ಬೆಂಗಳೂರು : ಒಂದೇ ಪಕ್ಷದಲ್ಲಿದ್ದರೂ ರಾಜಕೀಯವಾಗಿ ಅಂತರ ಕಾಯ್ದುಕೊಂಡೇ ಇದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕದನ ವಿರಾಮ ಘೋಷಿಸಿ ಒಟ್ಟಾಗಿ ಹೋಗಲು ನಿರ್ಧರಿಸಿದ್ದಾರೆಯೇ ? ಇಂಥದೊಂದು ಅನುಮಾನಕ್ಕೆ ಪುಷ್ಠಿ ನೀಡುವ ಬೆಳವಣಿಗೆ ಶನಿವಾರ ನಡೆದಿದೆ.
ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿರುವ ಪಾಟೀಲರು ಪಕ್ಷದ ಬೆಳವಣಿಗೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಧಿಕಾರ ಗದ್ದುಗೆ ಏರಲು ಎಲ್ಲರೂ ಒಟ್ಟಾಗಿ ಹೋಗುವ ಪ್ರಯತ್ನ ಈಗ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ.
ಸಿದ್ದ ರಾಮಯ್ಯ ಬಣದ ಜತೆ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲ್ ಹಾಗೂ ಶಿವಕುಮಾರ್ ಮಧ್ಯೆ ಒಳ್ಳೆಯ ಸಂಬಂಧವಿರಲಿಲ್ಲ. ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆ ಪ್ರಯತ್ನಕ್ಕೆ ಕೈ ಹಾಕಿ ತಪ್ಪು ಮಾಡಿದೆವು ಎಂದು ಶಿವಕುಮಾರ್ ಹೇಳಿಕೆ ನೀಡಿದ ಬಳಿಕವಂತೂ ಆ ಸಂಬಂಧ ಇನ್ನಷ್ಟು ಹದೆಗೆಟ್ಟಿತ್ತು.
ಇದನ್ನೂ ಓದಿ : ಸಚಿವಾಕಾಂಕ್ಷಿಗಳು ಮತ್ತೆ ಸದ್ದು ಮಾಡುವುದು ನಿಶ್ಚಿತ: ಸಂಪುಟಕ್ಕೆ ಸರ್ಜರಿ ಪಕ್ಕಾ?
ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮಾತನಾಡದಷ್ಟು ಇಬ್ಬರೂ ದೂರವಾಗಿದ್ದರು. ಆದರೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವುದರಿಂದ ಹೈಕಮಾಂಡ್ ಸೂಚನೆ ಮೇರೆ ಗೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪ್ರಯತ್ನಕ್ಕೆ ಶಿವಕುಮಾರ್ ಕೈ ಹಾಕಿದ್ದಾರೆ. ಜತೆಗೆ ಪಾಟೀಲ್ ಪ್ರವಾರ ಸಮಿತಿ ಅಧ್ಯಕ್ಷ ರೂ ಆಗಿರುವುದರಿಂದ ಸಮನ್ವಯ ಸಾಧಿಸಿಕೊಳ್ಳುವುದು ಇಬ್ಬರಿಗೂ ಅನಿವಾರ್ಯವಾಗಿದೆ. ಹೀಗಾಗಿ ಇಬ್ಬರೂ ಚರ್ಚೆಯ ಮೂಲಕ ಬೇಸರ ಸರಿಪಡಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.