ನು ವಿರೋಧ ಪಕ್ಷದವರು ಬಳಸಿಕೊಳ್ಳುತ್ತಿಲ್ಲ ಅಂತಾ ಸಚಿವ ಈಶ್ವರಪ್ಪನವರೇ ಅಪ್ಪಣೆ ಕೊಡಿಸಿದ್ದಾರೆ. ಇದೆಲ್ಲವನ್ನೂ ನಾವು ಸದನದಲ್ಲೇ ಚರ್ಚೆ ಮಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next