ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುರುವಾರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಭೇಟಿ ಮಾಡಿ ಕೋವಿಡ್ ಕುರಿತು ಚರ್ಚಿಸಿದರು.
ಕರ್ನಾಟಕ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿನ ಕೋವಿಡ್ ದುಸ್ಥಿತಿ. ಸರ್ಕಾರದ ಕ್ರಮ, ಮೂರನೇ ಅಲೆ ಆತಂಕ ಕುರಿತು ಸಮಾಲೋಚನೆ ನಡೆಸಿದರು.
ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಕಾಂಗ್ರೆಸ್ ಯಾವ ರೀತಿ ಕಾರ್ಯಕ್ರಮ ವಿಸ್ತರಿಸಬಹುದು ಎಂಬ ವಿಚಾರವಾಗಿಯೂ ಉಭಯ ನಾಯಕರು ಚರ್ಚಿಸಿದರು ಎಂದು ಹೇಳಲಾಗಿದೆ.
ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಕೋವಿಡ್ ಪರಿಸ್ಥಿತಿಯ ಸತ್ಯಾಂಶ ಮುಚ್ಚಿಟ್ಟು, ಸಾವಿನ ಪ್ರಮಾಣ ಕುರಿತು ಸುಳ್ಳು ಲೆಕ್ಕ ನೀಡುತ್ತಿವೆ ಎಂದು ದೂರಿದರು.
ಬೆಂಗಳೂರು ಹಾಗೂ ಕರ್ನಾಟಕ ಮೆಡಿಕಲ್ ಟೂರಿಸಂ, ಐಟಿ ಹಬ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರಗಳು ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಜಾಗತಿಕ ಮಟ್ಟದಲ್ಲಿ ರಾಜ್ಯದ ಘನತೆ-ಗೌರವ ನಾಶವಾಗಿದೆ. ಕೆಲವು ದೇಶಗಳು ಇಲ್ಲಿಂದ ಹೋಗುವವರಿಗೆ ನಿರ್ಬಂಧ ಹೇರಿವೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ಬಿಜೆಪಿಯ ಸ್ವಾರ್ಥ ರಾಜಕಾರಣ, ದುರಾಡಳಿತ, ಭ್ರಷ್ಟಾಚಾರದಿಂದ ರೈತರು, ಕಾರ್ಮಿಕರ ಬದುಕು ಬೀದಿಪಾಲಾಗಿದೆ. ಅವರಿಗೆ ಸರ್ಕಾರದಿಂದ ಸೂಕ್ತ ನೆರವು ಸಿಕ್ಕಿಲ್ಲ ಎಂದು ತಿಳಿಸಿದರು.